Turkey Wildfire: ಟರ್ಕಿಯಲ್ಲಿ ಭೀಕರ ಕಾಡ್ಗಿಚ್ಚು; ನಷ್ಟವನ್ನು ವಿವರಿಸುತ್ತಿವೆ ಹೃದಯ ವಿದ್ರಾವಕ ಚಿತ್ರಗಳು

| Updated By: shivaprasad.hs

Updated on: Jul 31, 2021 | 6:46 PM

Turkey: ಟರ್ಕಿಯಲ್ಲಿ ಕಾಡ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದ್ದು, ಮೂರು ದಿನ ಕಳೆದರೂ ಬೆಂಕಿ ಇನ್ನೂ ಪೂರ್ಣವಾಗಿ ನಂದಿಲ್ಲ. ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿರುವ ಮಾಹಿತಿಯ ಪ್ರಕಾರ 98 ಅರಣ್ಯ ಪ್ರದೇಶಗಳಲ್ಲಿ 88 ಅರಣ್ಯ ಪ್ರದೇಶಗಳ ಬೆಂಕಿ ನಂದಿಸಲಾಗಿದ್ದು, ಉಳಿದ ಕಡೆ ಕಾರ್ಯಾಚರಣೆ ನಡೆಯುತ್ತಿದೆ. ಈ ಕುರಿತ ಸಚಿತ್ರ ವರದಿ ಇಲ್ಲಿದೆ.

Turkey Wildfire: ಟರ್ಕಿಯಲ್ಲಿ ಭೀಕರ ಕಾಡ್ಗಿಚ್ಚು; ನಷ್ಟವನ್ನು ವಿವರಿಸುತ್ತಿವೆ ಹೃದಯ ವಿದ್ರಾವಕ ಚಿತ್ರಗಳು
ಟರ್ಕಿಯ ಮನವ್ಗಾಟ್ ಪಟ್ಟಣದ ಕಿರ್ಲಿ ಗ್ರಾಮದಲ್ಲಿ ಬೆಂಕಿ ನಂದಿಸಲು ಪ್ರಯತ್ನಪಡುತ್ತಿರುವ ಅಗ್ನಿಶಾಮಕ ಸಿಬ್ಬಂದಿ (ಚಿತ್ರ: AP)
Follow us on

ಟರ್ಕಿ: ಟರ್ಕಿಯಲ್ಲಿ ಹಬ್ಬಿರುವ ಕಾಡ್ಗಿಚ್ಚಿಗೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ. ದೇಶದ ಒಟ್ಟು 98 ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಹಬ್ಬಿದ್ದು ಅದರಲ್ಲಿ 88 ಅರಣ್ಯಗಳ ಕಾಡ್ಗಿಚ್ಚನ್ನು ಹತೋಟಿಗೆ ತರಲಾಗಿದೆ ಎಂದು ಟರ್ಕಿಯ ಕೃಷಿ ಮತ್ತು ಅರಣ್ಯ ಸಚಿವಾಲಯ ತಿಳಿಸಿದೆ. ಉಳಿದ ಹತ್ತು ಅರಣ್ಯಗಳ ಬೆಂಕಿಯನ್ನೂ ಹತೋಟಿಗೆ ತರಲು ಪ್ರಯತ್ನಿಸಲಾಗುತ್ತಿದ್ದು ಶೀಘ್ರದಲ್ಲಿ ಆ ಪ್ರಯತ್ನದಲ್ಲೂ ಯಶಸ್ವಿಯಾಗಬಹುದು ಎಂಬ ಆಶಾಭಾವವನ್ನು ಸಚಿವಾಲಯ ವ್ಯಕ್ತಪಡಿಸಿದೆ.  ಅಂಟಾಲ್ಯಾ, ಅಡಾನಾ, ಮುಗ್ಲಾ, ಒಸ್ಮಾನಿಯೇ ಪ್ರದೇಶದ ಅರಣ್ಯಗಳು ಬೆಂಕಿಗಾಹುತಿಯಾಗಿವೆ. ಇದರಿಂದಾಗಿ ಅಪಾರ ಪ್ರಮಾಣದ ಕೃಷಿ ಭೂಮಿ, ಸಣ್ಣ ಗ್ರಾಮಗಳು, ವನ್ಯ ಸಂಪತ್ತು ಹಾನಿಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ಸಚಿತ್ರ ವರದಿ ಇಲ್ಲಿದೆ.

ಅಂಟಾಲ್ಯಾ(Antalya): ಮನವ್ಗಾಟ್ ಪಟ್ಟಣ ಸಮೀಪದ ಕಿರ್ಲಿ ಹಳ್ಳಿಯಲ್ಲಿ ಗ್ರಾಮಸ್ಥರು ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿರುವುದು. ಬೆಂಕಿ ಹತೋಟಿಗೆ ಬರದ ಕಾರಣ, ಗ್ರಾಮಸ್ಥರು ಹಳ್ಳಿಯನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಟರ್ಕಿಯ ಕೆಲವು ಭಾಗಗಳಲ್ಲಿ ಪ್ರತೀ ವರ್ಷ ಕಾಡ್ಗಿಚ್ಚು ವಿವಿಧ ಕಾರಣಗಳಿಂದ ಹಬ್ಬುತ್ತಿದೆ. ಈ ಬಾರಿ ಅದರ ಪರಿಣಾಮ ತೀವ್ರವಾಗಿದೆ ಎಂದು ಪಿಟಿಐ ವರದಿ ಮಾಡಿದೆ. (Image Courtesy: PTI)

ಮನವ್ಗಾಟ್: ಮನವ್ಗಾಟ್​ನ ಹಳ್ಳಿಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ವೈಮಾನಿಕ ಚಿತ್ರವಿದು.ವಿಪರೀತ ಗಾಳಿಯ ಕಾರಣ ಸಮೀಪದ ಕಾಡಿನ ಬೆಂಕಿ ಹಳ್ಳಿಗೆ ವ್ಯಾಪಿಸಿದೆ. ಜಿಲ್ಲೆಯ ಗವರ್ನರ್ ಮುಸ್ತಫಾ ಯಿಗಿಟ್ ನೀಡಿರುವ ಮಾಹಿತಿಯಂತೆ ಬೆಂಕಿಯ ನಡುವೆ ಸಿಲುಕಿದ್ದ ನಾಲ್ಕು ಮಂದಿಯನ್ನು ರಕ್ಷಿಸಲಾಗಿದೆ. ಪ್ರವಾಸಕ್ಕೆ ಬಂದ ಪ್ರವಾಸಿಗರ ಅಚಾತುರ್ಯದಿಂದ ಬೆಂಕಿ ಹಬ್ಬಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ. (Image Courtesy: PTI)

ಬೋಡ್ರಮ್(Bodrum): ಕಾಡ್ಗಿಚ್ಚಿನಿಂದ ಹಬ್ಬಿರುವ ಹೊಗೆಯು ಜನವಾಸವಿರುವ ಪ್ರದೇಶಗಳಿಗೂ ವ್ಯಾಪಿಸಿದೆ. ಸಾಗರ ತೀರದ ಬೋಡ್ರಮ್ ಪಟ್ಟಣದಲ್ಲಿರುವ ಏಗಾನ್​ನಲ್ಲಿ ಗುರುವಾರ(ಜುಲೈ 29)ದಂದು ಕಂಡುಬಂದ ದೃಶ್ಯವಿದು. ​ಟರ್ಕಿಯ ಅಧಿಕಾರಿಗಳು ಕಾಡ್ಗಿಚ್ಚಿಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖೆ ಆರಂಭಿಸಿದ್ದಾರೆ. (Image Courtesy: PTI)

ಮಾನ್ವಗಾಟ್(Manvagat): ಪಟ್ಟಣದ ಸಮೀಪದ ಅರಣ್ಯಕ್ಕೆ ಬೆಂಕಿ ಆರಿಸಲು ಬಂದಿರುವ ಅಗ್ನಿಶಾಮಕ ದಳದ ಟ್ರಕ್​ಗಳು. ಈ ವೈಮಾನಿಕ ಚಿತ್ರದಲ್ಲಿ ಅರಣ್ಯ ನಾಶವಾಗಿರುವುದನ್ನೂ ಹಾಗೂ ಅಗ್ನಿಶಾಮಕ ದಳದ ಪ್ರಯತ್ನವಾಗಿ ಉಳಿದಿರುವ ಕಾಡನ್ನೂ ಕಾಣಬಹುದು. (ಚಿತ್ರ: ಎಎಫ್​ಪಿ)

ಕಾಡ್ಗಿಚ್ಚಿನಿಂದ ಉಂಟಾದ ಗಾಢ ಕಪ್ಪು ವರ್ಣದ ಹೊಗೆ ಮಾನ್ವಗಾಟ್ ಸಮೀಪ ಆಕಾಶಕ್ಕೆ ಹಬ್ಬುತ್ತಿರುವುದು. ಇದು ಅಂಟಾಲ್ಯಾ ಪಟ್ಟಣದಿಂದ ಸುಮಾರು 75ಕಿಲೋ ಮೀಟರ್ ದೂರದಲ್ಲಿದೆ. (ಚಿತ್ರ: ರಾಯ್​ಟರ್ಸ್)

ಟರ್ಕಿಯ ಕಾಡ್ಗಿಚ್ಚಿನ ಕುರಿತ ವಿಡಿಯೊ ವರದಿ ಇಲ್ಲಿದೆ:

ಟರ್ಕಿಯ ಕಾಡ್ಗಿಚ್ಚನ್ನು ನಂದಿಸಲು ತೀವ್ರತರವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಅದಾಗ್ಯೂ ಕಳೆದ ಮೂರು ದಿನಗಳಿಂದ ಹಬ್ಬಿರುವ ಬೆಂಕಿಯಿಂದ ಅಪಾರ ಪ್ರಮಾಣದ ವನ್ಯ- ಜೀವಿ ಸಂಪತ್ತು ನಾಶವಾಗಿದೆ.

ಇದನ್ನೂ ಓದಿ: 

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬಡವರು ಬಡವರಾಗಿಯೇ ಉಳಿಯುತ್ತಾರೆ: ಪ್ರೊ ರಾಧಾಕೃಷ್ಣ ಟೀಕೆ

(Turkey wildfires cause huge damage for the forests, bio diversity and near by villages)

Published On - 6:38 pm, Sat, 31 July 21