ನವದೆಹಲಿ: ಟರ್ಕಿ ಭೂಕಂಪದಿಂದ (Turkey Earthquake) ಸಾವಿನ ಸಂಖ್ಯೆ ನಿರೀಕ್ಷೆಮೀರಿ ಬೆಳೆಯುತ್ತಲೇ ಹೋಗುತ್ತಿದೆ. ಭಾನುವಾರದ ಅಂತ್ಯದ ವೇಳೆಗೆ ಒಟ್ಟು 34 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಟರ್ಕಿ ದೇಶವೊಂದರಲ್ಲೇ 30 ಸಾವಿರದಷ್ಟು ಮಂದಿ ಅಸುನೀಗಿದ್ದಾರೆ. ಸಿರಿಯಾದಲ್ಲಿ ಸಾವಿನ ಸಂಖ್ಯೆ 4 ಸಾವಿರ ಸಮೀಪ ಇದೆ. ಭೂಕಂಪದಿಂದ ಕುಸಿದ ಹಲವು ಕಟ್ಟಡಗಳ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಇದೆ.
ಟರ್ಕಿ ಮತ್ತು ಸಿರಿಯಾ ಗಡಿ ಸಮೀಪದ ಪ್ರದೇಶಗಳಲ್ಲಿ ಕಳೆದ ವಾರ (ಫೆ. 6) ನಾಲ್ಕು ಭೂಕಂಪಗಳು ಸಾಲು ಸಾಲಾಗಿ ಜರುಗಿದವರು. ಇದರ ಜೊತೆಗೆ ನೂರಕ್ಕೂ ಹೆಚ್ಚು ಪಶ್ಚಾತ್ ಕಂಪನಗಳು ಇಲ್ಲಿಯ ಭೂಮಿಯನ್ನು ನಡುಗಿಸಿದ್ದವು. ಜೊತೆಗೆ ಮಧ್ಯಮ ತೀವ್ರತೆಯ ಒಂದು ಲಘು ಭೂಕಂಪವೂ ಸಂಭವಿಸಿತು. ಮೊದಲೆರಡು ಭೂಕಂಪಗಳು ರಿಕ್ಟರ್ ಮಾಪಕದಲ್ಲಿ 7.5ಕ್ಕಿಂತ ಹೆಚ್ಚು ತೀವ್ರತೆ ಹೊಂದಿದ್ದವು. ಬಹುತೇಕ ಹಾನಿಗಳಿಗೆ ಈ ಎರಡು ಭೂಕಂಪಗಳೇ ಕಾರಣವಾಗಿವೆ.
ಇದನ್ನೂ ಓದಿ: Turkey: ಟರ್ಕಿ ಭೂಕಂಪದಿಂದ ಚಿಂತೆಗೊಳಗಾದ ಭಾರತದ ಹತ್ತಿ ಗಿರಣಿ ಉದ್ಯಮಿಗಳು
ವರದಿಗಳ ಪ್ರಕಾರ, ಟರ್ಕಿ ಮತ್ತು ಸಿರಿಯಾದಲ್ಲಿ 10 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ. ದುರ್ಬಲ ಕಟ್ಟಡಗಳ ನಿರ್ಮಾಣವೇ ಈ ಕುಸಿತಕ್ಕೆ ಕಾರಣ ಎಂದು ನಂಬಲಾಗಿದೆ. ಈ ವಿಚಾರವನ್ನು ಟರ್ಕಿ ಆಡಳಿತ ಗಂಭೀರವಾಗಿ ಪರಿಗಣಿಸಿದೆ. ಇಂಥ ಕಟ್ಟಡಗಳನ್ನು ನಿರ್ಮಿಸಿದ ಗುತ್ತಿಗೆದಾರರೂ (Building Contractors) ಸೇರಿದಂತೆ 12 ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹಾಗೆಯೇ, 113 ಅರೆಸ್ಟ್ ವಾರೆಂಟ್ (Arrest Warrant) ಹೊರಡಿಸಲಾಗಿದೆ. ಸರ್ಕಾರದ ಈ ನಡೆಯನ್ನು ಕೆಲವರು ಟೀಕಿಸಿದ್ದಾರೆ. ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಇಂಥ ನೆವ ಹೇಳುತ್ತಿದೆ ಎಂದು ಇವರು ಆರೋಪಿಸಿದ್ದಾರೆ.
ಲಕ್ಷಕ್ಕೆ ಹೋಗುತ್ತಾ ಸಾವಿನ ಸಂಖ್ಯೆ?
ಟರ್ಕಿ ಮತ್ತು ಸಿರಿಯಾದಲ್ಲಿ ಈಗ ಭೀಕರ ಶೀತ ಮತ್ತು ಚಳಿ ವಾತಾವರಣ ಇದೆ. ಲಕ್ಷಾಂತರ ಜನರು ನಿರ್ವಸಿತಗರಾಗಿದ್ದಾರೆ. 8 ಲಕ್ಷಕ್ಕೂ ಹೆಚ್ಚು ಮಂದಿಗೆ ಸರಿಯಾಗಿ ಊಟವೇ ಸಿಗುತ್ತಿಲ್ಲ. ಬಹಳ ಮಂದಿ ಈಗ ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ. ಇವರಿಗೆ ಸರಿಯಾದ ವಸತಿ ಮತ್ತು ಆಹಾರದ ವ್ಯವಸ್ಥೆ ಆಗದಿದ್ದರೆ ಹಲವು ಜನರು ಸಾವನ್ನಪ್ಪುವ ಅಪಾಯದಲ್ಲಿದ್ದಾರೆನ್ನಲಾಗಿದೆ. ಇದೇ ವೇಳೆ, ಭೂಕಂಪಪೀಡಿತ ಟರ್ಕಿ ಮತ್ತು ಸಿರಿಯನ್ನರಿಗೆ ಆಶ್ರಯ ನೀಡಲು ಜರ್ಮನಿ ಮೊದಲಾದ ಕೆಲ ಐರೋಪ್ಯ ದೇಶಗಳು ಸಿದ್ಧವಿರೋದಾಗಿ ಹೇಳಿವೆ.
Published On - 8:13 am, Mon, 13 February 23