ಕೇವಲ ಎರಡೇ ತಿಂಗಳಲ್ಲಿ ಕೋಟಿಗಳ ಒಡೆಯನಾದ ತಾಂಜಾನಿಯಾದ ಗಣಿಗಾರ ಸನಿನಿಯೂ ಲೈಸರ್ನ ( Saniniu Laizer) ಅಚ್ಚರಿಯ ಕಥೆಯಿದು. ತನ್ನ ಪುಟ್ಟ ಗಣಿಯಲ್ಲಿ ಸಿಕ್ಕ ಮೂರು ಹರಳುಗಳನ್ನ ಮಾರಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.
ಅಂದ ಹಾಗೆ, ಆಫ್ರಿಕಾದ ಪೂರ್ವ ಭಾಗದಲ್ಲಿರುವ ತಾಂಜಾನಿಯ ಇಡೀ ಜಗತ್ತಿನಲ್ಲೇ ಅಪರೂಪವಾದ ಹರಳಿಗೆ ತವರೂರಾಗಿದೆ. ವಿಶ್ವದಾದ್ಯಂತ ಬಹುಬೇಡಿಕೆ ಇರುವ ಈ ವಿರಳವಾದ ರತ್ನವು ಇದೀಗ ಆಭರಣಗಳ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಹಾಗಾಗಿ, ತಾಂಜಾನೈಟ್ ಸ್ಟೋನ್ (Tanzanite stone) ಎಂದೇ ಕರೆಯಲಾಗುವ ಈ ಹರಳು ಕೋಟಿಗಳ ಮೊತ್ತಕ್ಕೆ ಮಾರಾಟವಾಗುತ್ತದೆ.
ಅಂತೆಯೇ, ಕಳೆದ ಜೂನ್ನಲ್ಲಿ ತನ್ನ ಗಣಿಯಲ್ಲಿ ಸಿಕ್ಕ ಬರೋಬ್ಬರಿ 10 ಕೆಜಿ ಹಾಗೂ 5 ಕೆಜಿ ತೂಕದ ಎರಡು ತಾಂಜಾನೈಟ್ ಸ್ಟೋನ್ಗಳನ್ನ ಮಾರಿ ಸನಿನಿಯೂ 3.35 ಮಿಲಿಯನ್ ಡಾಲರ್ (25 ಕೋಟಿ ರೂ.) ಗಳಿಸಿದ್ದಾನೆ. ಇದೀಗ, 6ಕೆಜಿ ತೂಕದ ಮತ್ತೊಂದು ಹರಳು ಸನಿನಿಯೂಗೆ ಸಿಕ್ಕಿದ್ದು ಬರೋಬ್ಬರಿ 2 ಮಿಲಿಯನ್ ಡಾಲರ್ಗೆ (15 ಕೋಟಿ ರೂ.) ಮಾರಾಟ ಮಾಡಿದ್ದಾನೆ. ಈ ಮೂಲಕ ಕೋಟಿಗಳ ಒಡೆಯನಾಗಿದ್ದಾನೆ.
ಆದರೆ, ಅಚ್ಚರಿಯ ಸಂಗತಿಯೆಂದರೆ ಸನಿನಿಯೂ ಬಂದ ಹಣವನ್ನ ತನ್ನ ಊರು ಹಾಗೂ ಜನರ ಏಳಿಗೆಗಾಗಿ ಬಳಸಲು ಮುಂದಾಗಿದ್ದಾನೆ. ಈಗಾಗಲೇ, ಮಕ್ಕಳಿಗೆ ಎರಡು ಶಾಲೆಗಳನ್ನ ಕಟ್ಟಿಸಿಕೊಟ್ಟಿದ್ದಾನೆ. ತನ್ನ ಜೀವನಶೈಲಿಯನ್ನ ಬದಲಿಸದೆ ಜನಸಾಮಾನ್ಯರಲ್ಲಿ ಒಬ್ಬನಂತೆ ಬದುಕಲು ಮುಂದಾಗಿದ್ದಾನೆ. ದುಡ್ಡು ಸಿಕ್ಕ ಕೂಡಲೇ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯುವವರ ಸಂಖ್ಯೆಯೇ ಹೆಚ್ಚಿರುವ ಇಂದಿನ ಕಾಲಘಟ್ಟದಲ್ಲಿ ಸನಿನಿಯೂ ನಿಜಕ್ಕೂ gem of a person!