ಭಾರತಕ್ಕೆ ಶ್ರೀಲಂಕಾ ವಲಸಿಗರ ಪ್ರವೇಶ ತಡೆಯಲು ಕ್ರಮ: ಎರಡೂ ದೇಶಗಳ ನೌಕಾಪಡೆಗಳಿಂದ ಗಸ್ತು

ಭಾರತಕ್ಕೆ ಶ್ರೀಲಂಕಾ ವಲಸಿಗರ ಪ್ರವೇಶ ತಡೆಯಲು ಕ್ರಮ: ಎರಡೂ ದೇಶಗಳ ನೌಕಾಪಡೆಗಳಿಂದ ಗಸ್ತು
ಭಾರತೀಯ ಕರಾವಳಿ ರಕ್ಷಣಾ ಪಡೆ (ಸಂಗ್ರಹ ಚಿತ್ರ)

ಸಮುದ್ರ ತಟದಲ್ಲಿರುವ ಹಳ್ಳಿಗಳ ಗ್ರಾಮಗಳಿಗೂ ಪೊಲೀಸರು ಭೇಟಿ ನೀಡಿದ್ದು, ಮೀನುಗಾರರಲ್ಲಿ ಜಾಗೃತಿ ಮೂಡಿಸಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 12, 2022 | 8:12 AM

ದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದ (Srilanka Economic Crisis) ಜನರು ಭಾರತದತ್ತ ಧಾವಿಸಿ ಬರದಂತೆ ತಡೆಯಲು ಭಾರತ ಮತ್ತು ಶ್ರೀಲಂಕಾ ನೌಕಾಪಡೆಗಳು ಗಸ್ತು ಹೆಚ್ಚಿಸಿವೆ. ಕಟ್ಟೆಚ್ಚರ ವಹಿಸುವಂತೆ ತಮಿಳುನಾಡು ಪೊಲೀಸ್ ಇಲಾಖೆಯು ಎಲ್ಲ ಕರಾವಳಿ ಜಿಲ್ಲೆಗಳ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗಳಿಗೆ ಸೂಚನೆ ರವಾನಿಸಿದೆ. ಶ್ರೀಲಂಕಾದಿಂದ ದೊಡ್ಡ ಮಟ್ಟದ ಜನರು ಭಾರತ ಪ್ರವೇಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ಗಸ್ತು ಹೆಚ್ಚಿಸಿದೆ. ತಮಿಳುನಾಡು ಪೊಲೀಸ್ ಇಲಾಖೆಯ ಕರಾವಳಿ ರಕ್ಷಣಾ ಪಡೆಯು ಭಾರತೀಯ ನೌಕಾಪಡೆ ಮತ್ತು ಕೋಸ್ಟ್​ ಗಾರ್ಡ್​ ಕೊರಮಂಡಲ್ ಕೋಸ್ಟ್ ಎನ್ನುವ ಆಗ್ನೇಯ ಕರಾವಳಿಯ (ದಕ್ಷಿಣ ಪೂರ್ವ) ತೀರದಲ್ಲಿ ಗಸ್ತು ಹೆಚ್ಚಿಸಿದೆ. ತಮಿಳುನಾಡಿನ ಕೊರಮಂಡಲ್ ಕೋಸ್ಟ್​ ಪ್ರದೇಶವು ಸುಮಾರು 22,800 ಚದರ ಕಿಮೀ ವಿಸ್ತೀರ್ಣವಿದೆ. ಉತ್ತರಕ್ಕೆ ಉತ್ಕಲ್ ಬಯಲು, ಪೂರ್ವಕ್ಕೆ ಬಂಗಾಳಕೊಲ್ಲಿ, ದಕ್ಷಿಣಕ್ಕೆ ಕಾವೇರಿ ಮುಖಜಭೂಮಿ, ಪಶ್ಚಿಮಕ್ಕೆ ಪೂರ್ವ ಘಟ್ಟಗಳು ಇವೆ.

ಇಂಗ್ಲಿಷ್​ನಲ್ಲಿ ಈ ಸುದ್ದಿ ಓದಲು ಲಿಂಕ್: Surveillance, patrolling intensified on both sides

ತಮಿಳುನಾಡು ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು, ಮೀನುಗಾರಿಕೆ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ರಾಮೇಶ್ವರಂ ಕಡಲುತೀರದಲ್ಲಿ ಬೀಡುಬಿಟ್ಟಿದ್ದಾರೆ. ಎರಡೂ ದೇಶಗಳ ನಡುವಣ ದ್ವೀಪಗಳಲ್ಲಿ ನೆಲೆ ನಿಂತಿರಬಹುದಾದ ಕುಟುಂಬಗಳ ಬಗ್ಗೆ ಮೀನುಗಾರರಿಂದ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಸ್ತು ಹೆಚ್ಚಿಸಿದ್ದರಿಂದ ಎರಡೂ ದೇಶಗಳ ನಡುವೆ ಅಕ್ರಮವಾಗಿ ಕುಟುಂಬಗಳನ್ನು ಸ್ಥಳಾಂತರಿಸುತ್ತಿದ್ದ ಬೋಟ್​ ಆಪರೇಟರ್​ಗಳು ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೀಗೆ ಸಿಲುಕಿದ್ದ ಕುಟುಂಬಗಳನ್ನು ಕರಾವಳಿ ರಕ್ಷಣಾ ಪಡೆಗಳು ರಕ್ಷಿಸಿ ಧನುಷ್ಕೋಟಿಗೆ ಕರೆತಂದಿವೆ. ಅಗತ್ಯಬಿದ್ದರೆ ಇಂಥ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಗಳನ್ನು ಹೆಚ್ಚಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮುದ್ರ ತಟದಲ್ಲಿರುವ ಹಳ್ಳಿಗಳ ಗ್ರಾಮಗಳಿಗೂ ಪೊಲೀಸರು ಭೇಟಿ ನೀಡಿದ್ದು, ಮೀನುಗಾರರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಕ್ರಮ ವಲಸಿಗರು ಬಂದರೆ ಮಾಹಿತಿ ನೀಡಬೇಕು ಎಂದು ವಿನಂತಿಸಿದ್ದಾರೆ. ಅಂತರರಾಷ್ಟ್ರೀಯ ಸಾಗರ ಗಡಿಯನ್ನು ದಾಟಿ ಮೀನುಗಾರಿಕೆ ನಡೆಸಬಾರದು ಎಂದು ರಾಜ್ಯ ಮೀನುಗಾರಿಕೆ ಇಲಾಖೆಯು ಎಲ್ಲ ಮೀನುಗಾರರನ್ನು ಎಚ್ಚರಿಸಿದೆ. ತನ್ನ ದೇಶದ ಪ್ರಜೆಗಳು ದೇಶ ತೊರೆಯುವುದನ್ನು ತಪ್ಪಿಸಲು ಶ್ರೀಲಂಕಾ ನೌಕಾಪಡೆಯು ಪಾಕ್ ಸ್ಟೇಟ್ ಮತ್ತು ಗಲ್ಫ್​ ಆಫ್ ಮನ್ನಾರ್ ಸುತ್ತಮುತ್ತ ಗಸ್ತು ಹೆಚ್ಚಿಸಿದೆ.

‘ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳು ಭಾಷಿಕ ಶ್ರೀಲಂಕಾ ಪ್ರಜೆಗಳು ನಿರಾಶ್ರಿತರಾಗಿ ಭಾರತಕ್ಕೆ ವಲಸೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಮುದ್ರ ಮಧ್ಯದಲ್ಲಿಯೇ ಇಂಥವರನ್ನು ಗುರುತಿಸಿ, ವಾಪಸ್ ದೇಶಕ್ಕೆ ಕರೆದೊಯ್ಯಲು ಶ್ರೀಲಂಕಾ ನೌಕಾಪಡೆಯು ಸಿದ್ಧತೆ ಮಾಡಿಕೊಂಡಿದೆ. ಸಮುದ್ರ ತೀರಕ್ಕೆ ಹೋಗುವ ದಾರಿಗಳಲ್ಲಿಯೂ ಪೊಲೀಸರ ನಿಯೋಜನೆ ಹೆಚ್ಚಿಸಲಾಗಿದೆ. ಕೇವಲ ತಮಿಳರು ಮಾತ್ರವಲ್ಲ, ಸಿಂಹಳೀಯರು ಮತ್ತು ಮುಸ್ಲಿಮರು ಸಹ ದೇಶ ತೊರೆಯಲು ಸಿದ್ಧರಾಗಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಶ್ರೀಲಂಕಾದ ಪ್ರಜೆಯೊಬ್ಬರು ‘ನ್ಯೂಸ್​9’ ಜಾಲತಾಣಕ್ಕೆ ಮಾಹಿತಿ ನೀಡಿದರು.

ಕಳೆದ ಮಾರ್ಚ್ ತಿಂಗಳಿನಿಂದಲೇ ಶ್ರೀಲಂಕಾದ ನಿರಾಶ್ರಿತರು ತಂಡತಂಡವಾಗಿ ರಾಮೇಶ್ವರಂ ಕಡಲು ತೀರಕ್ಕೆ ಅಕ್ರಮವಾಗಿ ಬರಲು ಆರಂಭಿಸಿದರು. ಅವರನ್ನು ರಕ್ಷಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆಯು ಮಂಟಪಂ ನಿರಾಶ್ರಿತರ ಶಿಬಿರದಲ್ಲಿ ಇರಿಸಿತ್ತು. ಈವರೆಗೆ ಶ್ರೀಲಂಕಾದಿಂದ 75 ತಮಿಳು ಭಾಷಿಕ ಪ್ರಜೆಗಳು ತಮಿಳುನಾಡಿಗೆ ಬಂದಿದ್ದಾರೆ. ತೀವ್ರ ಹಿಂಸಾಚಾರ ಮತ್ತು ತುರ್ತು ಪರಿಸ್ಥಿತಿ ಹೇರಿಕೆಯ ನಂತರ ಶ್ರೀಲಂಕಾದ ಸಶಸ್ತ್ರಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಶ್ರೀಲಂಕಾದಿಂದ ಆಶ್ರಯಕೋರಿ ಬಂದಿರುವವರಿಗೆ ಅಗತ್ಯ ನೆರವು ಒದಗಿಸಲು ತಮಿಳುನಾಡು ಸರ್ಕಾರವು ಕೇಂದ್ರ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿದೆ.

‘ಶ್ರೀಲಂಕಾದ ನಿರಾಶ್ರಿತ ಪ್ರಜೆಗಳ ಸೋಗಿನಲ್ಲಿ ಎಲ್​ಟಿಟಿಇ ಉಗ್ರರು ಸಹ ಭಾರತ ಪ್ರವೇಶಿಸುವ ಸಾಧ್ಯತೆಯಿದೆ. ಅವರು ಇಲ್ಲಿಗೆ ಬಂದರೆ ಮತ್ತೆ ತಮ್ಮ ಚಟುವಟಿಕೆಗಾಗಿ ಸಂಘಟನೆ ಆರಂಭಿಸಬಹುದು. ಇದನ್ನು ತಡೆಯಲು ಭಾರತ ಸರ್ಕಾರ ಗಸ್ತು ಹೆಚ್ಚಿಸಿದೆ’ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ‘ನ್ಯೂಸ್​9’ಗೆ ಪ್ರತಿಕ್ರಿಯಿಸಿದರು.

Follow us on

Related Stories

Most Read Stories

Click on your DTH Provider to Add TV9 Kannada