Sri Lanka Economic Crisis: ಅಧ್ಯಕ್ಷರ ನಿವಾಸದಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾಯ್ತು ಎಂದ ಪ್ರತಿಭಟನಾಕಾರರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 10, 2022 | 2:50 PM

ಅಧ್ಯಕ್ಷ ಗೊಟಬಾಯ ರಾಜಪಕ್ಸ  ನಿವಾಸದಲ್ಲಿದ್ದ ಹಣವನ್ನು ಜನರು ಎಣಿಸುತ್ತಿರುವ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

Sri Lanka Economic Crisis: ಅಧ್ಯಕ್ಷರ ನಿವಾಸದಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾಯ್ತು ಎಂದ ಪ್ರತಿಭಟನಾಕಾರರು
ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಜನರ ಆಕ್ರೋಶ
Follow us on

ಕೊಲಂಬೊ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ (Sri Lanka Economic Crisis) ಜನರು ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧ್ಯಕ್ಷ ಗೊಟಬಾಯ ರಾಜಪಕ್ಸ (Gotabaya Rajapaksa) ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಕೋಟ್ಟಿಗಟ್ಟಲೆ ಹಣ ಅಲ್ಲಿತ್ತು ಎಂದು ಹೇಳಿದ್ದಾರೆ. ಅಧ್ಯಕ್ಷ ಗೊಟಬಾಯ ರಾಜಪಕ್ಸ  ನಿವಾಸದಲ್ಲಿದ್ದ ಹಣವನ್ನು ಜನರು ಎಣಿಸುತ್ತಿರುವ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಹಣವನ್ನು ಸಾರ್ವಜನಿಕರು ನಂತರ ಅಧಿಕಾರಿಗಳಿಗೆ ಹಸ್ತಾಂತರಿಸಿದರುಉ ಎಂದು ಕೊಲಂಬೊದ ‘ಡೈಲಿ ಮಿರರ್’ ವರದಿ ಮಾಡಿದೆ. ವಿಡಿಯೊಗಳು ಮತ್ತು ಜನರ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರ ಮನೆಗೆ ನುಗ್ಗಿದ್ದ ನೂರಾರು ಪ್ರತಿಭಟನಾಕಾರರು ರಾಜೀನಾಮೆಗೆ ಆಗ್ರಹಿಸಿದ್ದರು. ಪ್ರತಿಭಟನಾಕಾರರ ಮತ್ತೊಂದು ಗುಂಪು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಮನೆಗೆ ನುಗ್ಗಿತ್ತು. ಗೊಟಬಾಯ ರಾಜಪಕ್ಸ ಎಲ್ಲಿದ್ದಾರೆ ಎಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪ ಅಬೆವರ್ಧನಾ ಅವರೊಂದಿಗೆ ಮಾತನಾಡಿದ್ದ ಶನಿವಾರ ಮಾತನಾಡಿದ್ದ ಗೊಟಬಾಯ ಬುಧವಾರ (ಜುಲೈ 10) ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಶನಿವಾರ ಸಂಜೆ ನಡೆದ ಸರ್ವಪಕ್ಷಗಳ ನಾಯಕರ ಸಭೆಯ ನಂತರ ಸ್ಪೀಕರ್ ಅಭಯವರ್ಧನಾ ಅಧ್ಯಕ್ಷರಿಂದ ರಾಜೀನಾಮೆ ಕೇಳಿದ್ದರು.

ಪ್ರಧಾನಿ ಮತ್ತು ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅಲ್ಲಿನ ಸ್ಪೀಕರ್ ಅವರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ನಂತರ ಎಲ್ಲ ಸಂಸದರೂ ಸಭೆ ಸೇರಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸಹ ಈಗಾಗಲೇ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ. ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಮಣಿದು ಕಳೆದ ಮೇ ತಿಂಗಳಲ್ಲಿ ಗೊಟಬಾಯ ಅವರ ಅಣ್ಣ ಮಹಿಂದಾ ರಾಜಪಕ್ಸ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಎಲ್​ಟಿಟಿಇ ವಿರುದ್ಧದ ಹೋರಾಟದಲ್ಲಿ ದೇಶವನ್ನು ಗೆಲ್ಲಿಸಿದ ನಾಯಕರೆಂದು ಶ್ರೀಲಂಕಾದ ಜನರು ಮಹಿಂದಾ ಮತ್ತು ಗೊಟಬಾಯ ರಾಜಪಕ್ಸ ಅವರನ್ನು ಕೊಂಡಾಡುತ್ತಿದ್ದರು. ಆದರೆ ಇದೀಗ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಇವರೇ ಮೂಲ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗೊಟಬಾಯ ಅವರ ರಾಜೀನಾಮೆ ನಿರ್ಧಾರದಿಂದಾಗಿ ಶ್ರೀಲಂಕಾ ರಾಜಕಾರಣವನ್ನು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಹಿಡಿತದಲ್ಲಿ ಇರಿಸಿಕೊಂಡಿದ್ದ ರಾಜಕೀಯ ಕುಟುಂಬವೊಂದ ತೆರೆಮರೆಗೆ ಸಂದಂತೆ ಆಗಿದೆ.

ಸುಮಾರು 2.2 ಕೋಟಿ ಜನಸಂಖ್ಯೆಯ ಶ್ರೀಲಂಕಾ ಹಿಂದೆಂದೂ ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿದೆ. ವಿದೇಶಿ ಮೀಸಲು ನಿಧಿಯ ಕೊರತೆಯಿಂದಾಗಿ ಅತ್ಯಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ದ್ವೀಪ ರಾಷ್ಟ್ರಕ್ಕೆ ಸಾಧ್ಯವಾಗುತ್ತಿಲ್ಲ. ಶ್ರೀಲಂಕಾದ ವಿದೇಶಿ ಸಾಲ 51 ಶತಕೋಟಿ ಡಾಲರ್​ನಷ್ಟಿದೆ. ಈ ವರ್ಷ ಮರುಪಾವತಿ ಮಾಡಬೇಕಿದ್ದ 7 ಶತಕೋಟಿ ಡಾಲರ್ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಸರ್ಕಾರ ಘೋಷಿಸಿದೆ.

Published On - 2:48 pm, Sun, 10 July 22