ಶ್ರೀಲಂಕಾದಲ್ಲಿ ಪ್ರತಿಭಟನೆ
ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಬಿಕ್ಕಟ್ಟಿಗೆ ತುರ್ತು ಪರಿಹಾರ ಹುಡುಕುವ ದೃಷ್ಟಿಯಿಂದ ಪಕ್ಷಭೇದ ಮರೆತು ಒಂದೇ ಸರ್ಕಾರ ರಚಿಸಬೇಕು ಎಂಬ ಅಧ್ಯಕ್ಷ ಗೊಟಬಾಯ ರಾಜಪಕ್ಸ ಕರೆಯನ್ನು ವಿರೋಧ ಪಕ್ಷಗಳು ತಿರಸ್ಕರಿಸಿವೆ. ಈ ಬೇಡಿಕೆಯನ್ನೇ ಒಂದು ಸಂಚು ಎಂದು ಹೇಳಿರುವ ವಿರೋಧ ಪಕ್ಷಗಳ ನಾಯಕರು, ಇಂಥ ಪ್ರಯತ್ನಕ್ಕೆ ನಾವು ಕೈ ಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು.
- ವಿರೋಧ ಪಕ್ಷಗಳನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ಪ್ರಸ್ತಾವವನ್ನು ಶ್ರೀಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸ ತಿರಸ್ಕರಿಸಿದ್ದಾರೆ. ಇದು ಮೂರ್ಖತನದ ನಿರ್ಧಾರವಾಗುತ್ತದೆ. ಇದರ ಬದಲಿಗೆ ಅಧ್ಯಕ್ಷರು ರಾಜೀನಾಮೆ ನೀಡಬೇಕು. ದೇಶವನ್ನು ಬಿಕ್ಕಟ್ಟಿಗೆ ದೂಡಿದ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿವೆ.
- ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಆರಂಭವಾದ ನಂತರ ಪರಿಸ್ಥಿತಿ ನಿರ್ವಹಿಸಲು ಕಷ್ಟಪಟ್ಟ ಶ್ರೀಲಂಕಾ ಅಧ್ಯಕ್ಷರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಶ್ರೀಲಂಕಾದ ಸಂಸತ್ತು ಸಭೆ ಸೇರಲಿದೆ. ಇಂದಿನಿಂದ ಕಲಾಪ ಆರಂಭವಾಗಲಿದೆ.
- ಶ್ರೀಲಂಕಾದ ಹಲವು ಸಚಿವರು ರಾಜೀನಾಮೆ ನೀಡಿರುವುದರಿಂದ ಸರ್ಕಾರ ನಡೆಸುವುದು ಕಷ್ಟವಾಗುತ್ತಿದೆ. ಹೀಗಾಗಿ ಅಧ್ಯಕ್ಷರು ನಾಲ್ವರು ಸಚಿವರಿಗೆ ವಿಶೇಷ ಹೊಣೆಗಾರಿಕೆ ನೀಡಿ, ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗುವವರೆಗೂ ಸರ್ಕಾರದಲ್ಲಿ ಸ್ಥಿರತೆ ತರಬೇಕು ಎನ್ನುವ ಹೊಣೆಗಾರಿಕೆ ವಹಿಸಿದ್ದಾರೆ.
- ದೇಶದಲ್ಲಿ ಅತ್ಯಗತ್ಯ ಔಷಧಗಳ ಕೊರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರವು ಮಂಗಳವಾರ (ಏಪ್ರಿಲ್ 5) ಆರೋಗ್ಯ ತುರ್ತುಸ್ಥಿತಿ ಘೋಷಣೆ ಮಾಡಿದೆ.
- ದೇಶವನ್ನು ಸಂಕಷ್ಟ ದೂಡಿದ ರಾಜಪಕ್ಸ ಕುಟುಂಬದ ವಿರುದ್ಧ ಜನರಲ್ಲಿ ತೀವ್ರ ಆಕ್ರೋಶ ಮಡುಗಟ್ಟಿದೆ. ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯಿಂದಾಗಿ ದೇಶದ ವಿದೇಶಿ ಮೀಸಲು ನಿಧಿ ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಆಮದು ಮಾಡಿಕೊಂಡ ವಸ್ತುಗಳಿಗೆ ಪಾವತಿಸಲು ಹಣ ಹೊಂದಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.
- ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್ ಗವರ್ನರ್ ಅಜಿತ್ ಕಾರ್ಬಾಲ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಚಿವ ಸಂಪುಟದ ಎಲ್ಲ ಸದಸ್ಯರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಬಿಕ್ಕಟ್ಟು ಶಮನಕ್ಕಾಗಿ ಹೊಸ ಆಡಳಿತ ವ್ಯವಸ್ಥೆ ರೂಪಿಸಲು ಕರೆ ನೀಡಿದ್ದಾರೆ.
- ಭಾನುವಾರ ರಾತ್ರಿ ಅಧ್ಯಕ್ಷ ಗೊಟಬಾಯ ರಾಜಪಕ್ಸ ಮತ್ತು ಅವರ ಅಣ್ಣ ಪ್ರಧಾನಿ ಮಹಿಂದಾ ರಾಜಪಕ್ಸ ಹೊರತುಪಡಿಸಿ ಉಳಿದೆಲ್ಲ 26 ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
- ಶ್ರೀಲಂಕಾದಲ್ಲಿ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸುವಂತೆ ಇಂಟರ್ನೆಟ್ ಸೇವಾದಾತರಿಗೆ ಸರ್ಕಾರವು ಸೂಚನೆ ನೀಡಿತ್ತು. ಫೇಸ್ಬುಕ್, ವಾಟ್ಸ್ಆ್ಯಪ್, ಟ್ವಿಟರ್ ಮತ್ತು ಯುಟ್ಯೂಬ್ಗಳೂ ಕಾರ್ಯನಿರ್ವಹಿಸುತ್ತಿರಲಿಲ್ಲ. ಭಾನುವಾರದ ಸಂಜೆಯ ನಂತರ ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧ ತೆರವುಗೊಳಿಸಲಾಗಿತ್ತು.
- ಭಾರತವು ಇತ್ತೀಚೆಗಷ್ಟೇ 1 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದಷ್ಟು ಲೈನ್ ಆಫ್ ಕ್ರೆಡಿಟ್ ಮಾದರಿಯ ಸಾಲವನ್ನು ಶ್ರೀಲಂಕಾಕ್ಕೆ ಘೋಷಿಸಿತ್ತು. ಈ ಮೊದಲು, ಅಂದರೆ ಕಳೆದ ಫೆಬ್ರುವರಿಯಲ್ಲಿ ಸಹ 500 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದಷ್ಟು ಲೈನ್ ಆಫ್ ಕ್ರೆಡಿಟ್ ನೀಡಿತ್ತು.
- ಶ್ರೀಲಂಕಾದಲ್ಲಿ ಪ್ರಸ್ತುತ ಆಹಾರ, ಇಂಧನ ಮತ್ತು ಇತರ ಅತ್ಯಗತ್ಯ ವಸ್ತುಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ಮುಟ್ಟಿದೆ. ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ವಿಶ್ವ ಹಣಕಾಸು ನಿಧಿಯಿಂದ ಸಹಾಯ ಧನವನ್ನು ಶ್ರೀಲಂಕಾ ಕೋರುತ್ತಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಎದುರು ಅಧಿಕಾರಿಗಳ ಕಳವಳ: ರಾಜ್ಯಗಳು ಕೊಡುವ ಉಚಿತ ಗಿಫ್ಟ್ ನಿಂದ ಶ್ರೀಲಂಕಾದ ಹಾದಿಯಲ್ಲಿ ಭಾರತ!
ಇದನ್ನೂ ಓದಿ: Sri Lanka crisis ಸಹೋದರ ಬೆಸಿಲ್ ರಾಜಪಕ್ಸಯನ್ನು ಹಣಕಾಸು ಸಚಿವ ಸ್ಥಾನದಿಂದ ವಜಾ ಮಾಡಿದ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ