ಚೆನ್ನೈ: 18ನೇ ಶತಮಾನದಲ್ಲಿ ಅಂದಿನ ತಿರುವಾಂಕೂರು ಸಾಮ್ರಾಜ್ಯದಲ್ಲಿ ಕ್ರೈಸ್ತ (Christian) ಧರ್ಮಕ್ಕೆ ಮತಾಂತರಗೊಂಡಿದ್ದ ದೇವಸಹಾಯಂ (Devasahayam) ಅವರನ್ನು ಇಂದು ವ್ಯಾಟಿಕನ್ (Vatican) ನಲ್ಲಿ ಲಜಾರಸ್ ಸಂತ ಎಂದು ಪೋಪ್ ಫ್ರಾನ್ಸಿಸ್ ಅವರು ಘೋಷಣೆ ಮಾಡಿದರು. ಲಜಾರಸ್ ಎಂದೂ ಕರೆಯಲ್ಪಡುವ ದೇವಸಹಾಯಂ, ವ್ಯಾಟಿಕನ್ “ಹೆಚ್ಚುತ್ತಿರುವ ಕಷ್ಟಗಳನ್ನು ಸಹಿಸಿಕೊಳ್ಳುವುದು” ಎಂದು ಕರೆಯುವ ಸಂತತ್ವವನ್ನು ಪಡೆದ ಮೊದಲ ಭಾರತೀಯ ಸಾಮಾನ್ಯ ವ್ಯಕ್ತಿ ಎಂದು ಕರೆದಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ (Kanyakumari) ಹಿಂದೂ ಮೇಲ್ಜಾತಿ ಕುಟುಂಬದಲ್ಲಿ ನೀಲಕಂದನ್ ಪಿಳ್ಳೈ ಜನಿಸಿದರು. ಅವರು ತಿರುವಾಂಕೂರ್ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದರು. 1745 ರಲ್ಲಿ, ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ದೇವಸಹಾಯಮ್ ಮತ್ತು ಲಾಜರಸ್ ಹೆಸರನ್ನು ಪಡೆದರು. ಅವರು ಜಾತಿ ತಾರತಮ್ಯದ ವಿರುದ್ಧ ಹೋರಾಟಮಾಡಿದ್ದಾರೆ. ಇವರು ಸಾಕಷ್ಟು ಕಿರುಕುಳ ಅನುಭವಿಸಿ ಕೊನೆಗೆ ಕೊಲ್ಲಲ್ಪಟ್ಟರು.
2012 ರಲ್ಲಿ, ವ್ಯಾಟಿಕನ್ ಅವರ ಹುತಾತ್ಮತೆಯನ್ನು ಗುರುತಿಸಿತು. 2013 ರಲ್ಲಿ ಗರ್ಭಾವಸ್ಥೆಯ ಏಳನೇ ತಿಂಗಳಿನಲ್ಲಿ ಮಹಿಳೆಯೊಬ್ಬರಿಗೆ ವೈದ್ಯರು ಆಕೆಯ ಭ್ರೂಣವು “ವೈದ್ಯಕೀಯವಾಗಿ ಸತ್ತಿದೆ” ಎಂದು ಘೋಷಿಸಿದ್ದರು. ಆಗ ಮಹಿಳೆ ದೇವಸಹಾಯಂ ಅವರನ್ನು ಪ್ರಾರ್ಥಿಸಿದ ನಂತರ ಪವಾಡ ಸದೃಶ್ಯದಂತೆ ಗರ್ಭದಲ್ಲಿ ಮಗುವಿನ ಚಲನವಲನ ಆಯಿತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಈ ಪವಾಡ ನಡೆದ ಮೇಲೆ ದೇವಸಹಾಯಂ ಅವರನ್ನು ಸಂತ ಪದವಿಗೆ ಆಯ್ಕೆ ಮಾಡಲಾಯಿತು. ವ್ಯಾಟಿಕನ್ ಇದನ್ನು ಒಪ್ಪಿಕೊಂಡಿತು ಮತ್ತು ದೇವಸಹಾಯವನ್ನು ಸಂತನಾಗಿ ಗುರುತಿಸಿತು.
ಈ ವಿಷಯದಲ್ಲಿ ಕಾರ್ಯನಿರ್ವಹಿಸಿದ್ದ ಕನ್ಯಾಕುಮಾರಿ ತಂಡದ ಪ್ರಮುಖ ಸದಸ್ಯರಾದ ಫಾದರ್ ಜಾನ್ ಕುಳಂದೈ ಅವರು ವ್ಯಾಟಿಕನ್‌ನಲ್ಲಿ ನಡೆದ ಕ್ಯಾನೊನೈಸೇಶನ್‌ನಲ್ಲಿ ಭಾಗವಹಿಸಿ “ಈ ಸಂತತ್ವವು ತಾರತಮ್ಯ ಮುಕ್ತವಾಗಿ ಬದುಕಲು ಮತ್ತು ಜೀವನ ನಡೆಸಲು ನಮಗೆ ಆಹ್ವಾನವಾಗಿದೆ” ಎಂದು ಹೇಳಿದರು.
ವ್ಯಾಟಿಕನ್‌ನ ದೇವಸಹಾಯಂ ಅವರ ಹಿಂದಿನ ಜಾತಿ “ಪಿಳ್ಳೈ” ಎಂದು ಉಲ್ಲೇಖಿಸಿತ್ತು. ಆದರೆ ದೇವಸಹಾಯಂ ಅವರು ಜಾತಿಯ ವ್ಯವಸ್ಥೆ ವಿರುದ್ಧ ಹೋರಾಡಿದವರು. ಹೀಗಾಗಿ ಅವರ ಜಾತಿಯನ್ನು ಉಲ್ಲೇಖಿಸುವುದು ಸರಯಲ್ಲ ಎಂದು ವ್ಯಾಟಿಕನ್‌ನ ಜನರು ಒತ್ತಾಯಿಸಿದಾಗ, ವ್ಯಾಟಿಕನ್ ಅವರ ಜಾತಿಯನ್ನು ತೆಗೆದುಹಾಕಿತು ಎಂದು ಫಾದರ್ ಜಾನ್ ಕುಳಂದೈ ಹೇಳಿದ್ದಾರೆ.
“ಸಂತ ದೇವಸಹಾಯಂ ಸಮಾನತೆಗಾಗಿ ನಿಂತರು ಮತ್ತು ಜಾತಿವಾದ ಮತ್ತು ಕೋಮುವಾದದ ವಿರುದ್ಧ ಹೋರಾಡಿದರು. ಭಾರತವು ಕೋಮುವಾದದ ಉಲ್ಬಣವನ್ನು ಎದುರಿಸುತ್ತಿರುವ ಸಮಯದಲ್ಲಿ ಅವರ ಸಂತತ್ವವು ಬರುತ್ತದೆ” ಎಂದು ನಿವೃತ್ತ ಐಎಎಸ್ ಅಧಿಕಾರಿ ವ್ಯಾಟಿಕನ್‌ಗೆ ಪತ್ರ ಬರೆದು ದೇವಸಹಾಯಂ ಅವರ ಜಾತಿ ಹೆಸರನ್ನು ತೆಗೆದುಹಾಕುವಂತೆ ಕೋರಿದ್ದಾರೆ ಎಂದು ತಿಳಿಸಿದರು. “ಈ ಕ್ಯಾನೊನೈಸೇಶನ್ ಚಾಲ್ತಿಯಲ್ಲಿರುವ ಕೋಮು ವಿಷದ ವಿರುದ್ಧ ನಿಲ್ಲಲು ಚರ್ಚ್‌ಗೆ ಉತ್ತಮ ಅವಕಾಶವಾಗಿದೆ. ಚರ್ಚ್ ಇದನ್ನು ಜನರ ಆಂದೋಲನವನ್ನಾಗಿ ಮಾಡಬೇಕಾಗಿತ್ತು, ಆದರೆ ಅವರು ವಿಫಲರಾದರು ಮತ್ತು ಇದನ್ನು ಪಾದ್ರಿ ಕೇಂದ್ರಿತ ಕಾರ್ಯಕ್ರಮವನ್ನಾಗಿ ಮಾಡಿದರು” ಎಂದು ಅವರು ಮಾತನಾಡಿದರು.