
ವಾಷಿಂಗ್ಟನ್, ಆಗಸ್ಟ್ 04: ರಷ್ಯಾ(Russia) ತೈಲವನ್ನು ಖರೀದಿಸುವ ಮೂಲಕ ಉಕ್ರೇನ್(Ukraine)ನಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಭಾರತ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಸಹಾಯಕರೊಬ್ಬರು ಆರೋಪಿಸಿದ್ದಾರೆ. ಮಾಸ್ಕೋ ಜೊತೆಗಿನ ವ್ಯಾಪಾರವನ್ನು ನಿಲ್ಲಿಸುವಂತೆ ನವದೆಹಲಿಯ ಮೇಲೆ ಒತ್ತಡ ಹೇರಲು ಟ್ರಂಪ್ ಆಡಳಿತವು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿರುವ ಮಧ್ಯೆ ಈ ಹೇಳಿಕೆ ಮುಖ್ಯವಾಗುತ್ತದೆ.
ಅತ್ಯಂತ ಪ್ರಭಾವಿ ಸಹಾಯಕರಲ್ಲಿ ಒಬ್ಬರಾದ ಸ್ಟೀಫನ್ ಮಿಲ್ಲರ್, ಭಾರತ ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸಬೇಕೆಂಬುದು ಟ್ರಂಪ್ ಅವರ ಒತ್ತಾಯ ಎಂದರು. ರಷ್ಯಾದಿಂದ ತೈಲ ಖರೀದಿಸುವ ಮೂಲಕ ಈ ಯುದ್ಧಕ್ಕೆ ಹಣಕಾಸು ಒದಗಿಸುವುದನ್ನು ಭಾರತ ಮುಂದುವರಿಸುವುದು ಸ್ವೀಕಾರಾರ್ಹವಲ್ಲ. ಅಮೆರಿಕದಿಂದ ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತವು ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ. ಟ್ರಂಪ್ ರಷ್ಯಾದೊಂದಿಗೆ ನಡೆಯುತ್ತಿರುವ ರಕ್ಷಣಾ ಮತ್ತು ಇಂಧನ ವಹಿವಾಟುಗಳನ್ನು ಉಲ್ಲೇಖಿಸಿ ಭಾರತೀಯ ಸರಕುಗಳ ಮೇಲೆ 25% ಸುಂಕವನ್ನು ವಿಧಿಸಿದ್ದಾರೆ. ಮಾಸ್ಕೋ ಮಹತ್ವದ ಶಾಂತಿ ಒಪ್ಪಂದಕ್ಕೆ ಒಪ್ಪದ ಹೊರತು, ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ಯಾವುದೇ ದೇಶದಿಂದ ಆಮದು ಮಾಡಿಕೊಳ್ಳುವ ಸುಂಕವನ್ನು ಶೇ.100 ಕ್ಕೆ ಹೆಚ್ಚಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಮತ್ತಷ್ಟು ಓದಿ: Dead Economy: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿಶಾಪ
ಈ ವಿಷಯದಲ್ಲಿ ಭಾರತ ಚೀನಾದ ಪರವಾಗಿ ನಿಂತಿದೆ ಎಂದು ತಿಳಿದರೆ ಜನರು ಆಶ್ಚರ್ಯಚಕಿತರಾಗುತ್ತಾರೆ ಎಂದು ಅವರು ಹೇಳಿದರು. ಈ ಎರಡೂ ದೇಶಗಳು ಮೈತ್ರಿ ಮಾಡಿಕೊಂಡು ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿವೆ. ಇದು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿದೆ.
ಭಾರತದಿಂದ ಆಮದು ಮಾಡಿಕೊಳ್ಳುವ ಮೇಲಿನ ಸುಂಕಗಳನ್ನು ಘೋಷಿಸಿದ ಒಂದು ದಿನದ ನಂತರ, ಟ್ರಂಪ್, ಭಾರತ ಮತ್ತು ರಷ್ಯಾ ನಡುವಿನ ಸಂಬಂಧದ ಮೇಲೆ ತೀವ್ರ ದಾಳಿ ನಡೆಸಿದರು, ಎರಡೂ ದೇಶಗಳನ್ನು ಸತ್ತ ಆರ್ಥಿಕತೆ ಎಂದು ಕರೆದಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 am, Mon, 4 August 25