ಕೊಲಂಬೋ: ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟದಲ್ಲಿ (economic crisis) ಸಿಲುಕಿರುವ ನೆರೆರಾಷ್ಟ್ರ ಶ್ರೀಲಂಕಾನಲ್ಲಿ (Sri Lanka) ಅರಾಜಕತೆ ತಲೆದೋರಿದೆ ಮತ್ತು ಗುರುವಾರ ರಾತ್ರಿ ರಾಜಧಾನಿ ಕೊಲಂಬೋನಲ್ಲಿ (Colombo) ಹತಾಷ ಜನ ಪ್ರತಿಭಟನೆಗಿಳಿದರು. ಲಂಕಾ ಅಧ್ಯಕ್ಷರು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿ ಅಧ್ಯಕ್ಷರ ನಿವಾಸದ ಬಳಿ ಪ್ರತಿಭಟನಾ ಱಲಿ ನಡೆಸುತ್ತಾ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಸುಮಾರು 2,000 ಕ್ಕೂ ಹೆಚ್ಚು ಜನರನ್ನು ಚದುರಿಸಲು ಪ್ಯಾರಾ ಮಿಲಿಟರಿ ಪೊಲೀಸ್ ಭಾಗವಾಗಿರುವ ಒಂದು ವಿಶೇಷ ಕಾರ್ಯಾಚರಣೆ ಪಡೆಯನ್ನು ಸ್ಥಳಕ್ಕೆ ಕರೆಸಲಾಯಿತು.
ಶ್ರೀಲಂಕಾನಲ್ಲಿ ಅಹಾರ, ಪೆಟ್ರೋಲಿಯಂ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಾಗಿದ್ದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಮೊದಲ ಬಾರಿ ಈ ದ್ವೀಪರಾಷ್ಟ್ರಕ್ಕೆ ಇಂಥ ಬಿಕ್ಕಟ್ಟು ಎದುರಾಗಿದೆ.
ಗುರುವಾರ ಸಾಯಂಕಾಲ ಪೂರ್ತಿ ದೇಶದಲ್ಲಿ ಡೀಸೆಲ್ ಅಲಭ್ಯವಾಗಿದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ಶ್ರೀಲಂಕಾದ 2.2 ಕೋಟಿಗೂ ಹೆಚ್ಚು ಜನ 13 ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಕಳೆಯಬೇಕಾಯಿತು. ರಸ್ತೆ ಮೇಲೆ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಈಗಾಗಲೇ ಔಷಧಿಗಳ ಕೊರತೆಯಿಂದ ಸರ್ಜರಿಗಳನ್ನು ತಡೆಹಿಡಿದಿರುವ ಆಸ್ಪತ್ರೆಗಳು ಗುರುವಾರ ತಲೆದೋರಿದ 13-ಗಂಟೆ ಬ್ಲ್ಯಾಕ್ ಔಟ್ ನಿಂದ ಮತ್ತಷ್ಟು ಕಂಗೆಟ್ಟವು.
ವಿದ್ಯುತ್ ಪೂರೈಕೆ ಕಡಿತ ಮೊಬೈಲ್ ಫೋನ್ ಗಳ ಬೇಸ್ ಸ್ಟೇಶನ್ ಗಳ ಮೇಲೆಯೂ ಪರಿಣಾಮ ಬೀರಿದ್ದರಿಂದ ಕರೆಗಳ ಗುಣಮಟ್ಟ ಕಳಪೆಯಾಗಿತ್ತು. ಕೊಲಂಬೋ ಸ್ಟಾಕ್ ಎಕ್ಸ್ ಚೇಂಜ್ ಸುಮಾರು 3 ಗಂಟೆ ಮೊದಲೇ ಟ್ರೇಡಿಂಗ್ ಸ್ಥಗಿತಗೊಳಿಸಿತು ಮತ್ತು ಅಗತ್ಯವಿಲ್ಲದ ಉದ್ಯೋಗಿಗಳನ್ನು ಮನೆಯಲ್ಲೇ ಉಳಿಯುವಂತೆ ತಿಳಿಸಲಾಯಿತು.
ಲಂಕಾದ ಸಚಿವರೊಬ್ಬರು ರಾಯಿಟರ್ ಸುದ್ದಿಸಂಸ್ಥೆಗೆ ನೀಡಿರುವ ಮಾಹಿತಿಯ ಪ್ರಕಾರ ವಿದ್ಯುತ್ ಉಳಿಸಲು ಬೀದಿ ದೀಪಗಳನ್ನು ಆರಿಸಲಾಗುತ್ತಿದೆ.
ಸಾಯಂಕಾಲದ ಹೊತ್ತಿಗೆ ಅಧ್ಯಕ್ಷ ಗೊಟಬಾಯ ರಾಜಪಕ್ಸಾ ಆವರ ನಿವಾಸದ ಬಳಿ ಘೇರಾಯಿಸಲಾರಂಭಿಸಿದ್ದ ಜನ ಅವರು ಮತ್ತು ಅವರ ಕುಟುಂಬ ಮನೆಗೆ ಹೋಗಬೇಕೆಂದು ಘೋಷಣೆಗಳನ್ನು ಕೂಗತೊಡಗಿದರು.
ಅಧ್ಯಕ್ಷರ ಹಿರಿಯ ಸಹೋದರ ಮಹಿಂದಾ ರಾಜಪಕ್ಸಾ ಶ್ರೀಲಂಕಾದ ಪ್ರಧಾನ ಮಂತ್ರಿಯಾಗಿದ್ದಾರೆ ಮತ್ತು ಕಿರಿಯ ಸಹೋದರ ಬೇಸಿಲ್ ರಾಜಪಕ್ಸಾ ಹಣಕಾಸು ಸಚಿವರಾಗಿದ್ದಾರೆ. ಇವರೆಲ್ಲಗಿಂತ ಹಿರಿಯವರಾದ ಚಾಮಲ್ ರಾಜಪಕ್ಸಾ ಕೃಷಿ ಸಚಿವರಾಗಿದ್ದಾರೆ ಮತ್ತು ಒಬ್ಬ ಸಹೋದರನ ಮಗ ನಾಮಲ್ ರಾಜಪಕ್ಸಾ ಕ್ರೀಡಾ ಖಾತೆಯನ್ನು ಹೊಂದಿದ್ದಾರೆ.
ಪೋಸ್ಟರ್ಗಳನ್ನು ಪ್ರದರ್ಶಿಸುತ್ತಾ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದಾಗ ದೊಂಬಿ ಶುರುವಿಟ್ಟುಕೊಂಡಿತು. ಪ್ರತಿಭಟನಾಕಾರರು ಪೊಲೀಸರತ್ತ ಬಾಟಲಿ ಮತ್ತು ಕಲ್ಲುಗಳನ್ನು ಎಸೆದರು. ಪೋಲಿಸರು ಅವರ ಮೇಲೆ ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಪ್ರಯೋಗಿಸಿದಾಗ ಚದುರಿ ಹೋದರು.
ಅಷ್ಟಾಗಿಯೂ ಪ್ರತಿಭಟನಾಕಾರರು ಸ್ಥಳದಲ್ಲಿ ನಿಂತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು ಮತ್ತು ಒಂದು ಪೊಲೀಸ್ ಬಸ್ ಗೆ ಬೆಂಕಿ ಹಚ್ಚಿದರು. ಪ್ರತಿಭಟನೆ ನಡೆಯುತ್ತಿದ್ದಾಗ ಅಧ್ಯಕ್ಷರು ಮನೆಯಲ್ಲಿರಲಿಲ್ಲ. ಲಂಕಾನಲ್ಲಿ ಬುಧವಾರದಿಂದ ಪ್ರತಿಭಟನೆಗಳು ನಡೆಯುತ್ತಿವೆ.
ಮಾರ್ಚ್ 2020 ರಲ್ಲಿ ಶ್ರೀಲಂಕಾ ಸರ್ಕಾರ ರಫ್ತುಗಳ ಮೇಲೆ ನಿಷೇಧ ಹೇರಿದಾಗಿನಿಂದ ದೇಶದಲ್ಲಿ ಬಿಕ್ಕಟ್ಟು ತಲೆದೋರಿದೆ. 5 ಬಿಲಿಯನ್ ಡಾಲರ್ ವಿದೇಶಿ ಕರೆನ್ಸಿಯನ್ನು ಉಳಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಸರ್ಕಾರದ ನಿರ್ಧಾರ ತಿರುಗುಬಾಣವಾಗಿ ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಾಯಿತು ಮತ್ತು ಬೆಲೆಗಳು ಗಗನಕ್ಕೇರಿದವು.
ವಿಶ್ವ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಚೀನಾ ಮತ್ತು ಭಾರತ ದೇಶಗಳಿಂದಲೂ ಸರ್ಕಾರ ಸಾಲ ಯಾಚಿಸಿದೆ.