ದಕ್ಷಿಣ ಆಫ್ರಿಕಾದ ಬಾರ್ನಲ್ಲಿ ಅಡ್ಡಾದಿಡ್ಡಿ ಗುಂಡು ಹಾರಾಟ: 14 ಮಂದಿ ಸಾವು
ಪೊಲೀಸರು ಸ್ಥಳಕ್ಕೆ ಭೇಟಿ ನೀಡುವ ಹೊತ್ತಿಗೆ 12 ಮಂದಿ ಮೃತಪಟ್ಟಿದ್ದರು. ಗಾಯಗೊಂಡಿದ್ದ 11 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಸೊವೆಟೊ (Soweto of Johannesburg) ಪಟ್ಟಣದಲ್ಲಿ ದುಷ್ಕರ್ಮಿಯೊಬ್ಬ ಅಡ್ಡಾದಿಡ್ಡಿ ಗುಂಡು ಹಾರಿಸಿ 14 ಮಂದಿಯನ್ನು ಕೊಂದಿದ್ದಾನೆ. ಈ ಪಟ್ಟಣವು ದಕ್ಷಿಣ ಆಫ್ರಿಕಾದ ಪ್ರಮುಖ ನಗರ ಜೋಹಾನ್ಸ್ಬರ್ಗ್ ಸಮೀಪವೇ ಇದೆ. ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ನಸುಕಿನವರೆಗೆ ಗುಂಡಿನ ದಾಳಿ ನಡೆದಿದೆ. ನಮಗೆ ನಡುರಾತ್ರಿ 12:30ಕ್ಕೆ ವಿಷಯ ತಿಳಿಯಿತು ಎಂದು ಪೊಲೀಸ್ ಅಧಿಕಾರಿ ಲೆಫ್ಟಿನೆಂಟ್ ಎಲಿಯಾಸ್ ಮಾವೆಲಾ ಹೇಳಿದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡುವ ಹೊತ್ತಿಗೆ 12 ಮಂದಿ ಮೃತಪಟ್ಟಿದ್ದರು. ಗಾಯಗೊಂಡಿದ್ದ 11 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಪೈಕಿ ಇಬ್ಬರು ನಂತರ ಮೃತಪಟ್ಟರು. ಜೊಹಾನ್ಸ್ಬರ್ಗ್ ಹೊರವಲಯದಲ್ಲಿರುವ ಆರ್ಲೆಂಡೊ ಜಿಲ್ಲೆಯಲ್ಲಿ ಸೊವೆಟೊ ಪಟ್ಟಣವಿದೆ.
ಇತ್ತೀಚಿನ ದಿನಗಳಲ್ಲಿ ವಿಶ್ವದ ವಿವಿಧೆಡೆ ಅಡ್ಡಾದಿಡ್ಡಿ ಗುಂಡು ಹಾರಿಸಿ ಜನರನ್ನು ಕೊಲ್ಲುವ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇತ್ತೀಚೆಗಷ್ಟೇ ಜಪಾನ್ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅಮೆರಿಕದ ಟೆಕ್ಸಾಸ್, ನ್ಯೂಯಾರ್ಕ್ ಸೇರಿದಂತೆ ಹಲವೆಡೆ ಗುಂಡಿನ ದಾಳಿ ನಡೆದು ಶಾಲಾ ಮಕ್ಕಳು ಮತ್ತು ಸಾರ್ವಜನಿಕರನ್ನು ಹತ್ಯೆ ಮಾಡಲಾಗಿತ್ತು. ಗುಂಡಿನ ದಾಳಿಯು ಒಂದು ಪಿಡುಗಾಗಿ ಬೆಳೆಯುತ್ತಿರುವುದನ್ನು ಗಮನಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಬಂದೂಕು ಹೊಂದಲು ನಿರ್ಬಂಧ ವಿಧಿಸಲು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.