Sri Lanka Crisis: ಪ್ರವಾಸಿ ತಾಣದಂತಾದ ಶ್ರೀಲಂಕಾ ಅಧ್ಯಕ್ಷರ ನಿವಾಸ; ಮನೆಯೊಳಗೆ ನುಗ್ಗಿ ಸಂಭ್ರಮಿಸಿದ ಪ್ರತಿಭಟನಾಕಾರರು

| Updated By: ರಶ್ಮಿ ಕಲ್ಲಕಟ್ಟ

Updated on: Jul 10, 2022 | 5:16 PM

ಕೆಲವು ಜನರು ಅಧ್ಯಕ್ಷರ ಮನೆಯಲ್ಲಿ ಚಹಾ ತಯಾರಿಸಿದರು. ಇನ್ನು ಕೆಲವರು ಕಾನ್ಫರೆನ್ಸ್ ರೂಂನಲ್ಲಿ ಹೇಳಿಕೆಗಳನ್ನು ನೀಡಿ ಪ್ರಧಾನಿ ಮತ್ತು ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ

Sri Lanka Crisis: ಪ್ರವಾಸಿ ತಾಣದಂತಾದ ಶ್ರೀಲಂಕಾ ಅಧ್ಯಕ್ಷರ ನಿವಾಸ; ಮನೆಯೊಳಗೆ ನುಗ್ಗಿ ಸಂಭ್ರಮಿಸಿದ ಪ್ರತಿಭಟನಾಕಾರರು
ಶ್ರೀಲಂಕಾ ಅಧ್ಯಕ್ಷರ ಮನೆ
Follow us on

ಕೊಲಂಬೊದಲ್ಲಿರುವ (Colombo) ಶ್ರೀಲಂಕಾ (Sri Lanka) ಅಧ್ಯಕ್ಷ ಗೊಟಬಾಯ ರಾಜಪಕ್ಸ(Gotabaya Rajapaksa) ಅವರ ಮನೆಗೆ ಶನಿವಾರ ಪ್ರತಿಭಟನಾಕಾರರು ನುಗ್ಗಿದ್ದಾರೆ. ಇದಾದ ನಂತರ ಇಂದು (ಭಾನುವಾರ) ಅಧ್ಯಕ್ಷರ ಮನೆ ಪಿಕ್​​​​​ನಿಕ್ ಸ್ಪಾಟ್​​ನಂತಾಗಿದೆ. ಮನೆಯೊಳಗೆ ಜನರು ಸಾಲಾಗಿ ಬರುತ್ತಿದ್ದು ಕೆಲವರು ಬಾಲ್ಕನಿಯಲ್ಲಿ ಅಡ್ಡಾಡುತ್ತಿದ್ದಾರೆ .ಇನ್ನು ಕೆಲವರು ಬೆಡ್ ರೂಂನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಜಿಮ್​​ನಲ್ಲಿ ವರ್ಕೌಟ್ ಮಾಡಿದರೆ ಇನ್ನು ಕೆಲವರು ಸ್ವಿಮಿಂಗ್​​​ ಪೂಲ್​​ನಲ್ಲಿ ಈಜಾಡುತ್ತಿರುವ ದೃಶ್ಯ ಕಂಡು ಬಂದಿದೆ. ದುಬಾರಿ ಕಾರುಗಳ ಮುಂದೆ ಜನರು ಸೆಲ್ಫಿ ಕ್ಲಿಕ್ಕಿಸುತ್ತಿರುವುದೂ ಇಲ್ಲಿ ಕಂಡುಬಂತು ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ 74 ವರ್ಷಗಳಿಂದ ಅವರು ನಮ್ಮ ಜನರು ಮತ್ತು ಹಕ್ಕುಗಳನ್ನು ದಮನಿಸುತ್ತಿದ್ದರು. ಅದಕ್ಕಾಗಿ ನಾವು ಕಪ್ಪು ಧ್ವಜವನ್ನು ಹಿಡಿದು ಅಸಮಾಧಾನ ಸೂಚುಸುತ್ತಿದ್ದೇವೆ. ಮಿಲಿಟರಿ ಪಡೆ ಮೂಲಕ ಅವರು ನಮ್ಮನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಕಪ್ಪು ಧ್ವಜ ಹಿಡಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಯುವ ಜನಾಂಗ ಈ ವ್ಯವಸ್ಥೆಯ ವಿರುದ್ಧ ದನಿಯೆತ್ತಿದೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.


ಕೆಲವು ಜನರು ಅಧ್ಯಕ್ಷರ ಮನೆಯಲ್ಲಿ ಚಹಾ ತಯಾರಿಸಿದರು. ಇನ್ನು ಕೆಲವರು ಕಾನ್ಫರೆನ್ಸ್ ರೂಂನಲ್ಲಿ ಹೇಳಿಕೆಗಳನ್ನು ನೀಡಿ ಪ್ರಧಾನಿ ಮತ್ತು ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಕೊಲಂಬೊದಲ್ಲಿ ಜನ ಪ್ರವಾಹವೇ ಅಧ್ಯಕ್ಷರ ಮನೆಗೆ ನುಗ್ಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.ಕೆಲವು ಪ್ರತಿಭಟನಾಕಾರರು ಶ್ರೀಲಂಕಾದ ಧ್ವಜ ಹಿಡಿದು ಹೆಲ್ಮೆಟ್ ಧರಿಸಿ ಅಧ್ಯಕ್ಷರ ಮನೆಗೆ ನುಗ್ಗುತ್ತಿರುವುದನ್ನು ಸ್ಥಳೀಯ ಟಿವಿ ನ್ಯೂಸ್ ನ್ಯೂಸ್ ಫಸ್ಟ್ ಚಾನೆಲ್ ತೋರಿಸಿದೆ.


ಮನೆಯ ಆವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು ಸ್ವಿಮಿಂಗ್ ಪೂಲ್ ನಲ್ಲಿ ಈಜಾಡುತ್ತಿರುವ ವಿಡಿಯೊ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಏತನ್ಮಧ್ಯೆ, ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಎಲ್ಲ ಜನರು ಪೊಲೀಸರ ಮತ್ತು ಸಶಸ್ತ್ರಪಡೆಗೆ ಬೆಂಬಲ ನೀಡಬೇಕು ಎಂದು ಸಿಡಿಎಸ್ ಜರಲ್ ಶವೇಂದ್ರ ಸಿಲ್ವ ಮನವಿ ಮಾಡಿದ್ದಾರೆ.

ಶನಿವಾರ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಮನೆಗೆ ಬೆಂಕಿ ಹಚ್ಚಿದ್ದಾರೆ. ಹಲವಾರು ಪತ್ರಕರ್ತರ ಮೇಲೂ ಹಲ್ಲೆಗಳು ನಡೆದಿವೆ ಎಂದು ಡೈಲಿ ಮಿರರ್ ವರದಿ ಮಾಡಿದೆ.