AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಂತಿ ಮಾತುಕತೆಗೆ ಸಿದ್ಧ ಎಂದ ರಷ್ಯಾ; ಆದರೆ, ಮುಂದಿಟ್ಟಿದೆ ದೊಡ್ಡ ಷರತ್ತು

Russia Ukraine crisis updates: ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ರಷ್ಯಾ ಸಿದ್ಧ ಎಂದು ಆ ದೇಶದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಉಕ್ರೇನ್ ವಿಚಾರದಲ್ಲಿ ಶಾಂತಿ ಸ್ಥಾಪನೆಯಾಗುವಂತೆ ರಷ್ಯಾ ಅಧ್ಯಕ್ಷರು ಬಯಸುತ್ತಾರೆ. ಆದರೆ, ಹಾಗಾಗಬೇಕಾದರೆ ರಷ್ಯಾ ಉದ್ದೇಶಗಳು ಈಡೇರಬೇಕು ಎಂದು ಪೆಸ್ಕೋವ್ ತಿಳಿಸಿದ್ದಾರೆ. 50 ದಿನದೊಳಗೆ ರಷ್ಯಾ ಕದನ ವಿರಾಮಕ್ಕೆ ಒಪ್ಪಲಿಲ್ಲವೆಂದರೆ ಮತ್ತಷ್ಟು ನಿಷೇಧ ಹಾಕುತ್ತೇವೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಶಾಂತಿ ಮಾತುಕತೆಗೆ ಸಿದ್ಧ ಎಂದ ರಷ್ಯಾ; ಆದರೆ, ಮುಂದಿಟ್ಟಿದೆ ದೊಡ್ಡ ಷರತ್ತು
ವ್ಲಾದಿಮಿರ್ ಪುಟಿನ್, ಡಿಮಿಟ್ರಿ ಪೆಸ್ಕೋವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 20, 2025 | 7:33 PM

Share

ಮಾಸ್ಕೋ, ಜುಲೈ 20: ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ (Ukraine Russia peace talks) ತಾನು ಸಿದ್ಧನಿದ್ದೇನೆ ಎಂದು ಹೇಳಿರುವ ರಷ್ಯಾ, ಈ ಮಾತುಕತೆ ನಡೆಯಲು ಪ್ರಮುಖ ಷರತ್ತುಗಳನ್ನೂ ಹಾಕಿದೆ. ರಷ್ಯಾ ಆಡಳಿತದ ವಕ್ತಾರ ಡಿಮಿಟ್ರಿ ಪೆಸ್ಕೋವ್ (Dmitry Peskov) ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ,‘ಉಕ್ರೇನ್ ವಿಚಾರದಲ್ಲಿ ಆದಷ್ಟೂ ಬೇಗ ಶಾಂತಿ ನೆಲಸಲು ಬಯಸುತ್ತಿರುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ ಬಾರಿ ಬಾರಿ ಹೇಳುತ್ತಾ ಬಂದಿದ್ದಾರೆ. ಇದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಅಷ್ಟು ಸುಲಭದ ಕೆಲವಲ್ಲ, ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ನಮ್ಮ ಗುರಿಗಳು ಈಡೇರುವುದು ನಮಗೆ ಬಹಳ ಮುಖ್ಯ’ ಎಂದು ಪೆಸ್ಕೋವ್ ತಿಳಿಸಿದ್ದಾರೆ.

ಏನಿವೆ ರಷ್ಯಾದ ಷರತ್ತುಗಳು?

  • ಉಕ್ರೇನ್ ದೇಶಕ್ಕೆ ನ್ಯಾಟೊ ಸದಸ್ಯತ್ವ ನೀಡಬಾರದು.
  • ರಷ್ಯಾ ವಿರುದ್ಧ ವಿಧಿಸಿರುವ ಎಲ್ಲಾ ರೀತಿಯ ನಿಷೇಧಗಳನ್ನು ಹಿಂಪಡೆಯಬೇಕು.
  • ಉಕ್ರೇನ್ ಅನ್ನು ನಾಜಿವಾದಿಗಳಿಂದ ಮುಕ್ತಗೊಳಿಸಬೇಕು. ಆ ದೇಶದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಬಾರದು.
  • ಉಕ್ರೇನ್​ನಲ್ಲಿ ರಷ್ಯಾ ತನ್ನ ಪ್ರದೇಶಗಳೆಂದು ಪರಿಗಣಿಸುವ ಡೊನೆಸ್ಕ್, ಲುಹಾನ್​ಸ್ಕ್, ಖೆರ್ಸೋನ್, ಝಾಪೋರಿಝಿಯಾದಲ್ಲಿ ಉಕ್ರೇನ್ ಸೇನಾ ಪಡೆಗಳು ಪೂರ್ಣವಾಗಿ ಹೊರಹೋಗಬೇಕು. ಅವು ರಷ್ಯನ್ ಪ್ರದೇಶಗಳೆಂದು ಪರಿಗಣಿಸಬೇಕು.

ಇದನ್ನೂ ಓದಿ: 20 ವರ್ಷಗಳಿಂದ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ‘ಸ್ಲೀಪಿಂಗ್ ಪ್ರಿನ್ಸ್​​’ ವಲೀದ್ ನಿಧನ

ಈ ಮೇಲಿನವು ರಷ್ಯಾದ ಪ್ರಮುಖ ಬೇಡಿಕೆಗಳು. ಇವೇ ವಿಚಾರವಾಗಿ ರಷ್ಯಾ ದೇಶವು ಉಕ್ರೇನ್ ಮೇಲೆ ಎರಗಿ ಹೋಗಿದ್ದು. ಮೂರ್ನಾಲ್ಕು ವರ್ಷಗಳಾದರೂ ಯುದ್ಧ ಇನ್ನೂ ಮುಗಿದಿಲ್ಲ. ಉಕ್ರೇನ್​​ಗೆ ಪಾಶ್ಚಿಮಾತ್ಯ ದೇಶಗಳು ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿರುವುದರಿಂದ ರಷ್ಯಾಗೆ ಈ ಯುದ್ಧ ಗೆಲ್ಲಲು ಸಾಧ್ಯವಾಗಿಲ್ಲ.

ರಷ್ಯಾ ವಿರುದ್ಧ ಟ್ರಂಪ್ ಡೆಡ್​ಲೈನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ವಿರುದ್ಧ ಕಠಿಣ ಧೋರಣೆ ಅನುಸರಿಸಲು ಆರಂಭಿಸಿದೆ. ಪೇಟ್ರಿಯಾಟ್ ಮಿಸೈಲ್ ಡಿಫೆನ್ಸ್ ಸಿಸ್ಟಂಗಳು ಸೇರಿದಂತೆ ಉಕ್ರೇನ್​​ಗೆ ಹೊಸ ಮಿಲಿಟರಿ ನೆರವಿನ ಪ್ಯಾಕೇಜ್ ಪ್ರಕಟಿಸಿದೆ. 50 ದಿನದೊಳಗೆ ಕದನ ವಿರಾಮಕ್ಕೆ ಒಪ್ಪದಿದ್ದರೆ ಮತ್ತಷ್ಟು ನಿಷೇಧ ಕ್ರಮಗಳನ್ನು ಜಾರಿಗೆ ತರುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ಬೆದರಿಕೆ ಹಾಕಿ ಭಾರತ – ಪಾಕ್ ಯುದ್ಧ ನಿಲ್ಲಿಸಿದೆ, 5 ಜೆಟ್ ಹೊಡೆದುರುಳಿಸಲಾಗಿತ್ತು: ನಿಲ್ಲದ ಡೊನಾಲ್ಡ್ ಟ್ರಂಪ್ ಕ್ಯಾತೆ

ಉಕ್ರೇನ್ ಅಧ್ಯಕ್ಷರು ಮಾತುಕತೆಗೆ ಸಿದ್ಧ

ಇತ್ತ, ಉಕ್ರೇನ್ ಅಧ್ಯಕ್ಷ ವೊಲೋಡಿಜಿರ್ ಝೆಲೆನ್​ಸ್ಕಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ನೇರಾನೇರ ಮಾತುಕತೆಗೆ ಸಿದ್ಧ ಇರುವುದಾಗಿ ಹೇಳಿದ್ದಾರೆ. ಕಳೆದ ಐದು ತಿಂಗಳಿಂದ ಎರಡೂ ದೇಶಗಳ ಮಧ್ಯೆ ಎರಡು ಸುತ್ತಿನ ಮಾತುಕತೆಗಳಾಗಿವೆ. ಆದರೆ, ಸೆರೆಯಾಳುಗಳ ವಿನಿಮಯಕ್ಕೆ ಮಾತ್ರ ಸೀಮಿತವಾಗಿದೆ. ಈ ಶಾಂತಿ ಮಾತುಕತೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಝೆಲೆನ್​ಸ್ಕಿ ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ