ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಜನರ ಪರದಾಟ ಮುಂದುವರೆದಿದೆ. ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲದೆ ಕಂಗೆಟ್ಟಿರುವ ಜನರು, ಶ್ರೀಲಂಕಾದ ರಾಜಧಾನಿ ಕೊಲಂಬೋದ ಗ್ಯಾಸ್ ಏಜೆನ್ಸಿ ಕಚೇರಿಗಳ ಎದುರು ಜಮಾಯಿಸಿ, ಪ್ರತಿಭಟನೆಗೆ ಮುಂದಾಗಿದ್ದಾರೆ. ಗ್ಯಾಸ್ ಸಿಲಿಂಡರ್ಗಳಿಗೆ ಆಗ್ರಹಿಸಿ, ಏಜೆನ್ಸಿಗಳ ಎದುರು ಪ್ರತಿಭಟನೆಗೆ ಮುಂದಾದ ಜನರನ್ನು ನಿಯಂತ್ರಿಸಲು ಶ್ರೀಲಂಕಾ ಸರ್ಕಾರ ಸೇನೆಯನ್ನು ನಿಯೋಜಿಸಿದೆ. ಗ್ಯಾಸ್ ಸಿಲಿಂಡರ್ಗಳನ್ನು ಹೊಟೆಲ್ಗಳಿಗೆ ಮತ್ತು ಶ್ರೀಮಂತರಿಗೆ ಮಾತ್ರವೇ ನೀಡುತ್ತಿದ್ದಾರೆ. ಜನಸಾಮಾನ್ಯರಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ಆಕ್ರೋಶ ಹೊರಹಾಕಿದರು. ಹೊಸ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಿ ಯಥಾ ಸ್ಥಿತಿಯನ್ನ ಕಾಪಾಡುವುದಾಗಿ ಅಧಿಕಾರವಹಿಸಿಕೊಂಡ ದಿನವೇ ಹೇಳಿದ್ದರು. ಆದರೆ ಈವರೆಗೆ ಪರಿಸ್ಥಿತಿ ನಿಯಂತ್ರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಕುರಿತು ಮತ್ತಷ್ಟು ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮಹಿಳೆಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, ‘ನೋಡಿ ನಾವು ಬೆಳಿಗ್ಗೆಯಿಂದ ಪಾಳಿಯಲ್ಲಿ ನಿಂತಿದ್ದೇವೆ. ಆದರೂ ನಮಗೆ ಅಡುಗೆ ಅನಿಲ್ ಸಿಲಿಂಡರ್ ಸಿಗುತ್ತಿಲ್ಲ. ಬಹುಶಃ ಹೊಟೆಲ್ಗಳು ಮತ್ತು ಶ್ರೀಮಂತರಿಗೆ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಆಗುತ್ತಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು. ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಪ್ರತಿಭಟೆಯಲ್ಲಿ ಮುಚೂಣಿಯಲ್ಲಿದ್ದಾರೆ. ‘ದಿಯಾವ್ ದಿಯಾವ್ ಗ್ಯಾಸ್ ದಿಯಾವ್’ (ಕೊಡಿ ಕೊಡಿ ಗ್ಯಾಸ್ ಕೊಡಿ) ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ‘ಮನೆಯಲ್ಲಿ ಮಕ್ಕಳಿದ್ದಾರೆ. ಅವರಿಗೆ ಅಡುಗೆ ಮಾಡಿ, ಬಡಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಒಂದು ತಿಂಗಳಿನಿಂದ ಗ್ಯಾಸ್ ಸಿಲಿಂಡರ್ಗಾಗಿ ಪ್ರಯತ್ನಪಡುತ್ತಿದ್ದೇವೆ’ ಎಂದು ಮತ್ತೋರ್ವ ಮಹಿಳೆ ಪ್ರತಿಕ್ರಿಯಿಸಿದರು.
‘ದೇಶದ ಆರ್ಥಿಕ ಬಿಕ್ಕಟ್ಟು ಪರಿಹರಿಸುವುದು. ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ ಮರುಸ್ಥಾಪಿಸುವುದು ನನ್ನ ಆದ್ಯತೆ’ ಎಂದು ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದರು. ‘ಯುವಜನರಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವ ದೇಶವನ್ನು ನಾವು ರೂಪಿಸಬೇಕಿದೆ. ದಿನಕ್ಕೆ ಮೂರು ಹೊತ್ತು ನೆಮ್ಮದಿಯಾಗಿ ಊಟ ಮಾಡಲು ಸಾಧ್ಯವಾಗುವ, ಕ್ಯೂಗಳಲ್ಲಿ ಗಂಟೆಗಟ್ಟಲೆ ನಿಲ್ಲುವ ಪರಿಸ್ಥಿತಿ ಇಲ್ಲದ ದೇಶವನ್ನು ನಾವು ಕಟ್ಟಬೇಕಿದೆ’ ಎಂದು ಅವರು ಹೇಳದರು.
1948ರಲ್ಲಿ ಸ್ವಾತಂತ್ರ್ಯ ಪಡೆದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಶ್ರೀಲಂಕಾ ಇಂದು ಅನುಭವಿಸುತ್ತಿದೆ. ಬೆಲೆ ಏರಿಕೆ ಮತ್ತು ವಿದ್ಯುತ್ ಕಡಿತವು ಶ್ರೀಲಂಕಾದ ಬಹುತೇಕ ಜನರನ್ನು ಬಾಧಿಸುತ್ತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ (ಐಎಂಎಫ್) ಮಾತುಕತೆ ನಡೆಸಿ, ಒಂದಿಷ್ಟು ಪರಿಹಾರ ಪಡೆದುಕೊಳ್ಳಲು ಶ್ರೀಲಂಕಾ ಯತ್ನಿಸುತ್ತಿದೆ. ರಾನಿಲ್ ವಿಕ್ರಮಸಿಂಘೆ ಅವರು ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದನ್ನು ಅತ್ಯಂತ ಕುತೂಹಲದಿಂದ ಗಮನಿಸಲಾಗುತ್ತಿದೆ. ಅಧ್ಯಕ್ಷ ಗೊಟಬಾಯ ರಾಜಪಕ್ಸ ಅಧಿಕಾರದಿಂದ ಕೆಳಗೆ ಇಳಿಯಬೇಕು ಎನ್ನುವುದು ಪ್ರತಿಭಟನಾಕಾರರ ಮುಖ್ಯ ಒತ್ತಾಯವಾಗಿದೆ.
Published On - 10:51 am, Sun, 15 May 22