ಶ್ರೀಲಂಕಾದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿಗೆ ಧನ್ಯವಾದ ಹೇಳಿದ ರನಿಲ್ ವಿಕ್ರಮಸಿಂಘೆ

ಶ್ರೀಲಂಕಾದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿಗೆ ಧನ್ಯವಾದ ಹೇಳಿದ ರನಿಲ್ ವಿಕ್ರಮಸಿಂಘೆ
ರನಿಲ್ ವಿಕ್ರಮಸಿಂಘೆ

ದೇಶದ ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸಲು ಮತ್ತು ರಾಜಕೀಯ ಪ್ರಕ್ಷುಬ್ಧತೆ ಕೊನೆಗೊಳಿಸಲು ಶ್ರೀಲಂಕಾದ 26ನೇ ಪ್ರಧಾನಿಯಾಗಿ 73 ವರ್ಷದ ರನಿಲ್ ವಿಕ್ರಮಸಿಂಘೆ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

TV9kannada Web Team

| Edited By: Rashmi Kallakatta

May 13, 2022 | 8:12 PM

ಕೊಲಂಬೊ: ಶ್ರೀಲಂಕಾದ (Sri Lanka) ನೂತನ ಪ್ರಧಾನಿ ರನಿಲ್ ವಿಕ್ರಮಸಿಂಘೆ (Ranil Wickremesinghe) ಅವರು ತಮ್ಮ ಅವಧಿಯಲ್ಲಿ ಭಾರತದೊಂದಿಗೆ ನಿಕಟ ಬಾಂಧವ್ಯವನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು ಸ್ವಾತಂತ್ರ್ಯದ ನಂತರದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಕ್ಕೆ ಆರ್ಥಿಕ ನೆರವು ನೀಡಿದ ಭಾರತಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ದೇಶದ ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸಲು ಮತ್ತು ರಾಜಕೀಯ ಪ್ರಕ್ಷುಬ್ಧತೆ ಕೊನೆಗೊಳಿಸಲು ಶ್ರೀಲಂಕಾದ 26ನೇ ಪ್ರಧಾನಿಯಾಗಿ 73 ವರ್ಷದ ರನಿಲ್ ವಿಕ್ರಮಸಿಂಘೆ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ನಾನು ನಿಕಟ ಸಂಬಂಧವನ್ನು ಬಯಸುತ್ತೇನೆ ಮತ್ತು ನಾನು ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ವಿಕ್ರಮಸಿಂಘೆ ಅವರು ತಮ್ಮ ದೇಶಕ್ಕೆ ಭಾರತದ ಆರ್ಥಿಕ ಸಹಾಯವನ್ನು ಉಲ್ಲೇಖಿಸಿ ಹೇಳಿದರು. ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾತ್ರಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತವು ಈ ವರ್ಷದ ಜನವರಿಯಿಂದ ಸಾಲ, ಕ್ರೆಡಿಟ್ ಲೈನ್‌ಗಳು ಮತ್ತು ಕ್ರೆಡಿಟ್ ಸ್ವಾಪ್‌ಗಳಲ್ಲಿ ಋಣಭಾರದಲ್ಲಿರುವ ಶ್ರೀಲಂಕಾಕ್ಕೆ 3 ಶತಕೋಟಿ ಯುಎಸ್​​ಡಿ ನೆರವು ನೀಡಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಅನುಗುಣವಾಗಿ ರಚನೆಯಾದ ಶ್ರೀಲಂಕಾದ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಭಾರತ ಹೇಳಿದ್ದು ದ್ವೀಪ ರಾಷ್ಟ್ರದ ಜನರಿಗೆ ಭಾರತದ ಬದ್ಧತೆ ಮುಂದುವರಿಯುತ್ತದೆ ಎಂದು ಹೇಳಿದೆ.

ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಹಿರಿಯ ಸಹೋದರ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ 73 ವರ್ಷದ ಯುನೈಟೆಡ್ ನ್ಯಾಶನಲ್ ಪಾರ್ಟಿ (ಯುಎನ್‌ಪಿ) ನಾಯಕ ಅವರು ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಸರ್ಕಾರ ವಿರೋಧಿ ಪ್ರತಿಭಟನಾಕರರ ಮೇಲೆ ರಾಜಪಕ್ಸೆ ಬೆಂಬಲಿಗರು ದಾಳಿ ನಡೆಸಿದ್ದು, ಈ ಹಿಂಸಾಚಾರದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. 200 ಮಂದಿಗೆ ಗಾಯಗಳಾಗಿವೆ.

ಪ್ರಧಾನಿ ವಿಕ್ರಮಸಿಂಘೆ ಅವರು ತಮ್ಮ ಗಮನ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವುದಕ್ಕೆ ಸೀಮಿತವಾಗಿದೆ ಎಂದು ಹೇಳಿದರು.”ಜನರಿಗೆ ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಾನು ಈ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತೇನೆ” ಎಂದು ಪ್ರಧಾನಿ ವಿಕ್ರಮಸಿಂಘೆ ಹೇಳಿದರು.

ಶ್ರೀಲಂಕಾದ 26ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರನಿಲ್ ವಿಕ್ರಮಸಿಂಘೆ, ಸಾಲದ ಸುಳಿಗೆ ಸಿಲುಕಿರುವ ದೇಶದಲ್ಲಿ ಸ್ಥಿರತೆ ಮೂಡಿಸುವ ಭರವಸೆ ನೀಡಿದರು. ನೂತನ ಪ್ರಧಾನಿಯನ್ನು ಅಭಿನಂದಿಸಿರುವ ಭಾರತ ಸರ್ಕಾರವು ಶ್ರೀಲಂಕಾದ ಜನರಿಗೆ ನೆರವಾಗುವ ನಮ್ಮ ಬದ್ಧತೆ ಮುಂದುವರಿಯುತ್ತದೆ. ದ್ವೀಪ ರಾಷ್ಟ್ರದ ಸಮಸ್ಯೆಗಳು ಶೀಘ್ರ ಪರಿಹಾರವಾಗಲಿ ಎಂದು ಆಶಯ ವ್ಯಕ್ತಪಡಿಸಿದೆ.

ಇದನ್ನೂ ಓದಿ

ವಕೀಲರಾಗಿದ್ದ ರನಿಲ್ ವಿಕ್ರಮಸಿಂಘೆ ಅವರಿಗೆ ಇದೀಗ 73 ವರ್ಷ. ಕಳೆದ 45 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದಾರೆ. ಈ ಮೊದಲು ನಾಲ್ಕು ಬಾರಿ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿದ್ದರು. ಅಕ್ಟೋಬರ್ 2018ರಂದು ರನಿಲ್ ಅವರನ್ನು ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಪ್ರಧಾನಿ ಸ್ಥಾನದಿಂದ ವಜಾ ಮಾಡಿದ್ದರು. ಆದರೆ 2 ತಿಂಗಳ ನಂತರ ಮತ್ತು ಪುನರ್ ನಿಯೋಜನೆ ಮಾಡಲಾಗಿತ್ತು. ವಿಕ್ರಮಸಿಂಘೆ ದೂರದೃಷ್ಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರಸಕ್ತ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಬಲ್ಲರು. ಅಂತರರಾಷ್ಟ್ರೀಯ ಸಮುದಾಯದ ವಿಶ್ವಾಸ ಗಳಿಸಿ, ದೇಶವನ್ನು ಮತ್ತೆ ಸಹಜತೆಯ ಹಳಿಗೆ ತರಬಲ್ಲರು ಎಂದು ಜನರು ನಿರೀಕ್ಷಿಸುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada