Explainer: ಹೆಜ್ಜೆ ಮುಂದಿಟ್ಟರೆ ರಕ್ತಪಾತ, ಹಿಂದಿಟ್ಟರೆ ಅವಮಾನ: ಅಡಕತ್ತರಿಯಲ್ಲಿ ರಷ್ಯಾ-ಉಕ್ರೇನ್ ಅಧ್ಯಕ್ಷರು

|

Updated on: Jul 11, 2021 | 8:06 PM

ಜಾಗತಿಕ ಮಟ್ಟದ ದೊಡ್ಡ ಶಕ್ತಿಯಾಗಿರುವ ರಷ್ಯಾಗೆ ನೆರೆಯ ಉಕ್ರೇನ್ ಮೇಲೇಕೆ ಇಷ್ಟು ಸಿಟ್ಟು? ಒಂದು ಕಾಲಕ್ಕೆ ರಷ್ಯಾದ ಭಾಗವೇ ಆಗಿದ್ದ ಉಕ್ರೇನ್​ಗೆ ರಷ್ಯಾ ಜೊತೆಗೆ ಹೊಂದಾಣಿಕೆ ಏಕೆ ಸಾಧ್ಯವಾಗುತ್ತಿಲ್ಲ?

Explainer: ಹೆಜ್ಜೆ ಮುಂದಿಟ್ಟರೆ ರಕ್ತಪಾತ, ಹಿಂದಿಟ್ಟರೆ ಅವಮಾನ: ಅಡಕತ್ತರಿಯಲ್ಲಿ ರಷ್ಯಾ-ಉಕ್ರೇನ್ ಅಧ್ಯಕ್ಷರು
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿ ಝೆಲೆಂಕ್ಸಿ
Follow us on

ಉಕ್ರೇನ್ ಮತ್ತು ರಷ್ಯಾ ನಡುವಣ ಸಂಘರ್ಷ ಆಗಿಂದ್ದಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಜಾಗತಿಕ ಮಟ್ಟದ ದೊಡ್ಡ ಶಕ್ತಿಯಾಗಿರುವ ರಷ್ಯಾಗೆ ನೆರೆಯ ಉಕ್ರೇನ್ ಮೇಲೇಕೆ ಇಷ್ಟು ಸಿಟ್ಟು? ಒಂದು ಕಾಲಕ್ಕೆ ರಷ್ಯಾದ ಭಾಗವೇ ಆಗಿದ್ದ ಉಕ್ರೇನ್​ಗೆ ರಷ್ಯಾ ಜೊತೆಗೆ ಹೊಂದಾಣಿಕೆ ಏಕೆ ಸಾಧ್ಯವಾಗುತ್ತಿಲ್ಲ? ನೆರೆಹೊರೆಯ ಈ ಎರಡೂ ದೇಶಗಳ ಸಂಘರ್ಷ ಇನ್ನೆಷ್ಟು ಕಾಲ ಮುಂದುವರಿಯಲಿದೆ? ಅಮೆರಿಕ ಸೇರಿದಂತೆ ವಿಶ್ವ ಸಮುದಾಯ ಹೇಗೆ ಪ್ರತಿಕ್ರಿಯಿಸುತ್ತಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಈ ಲೇಖನದಲ್ಲಿದೆ.

ಉಕ್ರೇನ್​ನ ಗಡಿಯಲ್ಲಿ ರಷ್ಯಾ ಭಾರೀ ಪ್ರಮಾಣದಲ್ಲಿ ಸೇನೆಯ ಜಮಾವಣೆ ಮಾಡಿದೆ. ಬಾಹ್ಯಾಕಾಶದಿಂದಲೂ ಗುರುತಿಸುವಷ್ಟು ದೊಡ್ಡಮಟ್ಟದಲ್ಲಿದೆ ಉಕ್ರೇನ್​ ಗಡಿಯಲ್ಲಿರುವ ರಷ್ಯಾದ ಸೇನಾ ತುಕಡಿಗಳ ಸಂಖ್ಯೆ. ಬಹುಶಃ ಇದೇ ಕಾರಣಕ್ಕೆ ವಿಶ್ವದ ಎಲ್ಲೆಡೆಯಿಂದ ಈ ವಿದ್ಯಮಾನವನ್ನು ಹಲವ ದೃಷ್ಟಿಕೋನಗಳಿಂದ ಗಮನಿಸಲಾಗುತ್ತಿದೆ. ಸುಮಾರು 1.20 ಲಕ್ಷ ಸೈನಿಕರೊಂದಿಗೆ ನೂರಾರು ಟ್ಯಾಂಕ್​ ಮತ್ತು ಯುದ್ಧ ವಿಮಾನಗಳನ್ನು ಉಕ್ರೇನ್ ಗಡಿಯಲ್ಲಿ ರಷ್ಯಾ ನಿಯೋಜಿಸಿದೆ. ಇದನ್ನು ಯುದ್ಧ ಸಿದ್ಧತೆ ಎಂದು ರಷ್ಯಾ ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ನಮಗೆ ಸೇರಿರುವ ನೆಲದಲ್ಲಿಯೇ ಸೈನಿಕರನ್ನು ನಿಲ್ಲಿಸಿದ್ದೇವೆ. ಇದು ಸಮರಾಭ್ಯಾಸ ಎಂದು ಹೇಳುತ್ತಿದೆ. ಆದರೆ ಆಘಾತದ ಸ್ಥಿತಿಯಲ್ಲಿರುವ ಉಕ್ರೇನ್ ದೇಶಕ್ಕೆ ಮತ್ತು ನ್ಯಾಟೊ ಸದಸ್ಯ ರಾಷ್ಟ್ರಗಳಿಗೆ ಇದು ಬೆದರಿಕೆಯ ತಂತ್ರ ಎನಿಸಿದೆ.

ನ್ಯಾಟೊ (North Atlantic Treaty Organization – NATO) ನಮ್ಮ ದೇಶವನ್ನು ಛಿದ್ರಗೊಳಿಸಲಿದೆ ಎಂದು ಕಳೆದ 20 ವರ್ಷಗಳಿಂದ ರಷ್ಯಾದ ನಾಯಕರು ಅಲ್ಲಿನ ಜನರನ್ನು ನಂಬಿಸುತ್ತಲೇ ಇದ್ದಾರೆ. ರಷ್ಯಾದ ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡೆ ಸಹ ಇದಕ್ಕಿಂತ ಭಿನ್ನವಾಗಿಲ್ಲ. ನ್ಯಾಟೊಗೆ ಸರಿಸಮನಾಗಿ ರಷ್ಯಾ ರೂಪಿಸಿದ್ದ ‘ವಾರ್ಸಾ ಪ್ಯಾಕ್ಟ್​’ ಪಾಶ್ಚಿಮಾತ್ಯ ದೇಶಗಳ ಸತತ ಯತ್ನದಿಂದ ಕುಸಿದುಬಿತ್ತು. ವಾರ್ಸಾ ಪ್ಯಾಕ್ಟ್​ ಕುಸಿಯಲು ಪಾಶ್ಚಿಮಾತ್ಯ ದೇಶಗಳ ಪ್ರಯತ್ನದ ಜೊತೆಗೆ ರಷ್ಯಾ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಕುಸಿದದ್ದೂ ಸಹ ಮುಖ್ಯ ಕಾರಣ ಎನಿಸಿದೆ. ಈ ಹಿಂದೆ ರಷ್ಯಾ ಒಕ್ಕೂಟದ ಮತ್ತು ವಾರ್ಸಾ ಪ್ಯಾಕ್ಟ್ ಭಾಗವಾಗಿದ್ದ ಕೆಲ ದೇಶಗಳೂ ಸಹ ನಂತರದ ದಿನಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿರುವ ನ್ಯಾಟೊ ಒಪ್ಪಂದದ ಸದಸ್ಯ ರಾಷ್ಟ್ರಗಳಾದವು.

ಕೆಲ ವರ್ಷಗಳ ಹಿಂದೆ ಉಕ್ರೇನ್ ಅಧ್ಯಕ್ಷ ಪೆಟ್ರೊ ಪೊರೊಶೆಂಕೊ ಸಹ ನ್ಯಾಟೊ ಒಪ್ಪಂದ ಮತ್ತು ಐರೋಪ್ಯ ಒಕ್ಕೂಟದ ಭಾಗವಾಗಲು ಒಲವು ತೋರಿದ್ದರು. ಇಂದಲ್ಲ ನಾಳೆ ಇದು ಸಾಧ್ಯವಾಗಬಹುದು. ಆದರೆ ಉಕ್ರೇನ್​ನ ಈ ಪ್ರಯತ್ನಕ್ಕೆ ನ್ಯಾಟೊ (ಅಮೆರಿಕ) ಅಥವಾ ಐರೋಪ್ಯ ಒಕ್ಕೂಟಗಳು ಪೂರಕವಾಗಿ ಸ್ಪಂದಿಸಿದರೆ ರಷ್ಯಾ ಮತ್ತು ನ್ಯಾಟೊ ನಡುವಣ ಯುದ್ಧ ನಡೆಯುವುದು ನಿಚ್ಚಳ ಎನ್ನುವುದು ಒಂದು ವಲಯದ ವಿಶ್ಲೇಷಣೆ. ಆದರೆ ಈ ಯುದ್ಧ ನಡೆಯಲೇಬೇಕು ಎಂದೇನಿಲ್ಲ ಎನ್ನುವುದು ಮತ್ತೊಂದು ವಲಯದ ಅಭಿಪ್ರಾಯ. ಇಂಥ ಯುದ್ಧಕ್ಕೆ ರಷ್ಯಾದ ನಡೆಗಳೇ ಹೆಚ್ಚು ಕಾರಣವಾಗಲಿವೆ ಎನ್ನುತ್ತಾರೆ ಇವರು. ಉಕ್ರೇನ್​ನಲ್ಲಿ ಇದೀಗ ನಡೆಯುತ್ತಿರುವ ಸಂಘರ್ಷದ ವಿಚಾರದಲ್ಲಿಯೂ ಅಷ್ಟೇ, ಉಕ್ರೇನ್ ಮತ್ತು ಇತರ ದೇಶಗಳ ನಡೆಗಿಂತಲೂ ರಷ್ಯಾ ಮತ್ತು ಅದರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತೆಗೆದುಕೊಳ್ಳುವ ನಿರ್ಧಾರಗಳೇ ನಿರ್ಣಾಯಕವಾಗಲಿವೆ.

ಡೊಂಬಾಸ್​ನ ಯುದ್ಧ ಆರಂಭವಾಗಿ 7 ವರ್ಷ ಆಗಿದೆ. ಕಳೆದ 2 ವರ್ಷಗಳಿಂದ ಈ ಸಂಘರ್ಷವು ಕದನವಿರಾಮದ ಸ್ಥಿತಿಯಲ್ಲಿದೆ. ಆದರೆ ಪ್ರತಿದಿನವೂ ಕದನವಿರಾಮ ಒಪ್ಪಂದದ ಉಲ್ಲಂಘನೆಯಾಗುತ್ತಿದೆ. ಉಕ್ರೇನ್ ಸೇನೆ ಮತ್ತು ಪ್ರತ್ಯೇಕವಾದಿಗಳ ಮಿಲಿಟರಿ ವ್ಯೂಹದ ನಡುವಣ ಯುದ್ಧಭೂಮಿ ಸುಮಾರು 427 ಕಿಲೋಮೀಟರ್​ಗಳಷ್ಟು ಉದ್ದವಿದೆ. ಈ ಸಂಘರ್ಷ ರೇಖೆಯ ಉದಕ್ಕೂ ನೆಲಬಾಂಬ್​ಗಳನ್ನು ಹುಗಿಯಲಾಗಿದೆ. ಎರಡೂ ಪಡೆಗಳು ಬಂದೂಕು ಮತ್ತು ಮೋರ್ಟಾರ್​ಗಳ ದಾಸ್ತಾನು ಇರಿಸಿಕೊಂಡಿವೆ. ಸ್ನೈಪರ್​ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಂದು ದಿನಕ್ಕೆ ಕನಿಷ್ಠ 300 ಬಾರಿ ಕದನವಿರಾಮ ಉಲ್ಲಂಘನೆಯಾಗುತ್ತಿದೆ. ಗುಂಡುಗಳ ಹಾರಾಟ ಎಗ್ಗಿಲ್ಲದೆ ಮುಂದುವರಿಯುತ್ತಿದೆ. ರಷ್ಯಾ ಸೈನಿಕರು ಮತ್ತು ರಷ್ಯಾ ಪರ ಇರುವ ಉಕ್ರೇನ್ ಪೌರತ್ವ ಹೊಂದಿರುವರಿಂದಲೇ ಕದನವಿರಾಮ ಹೆಚ್ಚಿನ ಸಂದರ್ಭಗಳಲ್ಲಿ ಉಲ್ಲಂಘನೆಯಾಗುತ್ತಿದೆ. ಆದರೆ ಉಕ್ರೇನ್ ಯೋಧರಿಗೆ ಮಾತ್ರ ಗುಂಡು ಹಾರಿಸದಂತೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ: Explainer: ವಿದೇಶದಲ್ಲಿರುವ ಭಾರತದ ಆಸ್ತಿಗಳ ವಶಕ್ಕೆ ಕೇರ್ನ್ ಎನರ್ಜಿ ಮುಂದಾಗಿರುವುದು ಏಕೆ?

ರಷ್ಯಾ ಪರ ಇರುವ ಪ್ರತ್ಯೇಕವಾದಿಗಳ ಮೇಲೆ ನಿಗಾ ಇರಿಸಿರುವ ಉಕ್ರೇನ್​ನ ಸೇನಾ ಠಾಣೆ

ಹೊಸ ಸಂಘರ್ಷಕ್ಕೆ ಮುನ್ನುಡಿ…
ರಷ್ಯಾ-ಉಕ್ರೇನ್ ನಡುವೆ ಇದೀಗ ನಡೆಯುತ್ತಿರುವ ಸಂಘರ್ಷಕ್ಕೆ ಬೀಜರೂಪಿ ಘಟನೆಯಾಗಿದ್ದು ಉಕ್ರೇನ್ ಸರ್ಕಾರ ತೆಗೆದುಕೊಂಡ ಕ್ರಮ. ಕಳೆದ ಫೆಬ್ರುವರಿ ತಿಂಗಳಲ್ಲಿ ಉಕ್ರೇನ್​ನ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯೊಂದು ನಡೆಯಿತು. ರಾಷ್ಟ್ರೀಯ ಭದ್ರತೆಗೆ ಧಕ್ಕೆಯೊದಗುವ ಸಂದರ್ಭ ಬಂದಾಗ ಭದ್ರತಾ ಮಂಡಳಿಯ ತುರ್ತು ಸಭೆ ಕರೆಯುವುದು ವಾಡಿಕೆ. ಫೆಬ್ರುವರಿ ತಿಂಗಳಲ್ಲಿ ನಡೆದ ಈ ಸಭೆಯು, ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ರ ಕುಟುಂಬ ಸ್ನೇಹಿತ ವಿಕ್ಟರ್ ಮೆಡ್ವೆಡ್​ಚುಕ್​ ವಿರುದ್ಧ ಹಲವು ನಿರ್ಬಂಧಗಳನ್ನು ಹೇರುವ ನಿರ್ಣಯ ತೆಗೆದುಕೊಂಡಿತು. ಅದರಂತೆ ಉಕ್ರೇನ್​ನಲ್ಲಿ ಪ್ರಸಾರವಾಗುತ್ತಿದ್ದ ಮೆಡ್ವೆಡ್​ಚುಕ್​ ಮಾಲೀಕತ್ವದ ಮೂರು ವಾಹಿನಿಗಳನ್ನು ಸ್ಥಗಿತಗೊಳಿಸಲಾಯಿತು. ಈ ಚಾನೆಲ್​ಗಳು ರಷ್ಯಾ ಪರ ಪ್ರಚಾರಾಂದೋಲನ ನಡೆಸುತ್ತಿವೆ. ರಷ್ಯಾದ ಹಿತಾಸಕ್ತಿಯನ್ನೇ ಪ್ರಧಾನವಾಗಿ ಬಿಂಬಿಸುತ್ತಿವೆ ಎಂದು ಉಕ್ರೇನ್​ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಉಕ್ರೇನ್​ನ ಈ ನಡೆಗೆ ರಷ್ಯಾ ಅಧಿಕೃತವಾಗಿ ಹೆಚ್ಚೇನೂ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಉಕ್ರೇನ್​ ಮಿಲಿಟರಿ ಪಡೆಗಳ ಮೇಲೆ ರಷ್ಯಾ ಪರ ಇರುವ ಪ್ರತ್ಯೇಕವಾದಿಗಳ ದಾಳಿ ನಾಟಕೀಯವಾಗಿ ಹೆಚ್ಚಾಯಿತು.

ಈ ಘಟನಾ ಸರಣಿಯ ಮುಂದುವರಿದ ಭಾಗವಾಗಿ ಕ್ರಿಮಿಯಾ ನಗರಕ್ಕೆ ಉಕ್ರೇನ್​ ನೀರು ಸರಬರಾಜು ಸ್ಥಗಿತಗೊಳಿಸಿತು. ಕ್ರಿಮಿಯಾ ನಗರಕ್ಕೆ ಈ ಮೊದಲು ಉತ್ತರ ಕ್ರಿಮಿಯನ್ ಕಾಲುವೆಯ ಮೂಲಕ ಬರುತ್ತಿತ್ತು. ಅತಿ ಕಡಿಮೆ ನೀರು ಲಭ್ಯತೆ ಇರುವ ಕಾರಣ ಕ್ರಿಮಿಯಾದಲ್ಲಿ ನೀರು ಸರಬರಾಜು ಸದಾ ದೊಡ್ಡ ವಿಷಯವೇ ಆಗಿರುತ್ತದೆ. ಕಾಲುವೆಯಲ್ಲಿ ನೀರು ಹರಿಸುವುದು ಸ್ಥಗಿತಗೊಂಡಿರುವ ಕ್ರಿಮಿಯಾ ನಗರದ ನೀರಿನ ಪರಿಸ್ಥಿತಿ ಹದಗೆಡುತ್ತಿದೆ. ಸಮುದ್ರದ ನೀರನ್ನು ಸಂಸ್ಕರಿಸಿ ಬಳಕೆಗೆ ಯೋಗ್ಯವಾಗಿಸುವ ಸಂಸ್ಕರಣಾ ಘಟಕ ಸ್ಥಾಪನೆಯ ಭರವಸೆಯನ್ನು ರಷ್ಯಾ ನೀಡಿದೆ. ಆದರೆ ಹಣಕಾಸು ಕೊರತೆಯಿಂದಾಗಿ ಇದು ಸಾಕಾರಗೊಂಡಿಲ್ಲ.

ರಷ್ಯಾಗೆ ಹಣಕಾಸಿನ ಕೊರತೆ
ರಷ್ಯಾ ಪರ ಪ್ರತ್ಯೇಕವಾದಿಗಳು ವಶಪಡಿಸಿಕೊಂಡಿರುವ ಕ್ರಿಮಿಯಾ ಮತ್ತು ಡೊನ್​ಬಾಸ್ ಪ್ರದೇಶಗಳ ನಿರ್ವಹಣೆಯನ್ನು ಪರೋಕ್ಷವಾಗಿ ರಷ್ಯಾ ನಿರ್ವಹಿಸುತ್ತಿದೆ. ಇದರ ಜೊತೆಗೆ ಜಾರ್ಜಿಯಾ ಮತ್ತು ಮಾಲ್ಡೊವಾ ದೇಶಗಳಿಂದ ವಶಪಡಿಸಿಕೊಂಡಿರುವ ಕ್ರಿಮಿಯಾ ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ನಿರ್ವಹಿಸಲು ರಷ್ಯಾ ಪ್ರತಿ ವರ್ಷ ಸಾಕಷ್ಟು ಹಣ ಖರ್ಚು ಮಾಡುತ್ತದೆ. ತೈಲೋತ್ಪನ್ನಗಳ ಬೆಲೆ ಕುಸಿತ ಮತ್ತು ಅಮೆರಿಕ-ಐರೋಪ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧದಿಂದಾಗಿ ರಷ್ಯಾದ ಆರ್ಥಿಕ ಸ್ಥಿತಿಯೂ ಸದೃಢವಾಗಿಲ್ಲ. ಹೀಗಾಗಿ ಆಕ್ರಮಿತ ಪ್ರದೇಶಗಳ ನಿರ್ವಹಣೆಗೆ ಬೇಕುಬೇಕಾದಂತೆ ಹಣ ಖರ್ಚು ಮಾಡುವ ಸ್ಥಿತಿಯಲ್ಲಿ ರಷ್ಯಾ ಇಲ್ಲ.

ಲುಶಾಂಕ್ ಪೀಪಲ್ಸ್​ ರಿಪಬ್ಲಿಕ್ ಮತ್ತು ಡೊನ್​ಟ್ಸಕ್ ಪೀಪಲ್ಸ್​ ರಿಪಬ್ಲಿಕ್ ಎನ್ನಲಾಗುವ ಪ್ರದೇಶಗಳ ನಿರ್ವಹಣೆಗೂ ಈಗ ಮೊದಲಿನಂತೆ ಹಣ ಹರಿದು ಬರುತ್ತಿಲ್ಲ. ಅವುಗಳ ಅಸ್ತಿತ್ವಕ್ಕೆ ಬೇಕಿರುವಷ್ಟು ಹಣವೂ ಅಲ್ಲಿನ ಆಡಳಿತದ ಹೊಣೆ ಹೊತ್ತವರಿಗೆ ಸಿಗುತ್ತಿಲ್ಲ. ಆದರೆ ಆಹಾರ ಕೊಡುವುದು ಹೆಚ್ಚು ಕಡಿಮೆಯಾದರೂ ಸರಿ, ಶಸ್ತ್ರಾಸ್ತ್ರ ಸರಬರಾಜು ಮಾಡುವುದನ್ನು ಮಾತ್ರ ರಷ್ಯಾ ತಪ್ಪಿಸುತ್ತಿಲ್ಲ. ಎರಡು ವರ್ಷಗಳ ಹಿಂದೆ ಅಧ್ಯಕ್ಷ ಝೆಲೆಂಸ್ಕಿ ನಾಯಕತ್ವದಲ್ಲಿ ಉಕ್ರೇನ್ ಈ ಪ್ರದೇಶಗಳನ್ನು ಸ್ವಾಯುತ್ತ ಘಟಕಗಳಿಗೆ ಮತ್ತೆ ತನ್ನ ದೇಶಕ್ಕೆ ಸೇರಿಸಿಕೊಳ್ಳಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರೀಕ್ಷಿಸಿದ್ದರು. ಆರ್ಥಿಕ ಕುಸಿತದಿಂದ ಕಂಗಾಲಾಗಿರುವ ರಷ್ಯಾದ ಹಣಕಾಸು ಪರಿಸ್ಥಿತಿ ಸುಧಾರಣೆಗೆ ಈ ಕ್ರಮ ನೆರವಾಗುತ್ತಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ನಂತರದ ದಿನಗಳಲ್ಲಿ ಝೆಲೆಂಸ್ಕಿ ಜೊತೆಗಿನ ಮಾತುಕತೆಗೆ ಅರ್ಥವೇ ಇಲ್ಲ ಎಂಬ ನಿಲುವಿಗೆ ಪುಟಿನ್ ಬಂದರು. ಇಂಥದ್ದೇ ಒಂದಷ್ಟು ಹೇಳಿಕೆಗಳು ಹೊರಬಿದ್ದ ನಂತರ ಉಕ್ರೇನ್ ಗಡಿಗೆ ಸೇನಾಪಡೆಗಳನ್ನು ರವಾನಿಸಲು ರಷ್ಯಾ ಮುಂದಾಯಿತು.

ಇದನ್ನೂ ಓದಿ: Explainer: ಭೂಸೇನೆ, ವಾಯುಪಡೆ, ನೌಕಾಪಡೆಗಳ ಏಕೀಕೃತ ಕಮಾಂಡ್ ರಚನೆ ಪ್ರಸ್ತಾವಕ್ಕೆ ಹೊಸವೇಗ, ದೇಶದ ಭದ್ರತೆಗೆ ಇದೇಕೆ ಅತ್ಯಗತ್ಯ?

ರಷ್ಯಾ-ಉಕ್ರೇನ್ ಗಡಿಯಲ್ಲಿ ನೆಲಬಾಂಬ್​ಗಳನ್ನು ಹುಗಿಯಲಾಗಿದೆ.

ಉಕ್ರೇನ್​ನಲ್ಲಿ ‘ಶರಣಾಗತಿ ಸಾಧ್ಯವಿಲ್ಲ’ ಆಂದೋಲನ
2019ರಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ಗೆದ್ದ ನಂತರ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಝೆಲೆಂಕ್ಸಿ, ಶೀಘ್ರದಲ್ಲಿಯೇ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಯುದ್ಧವನ್ನು ಕೊನೆಗಾಣಿಸಿ ಎಲ್ಲ ಆಕ್ರಮಿತ ಪ್ರದೇಶಗಳನ್ನು ಉಕ್ರೇನ್ ಭಾಗವಾಗಿಸಲಾಗುವುದು ಎಂದು ಹೇಳಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ನಡೆದ ಹಲವರು ಬೆಳವಣಿಗೆಗಳಿಂದ ಸ್ವತಃ ಝೆಲೆಂಕ್ಸಿ ಭ್ರಮನಿರಸನಗೊಂಡರು. ಇಂಥ ಹೇಳಿಕೆಗಳನ್ನು ಕೊಡುವುದನ್ನೇ ನಂತರದ ದಿನಗಳಲ್ಲಿ ಝೆಲೆಂಕ್ಸಿ ನಿಲ್ಲಿಸಿದರು. ಕ್ರಿಮಿಯಾಗೆ ನೀರು ಪೂರೈಕೆ ಸೇರಿದಂತೆ ಪುಟಿನ್​ ಬೇಡಿಕೆಯ ಯಾವೊಂದು ಅಂಶ ಈಡೇರಿಸಿದರೂ ಉಕ್ರೇನ್​ನ ಬೀದಿಗಳಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತವೆ ಎಂಬುದು ಝೆಲೆಂಕ್ಸಿಗೆ ಇದೀಗ ಮನವರಿಕೆಯಾಗಿದೆ.

‘ಶರಣಾಗತಿ ಸಾಧ್ಯವಿಲ್ಲ’ ಎಂಬ ಚಳವಳಿಯೊಂದು ಉಕ್ರೇನ್​ನಲ್ಲಿ ಈಗಾಗಲೇ ಸಕ್ರಿಯವಾಗಿದೆ. ಈ ಚಳವಳಿ ಮುನ್ನಡೆಸುತ್ತಿರುವ ಹಲವರು ಡೊನ್​ಬಾಸ್​ ಯುದ್ಧದಲ್ಲಿ ಪಾಲ್ಗೊಂಡಿದ್ದವರು ಎನ್ನುವುದು ಗಮನಾರ್ಹ ಸಂಗತಿ. ಹೀಗಾಗಿ ರಷ್ಯಾ ಜೊತೆಗಿನ ಸಂಘರ್ಷವೊಂದೇ ಉಕ್ರೇನ್​ಗೆ ಇರುವ ಏಕೈಕ ಆಯ್ಕೆಯಾಗಿದೆ. ಒಂದು ವೇಳೆ ಪೂರ್ಣ ಪ್ರಮಾಣದ ಯುದ್ಧವೇನಾದರೂ ನಡೆದರೆ ಐರೋಪ್ಯ ಒಕ್ಕೂಟ ಮತ್ತು ಅಮೆರಿಕದ ನೆರವು ಸಿಗಬಹುದು ಎಂಬ ನಿರೀಕ್ಷೆ ಝೆಲೆಂಕ್ಸಿ ಅವರಿಗಿದೆ.

3ನೇ ಮಹಾಯುದ್ಧದ ಆತಂಕ
ಉಕ್ರೇನ್-ರಷ್ಯಾ ನಡುವಣ ಸಂಘರ್ಷ ಶೀಘ್ರ ಶಮನಗೊಳ್ಳದೇ, ಪೂರ್ಣ ಪ್ರಮಾಣದ ಯುದ್ಧವಾಗಿ ರೂಪಾಂತರಗೊಂಡರೆ ಇದು 3ನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕ ಉಕ್ರೇನ್​ನ ಮಿತ್ರರಾಷ್ಟ್ರಗಳು. ಉಕ್ರೇನ್​ನ ಮಿತ್ರರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಪ್ರಬಲ ದೇಶಗಳಿವೆ. ಐರೋಪ್ಯ ಒಕ್ಕೂಟದ ಹಲವು ದೇಶಗಳಲ್ಲಿ ರಷ್ಯಾದ ವಿಶೇಷ ಸೇವೆಗಳ (ಸ್ಪೆಷಲ್ ಸರ್ವಿಸಸ್​) ಸಿಬ್ಬಂದಿ ನಡೆಸಿರುವ ಹಲವು ಹಗರಣಗಳು ಇದೀಗ ಬೆಳಕಿಗೆ ಬಂದಿದ್ದು, ಆ ದೇಶಗಳಲ್ಲಿ ರಷ್ಯಾದ ವಿರುದ್ಧ ಜನಾಭಿಪ್ರಾಯ ದಟ್ಟೈಸಿದೆ. 2014 ಮತ್ತು 2015ರಲ್ಲಿ ನಮ್ಮ ದೇಶಗಳ ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ರಷ್ಯಾದ ಏಜೆಂಟ್​ಗಳು ಸ್ಫೋಟಿಸಿದ್ದರು ಎಂದು ಝೆಕ್ ರಿಪಬ್ಲಿಕ್ ಮತ್ತು ಬಲ್ಗೇರಿಯಾ ದೇಶಗಳು ಆಧಾರ ಸಹಿತ ಹೇಳಿವೆ. ಈ ಎರಡೂ ದೇಶಗಳು ಉಕ್ರೇನ್​ಗೆ ಸರಬರಾಜು ಮಾಡಲೆಂದು ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಂಡಿದ್ದವು.

ಇನ್ನೇನು ಉಕ್ರೇನ್-ರಷ್ಯಾ ನಡುವೆ ಯುದ್ಧಸ್ಫೋಟಗೊಳ್ಳಬಹುದು ಸಾಧ್ಯತೆಯು ನಿಚ್ಚಳವಾಗುತ್ತಿದ್ದಂತೆಯೇ ಅದರ ಸಂಭಾವ್ಯ ದೂರಗಾಮಿ ಪರಿಣಾಮಗಳನ್ನು ಅರಿತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮುನ್ನೆಲೆಗೆ ಬಂದರು. ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ಸಂಭಾಷಣೆ ನಡೆಸಿದರು. ಉಕ್ರೇನ್​ಗೆ ಬೆಂಬಲವಾಗಿ ಕಪ್ಪು ಸಮುದ್ರಕ್ಕೆ ನಿಯೋಜಿಸಲೆಂದು ಕಳಿಸಿದ್ದ ಯುದ್ಧನೌಕೆಗಳನ್ನು ಅಮೆರಿಕ ಹಿಂದಕ್ಕೆ ಕರೆಸಲು ಸಮ್ಮತಿಸಿತು. ಇದಕ್ಕೆ ಪ್ರತಿಯಾಗಿ ಉಕ್ರೇನ್ ಗಡಿಯಿಂದ ರಷ್ಯಾ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ರಷ್ಯಾ ಒಪ್ಪಿಕೊಂಡಿತು. ಉಕ್ರೇನ್ ಗಡಿಯಲ್ಲಿ ದಟ್ಟೈಸಿದ್ದ ಯುದ್ಧದ ಕಾರ್ಮೋಡ ಇದೀಗ ಚೆದುರಿದೆ. ಆದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್​ ಪುಟಿನ್ ಅವರ ಮುಂದಿನ ನಿರ್ಧಾರದ ಮೇಲೆ ಉಕ್ರೇನ್ ಮತ್ತು ಜಗತ್ತಿನ ಶಾಂತಿನ ಭವಿಷ್ಯ ನಿಂತಿದೆ.

ಜನಮತಗಣನೆಯಲ್ಲಿದೆಯೇ ಪರಿಹಾರ?
ರಷ್ಯಾವನ್ನು ಹೆಚ್ಚು ಕೆರಳಿಸಿದರೆ ಆಗುವ ಅಪಾಯಗಳ ಬಗ್ಗೆ ಉಕ್ರೇನ್ ನಾಯಕತ್ವಕ್ಕೆ ಅರಿವಿದೆ. ಪುಟಿನ್​ರ ಪ್ರಮುಖ ಬೇಡಿಕೆಯಾಗಿರುವ ಕ್ರಿಮಿಯಾಗೆ ನೀರು ಸರಬರಾಜು ವಿಚಾರವನ್ನು ಹಿಂಬಾಗಿಲ ಮೂಲಕ ಪರಿಹರಿಸಿಕೊಳ್ಳಲು ಉಕ್ರೇನ್ ಯತ್ನಿಸುತ್ತಿದೆ. ಇದೇ ಕಾರಣಕ್ಕೆ ಈವರೆಗೆ ರಾಷ್ಟ್ರೀಯ ನೀರಾವರಿ ಸಂಸ್ಥೆಯ ಅಧೀನದಲ್ಲಿದ್ದ ಉತ್ತರ ಕ್ರಿಮಿಯಾ ಕಾಲುವೆ ನಿರ್ವಹಣೆ ಹೊಣೆಯನ್ನು ಇದೀಗ ಕೃಷಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾಲುವೆಯ ಮೂಲಕ ನೀಪಿಯರ್ ನದಿಗೆ ನೀರು ಹರಿಸಿದರೆ ರಷ್ಯಾದ ಬೇಡಿಕೆ ಈಡೇರಿದಂತೆ ಆಗುತ್ತದೆ. ಆದರೆ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿದರೆ ಉಕ್ರೇನ್​ ಬಾಗುತ್ತದೆ ಎಂಬ ಸಂದೇಶವೊಂದು ರಷ್ಯಾಗೆ ದೃಢಪಟ್ಟಂತೆ ಆಗುತ್ತದೆ. ಉಕ್ರೇನ್​ನ ಜನಾಭಿಪ್ರಾಯವೂ ಇದಕ್ಕೆ ವಿರುದ್ಧವಾಗಿದೆ. ದೇಶಭಕ್ತ ಉಕ್ರೇನ್ ಪ್ರಜೆಗಳು ತಮ್ಮ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ. ಒಂದೆಡೆ ಗಡಿಯಲ್ಲಿ ಸೇನಾ ಜಮಾವಣೆ, ಮತ್ತೊಂದೆಡೆ ಪ್ರತಿಕೂಲ ಜನಾಭಿಪ್ರಾಯ. ಉಕ್ರೇನ್ ಸರ್ಕಾರ ಈಗ ಅಡಕತ್ತರಿಯಲ್ಲಿ ಸಿಲುಕಿದಂತೆ ಆಗಿದೆ.

ಏನು ಮಾಡಿದರೂ ತಪ್ಪು ಎಂಬ ಸಂದಿಗ್ಧದಲ್ಲಿರುವ ಝೆಲೆಂಕ್ಸಿ ಇದೀಗ ಜನಮತಗಣನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಅವರು ಈ ಅಸ್ತ್ರ ಪ್ರಯೋಗಿಸಿದ್ದರು. ಉಕ್ರೇನ್ ಸಂಸತ್ತು ಸಹ ಈ ಪ್ರಸ್ತಾವನೆಯನ್ನು ಒಪ್ಪಿಕೊಂಡಿತ್ತು. ಡೊನ್​ಬಸ್ ವಿಚಾರದಲ್ಲಿ ರಷ್ಯಾ ಜೊತೆಗಿನ ಬಗೆಹರಿಯದ ಸಮಸ್ಯೆಗಳು, ಕ್ರಿಮಿಯಾ ನಗರಕ್ಕೆ ನೀರು ಸರಬರಾಜು ವಿಚಾರವನ್ನು ಝೆಲೆಂಕ್ಸಿ ಜನಮತಗಣನೆ ಮೂಲಕ ಪರಿಹರಿಸಿಕೊಳ್ಳಲು ಮುಂದಾಗಿದ್ದಾರೆ. ಜನಮತಗಣನೆಯ ನಂತರ ಮುಂದಿನ ನಿರ್ಧಾರಗಳನ್ನು ಉಕ್ರೇನ್ ಸರ್ಕಾರ ತೆಗೆದುಕೊಳ್ಳಲಿದೆ.

ದೇಶಭಕ್ತಿಯ ಆಂದೋಲನ, ಎಂದಿಗೂ ಶರಣಾಗುವುದಿಲ್ಲ ಎಂಬ ಕೆಚ್ಚು ಮೇಲ್ನೋಟಕ್ಕೆ ಪ್ರಬಲವಾಗಿರುವಂತೆ ಕಂಡುಬಂದರೂ ಉಕ್ರೇನ್​ನ ಬಹುಸಂಖ್ಯಾತ ನಾಗರಿಕರಿಗೆ ರಷ್ಯಾ ಜೊತೆಗೆ ಯುದ್ಧ ನಡೆದರೆ ಆಗುವ ಅನಾಹುತಗಳ ಅರಿವಿದೆ. ಪೂರ್ವ ಮತ್ತು ದಕ್ಷಿಣ ಉಕ್ರೇನ್​ನ ಬಹುತೇಕ ಜನರು ಇಂದಿಗೂ ರಷ್ಯಾ ಪರವಾಗಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಯೋಚಿಸಿದರೆ, ಉಕ್ರೇನ್​ ಜನಮತಗಣನೆಯು ರಷ್ಯಾ ಬಯಸಿದ ಫಲಿತಾಂಶವನ್ನೇ ನೀಡುವ ಸಾಧ್ಯತೆ ಹೆಚ್ಚು. ಒಂದು ವೇಳೆ ಅದು ಸಾಧ್ಯವಾದರೆ ಹೇಗಾದರೂ ಸಂಘರ್ಷ ತಪ್ಪಿಸಬೇಕು ಎಂದುಕೊಂಡಿರುವ ಉಕ್ರೇನ್ ಅಧ್ಯಕ್ಷ ಝೆಲೆಂಕ್ಸಿ ಸಹ ಪುಟಿನ್​ ಮುಂದಿಟ್ಟಿರುವ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಬಹುದು. ಆದರೆ ಈ ನಡೆಯನ್ನು ರಷ್ಯಾಗೆ ಶರಣಾದಂತೆ ಎಂದು ರಷ್ಯಾವನ್ನು ಖಂಡತುಂಡ ವಿರೋಧಿಸುವ ‘ಎಂದಿಗೂ ಶರಣಾಗುವುದಿಲ್ಲ’ ಆಂದೋಲನದ ಸದಸ್ಯರು ಪರಿಗಣಿಸಿದರೆ ಮಾತ್ರ ಉಕ್ರೇನ್​ನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯಬಹುದು.

(Ukraine and Russia on the verge of conflict Ukraine president moves for referendum)

ಇದನ್ನೂ ಓದಿ: Explainer: ಪುರಾತತ್ವಶಾಸ್ತ್ರದ ಮಹಾನ್ ಸಾಧಕ ಶಿಕಾರಿಪುರ ರಂಗನಾಥರಾವ್ ಅವರ 10 ಕೊಡುಗೆಗಳ ಪರಿಚಯ ಇಲ್ಲಿದೆ

ಇದನ್ನೂ ಓದಿ: Explainer: ನಮ್ಮ ಮೂಲ ಯಾವುದು? ಚೀನಾದಲ್ಲಿ ಸಿಕ್ಕ ಹಳೇ ತಲೆಬುರುಡೆ ಹೇಳಿದ ಹೊಸ ಪಾಠಗಳಿವು

Published On - 8:00 pm, Sun, 11 July 21