ಕೊಲಂಬೊ: ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಶ್ರೀಲಂಕಾದ (Srilanka Economic Crisis) ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ (Ranil Wikramasinghe) ಗುರುವಾರ (ಮೇ 12) ಅಧಿಕಾರ ಸ್ವೀಕರಿಸಿದರು. ವಿವಿಧ ದೇಶಗಳ ಮುಂಚೂಣಿ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ರನಿಲ್, ಶ್ರೀಲಂಕಾದ ಪ್ರಸ್ತುತ ಬಿಕ್ಕಟ್ಟನ್ನು ಶಮನಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಲ್ಲಿನ ಜನರು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೆ ಬಂದಿದ್ದ ಮಹಿಂದಾ ರಾಜಪಕ್ಸ ಆರ್ಥಿಕ ಬಿಕ್ಕಟ್ಟು ನಿರ್ವಹಿಸಲಾಗದೆ ರಾಜೀನಾಮೆ ನೀಡಿದ್ದರು. ಮಹಿಂದಾ ವಿರುದ್ಧ ಶ್ರೀಲಂಕಾದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.
ಶ್ರೀಲಂಕಾ ಬಿಕ್ಕಟ್ಟು ಕುರಿತು ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಆಡಳಿತ ಪಕ್ಷವಾಗಿರುವ ಶ್ರೀಲಂಕಾ ಪೊಡೊಜನ ಪೆರಮುನ (Sri Lanka Podujana Peramuna – SLPP) ಮತ್ತು ಮುಖ್ಯ ಪ್ರತಿಪಕ್ಷ ಸಮಾಗಿ ಜನ ಬಳವೆಗಾಯ (Samagi Jana Balawegaya – SJB) ಪಕ್ಷಗಳು ರನಿಲ್ ಅವರಿಗೆ ಸಂಸತ್ತಿನಲ್ಲಿ ವಿಶ್ವಾಸಮತ ಗೆಲ್ಲಲು ಬೆಂಬಲ ನೀಡಲುವುದಾಗಿ ಘೋಷಿಸಿವೆ. ಶ್ರೀಲಂಕಾದ ಅತ್ಯಂತ ಹಳೆಯ ಪಕ್ಷವಾದ ಯುನೈಟೆಡ್ ನ್ಯಾಷನಲ್ ಪಾರ್ಟಿ (United National Party – UNP) ನಾಯಕರಾದ ರನಿಲ್ ವಿಕ್ರಮಸಿಂಘೆ ಅವರ ಪಕ್ಷವು ಕಳೆದ ಚುನಾವಣೆಯಲ್ಲಿ ಸೋತಿತ್ತು. ಕೊಲಂಬೊದಿಂದ ಚುನಾವಣೆ ಎದುರಿಸಿದ್ದ ಸ್ವತಃ ರನಿಲ್ ಸಹ ಸೋತಿದ್ದರು.
ಶ್ರೀಲಂಕಾದ 26ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರನಿಲ್ ವಿಕ್ರಮಸಿಂಘೆ, ಸಾಲದ ಸುಳಿಗೆ ಸಿಲುಕಿರುವ ದೇಶದಲ್ಲಿ ಸ್ಥಿರತೆ ಮೂಡಿಸುವ ಭರವಸೆ ನೀಡಿದರು. ನೂತನ ಪ್ರಧಾನಿಯನ್ನು ಅಭಿನಂದಿಸಿರುವ ಭಾರತ ಸರ್ಕಾರವು ಶ್ರೀಲಂಕಾದ ಜನರಿಗೆ ನೆರವಾಗುವ ನಮ್ಮ ಬದ್ಧತೆ ಮುಂದುವರಿಯುತ್ತದೆ. ದ್ವೀಪ ರಾಷ್ಟ್ರದ ಸಮಸ್ಯೆಗಳು ಶೀಘ್ರ ಪರಿಹಾರವಾಗಲಿ ಎಂದು ಆಶಯ ವ್ಯಕ್ತಪಡಿಸಿದೆ.
ವಕೀಲರಾಗಿದ್ದ ರನಿಲ್ ವಿಕ್ರಮಸಿಂಘೆ ಅವರಿಗೆ ಇದೀಗ 73 ವರ್ಷ. ಕಳೆದ 45 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದಾರೆ. ಈ ಮೊದಲು ನಾಲ್ಕು ಬಾರಿ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿದ್ದರು. ಅಕ್ಟೋಬರ್ 2018ರಂದು ರನಿಲ್ ಅವರನ್ನು ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಪ್ರಧಾನಿ ಸ್ಥಾನದಿಂದ ವಜಾ ಮಾಡಿದ್ದರು. ಆದರೆ 2 ತಿಂಗಳ ನಂತರ ಮತ್ತು ಪುನರ್ ನಿಯೋಜನೆ ಮಾಡಲಾಗಿತ್ತು.
ದೂರದೃಷ್ಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರಸಕ್ತ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಬಲ್ಲರು. ಅಂತರರಾಷ್ಟ್ರೀಯ ಸಮುದಾಯದ ವಿಶ್ವಾಸ ಗಳಿಸಿ, ದೇಶವನ್ನು ಮತ್ತೆ ಸಹಜತೆಯ ಹಳಿಗೆ ತರಬಲ್ಲರು ಎಂದು ಜನರು ನಿರೀಕ್ಷಿಸುತ್ತಿದ್ದಾರೆ.
ಈ ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಲಿಂಕ್: Ranil Wickremesinghe takes oath as new PM
Published On - 7:07 am, Fri, 13 May 22