ಕೀವ್: ಉಕ್ರೇನ್ ಮೇಲಿನ ರಷ್ಯಾ ದಾಳಿ (Russia Ukraine Conflict) ಆರಂಭವಾಗಿ ನಾಳೆಗೆ (ಆಗಸ್ಟ್ 24) ಆರು ತಿಂಗಳಾಗುತ್ತದೆ. ಸೋವಿಯತ್ ಒಕ್ಕೂಟದಿಂದ (Soviet Union) ಉಕ್ರೇನ್ ಸ್ವಾತಂತ್ರ್ಯ ಘೋಷಿಸಿಕೊಂಡ ದಿನವೂ ಆಗಸ್ಟ್ 24 ಎನ್ನುವುದು ಗಮನಾರ್ಹ ಸಂಗತಿ. ಇದೇ ಕಾರಣಕ್ಕೆ ನಾಳೆ ರಷ್ಯಾ ದಾಳಿಯನ್ನು ತೀವ್ರಗೊಳಿಸಬಹುದು ಎಂಬ ಆತಂಕದಲ್ಲಿರುವ ಉಕ್ರೇನ್, ಎಲ್ಲ ಸಾರ್ವಜನಿಕ ಸಮಾರಂಭಗಳನ್ನು ರದ್ದುಗೊಳಿಸಿದೆ. ರಷ್ಯಾದ ಯುದ್ಧ ವಿಮಾನಗಳು ಉಕ್ರೇನ್ನ ರಸ್ತೆ, ಸೇತುವೆ, ಬಂದರು ಸೇರಿದಂತೆ ಮೂಲಸೌಕರ್ಯಗಳ ಮೇಲೆ ದಾಳಿ ತೀವ್ರಗೊಳಿಸಬಹುದು ಎಂದು ಅಮೆರಿಕ ಸೇರಿದಂತೆ ಹಲವು ದೇಶಗಳು ಎಚ್ಚರಿಸಿವೆ.
‘ಆಗಸ್ಟ್ 24ರಂದು ಉಕ್ರೇನ್ನ ಮೂಲಸೌಕರ್ಯ ವ್ಯವಸ್ಥೆ, ಸರ್ಕಾರಿ ಕಟ್ಟಡ ಮತ್ತು ಸೇನಾ ನೆಲೆಗಳ ಮೇಲೆ ಯುದ್ಧ ವಿಮಾನ ಮತ್ತು ರಾಕೆಟ್ಗಳ ಮೂಲಕ ವ್ಯಾಪಕ ದಾಳಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಏಕಾಏಕಿ ಒಮ್ಮೆಲೆ ಹಲವು ದಿಕ್ಕುಗಳಿಂದ ಸಂಘಟಿತ ದಾಳಿ ನಡೆಯುವ ಸಾಧ್ಯತೆಯಿದೆ. ನಾಗರಿಕರ ರಕ್ಷಣೆ ಕಷ್ಟವಾಗಬಹುದು’ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ರಷ್ಯಾ ದಾಳಿ ನಡೆಸಬಹುದು ಎಂದು ಹೆಳಿದ್ದ ಜನರಿಗೆ ಎಚ್ಚರದಿಂದ ಇರಬೇಕು ಎಂದು ತಿಳಿಸಿದ್ದಾರೆ. ದೇಶದ 31ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಅವರು, ‘ಈಗ ರಷ್ಯಾ ಏನಾದರೂ ಅಸಹ್ಯವಾಗುವಂಥದ್ದು ಮಾಡುತ್ತದೆ ಎಂಬುದು ನಮಗೆ ತಿಳಿದಿರಬೇಕು. ಆದರೆ ರಷ್ಯಾದ ದಾಳಿಯನ್ನು ಇಂದಲ್ಲ ನಾಳೆ ನಾವು ಹಿಮ್ಮೆಟ್ಟಿಸುತ್ತೇವೆ. ರಷ್ಯಾದ ವಶದಲ್ಲಿರುವ ಕ್ರಿಮಿಯಾದಲ್ಲಿ ಮತ್ತೆ ಉಕ್ರೇನ್ ಚಟುವಟಿಕೆಗಳು ಆರಂಭವಾಗುತ್ತಿವೆ’ ಎಂದು ತಿಳಿಸಿದರು.
ಮುಖಭಂಗ ಅನುಭವಿಸುತ್ತಿದೆ ರಷ್ಯಾ
ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದೊಂದಿಗೆ ಉಕ್ರೇನ್ ಮೇಲೆ ದಾಳಿಗೆ ಮುಂದಾದ ರಷ್ಯಾ ಸೇನೆಗೆ ಪ್ರತಿ ಹಂತದಲ್ಲಿಯೂ ಪ್ರತಿರೋಧ ಎದುರಾಯಿತು. ಜಾಗತಿಕ ಮಟ್ಟದಲ್ಲಿಯೂ ಹಲವು ದೇಶಗಳು ರಷ್ಯಾದ ಸರ್ಕಾರಿ ಮತ್ತು ಖಾಸಗಿ ವಹಿವಾಟಿಗೆ ನಿರ್ಬಂಧ ಹೇರಿದ ಪರಿಣಾಮ ರಷ್ಯಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು.
ಉಕ್ರೇನ್ ರಾಜಧಾನಿ ಕೀವ್ ನಗರದ ಹೊರವಲಯದವರೆಗೂ ಮುನ್ನುಗ್ಗಿ ಬಂದಿದ್ದ ರಷ್ಯಾ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಉಕ್ರೇನ್ ಸೇನೆ ಯಶಸ್ವಿಯಾಯಿತು. ಹಳ್ಳಿಗಳಲ್ಲಿ ಜನರೇ ರಷ್ಯಾ ಸೇನೆಯ ವಿರುದ್ಧ ಹೋರಾಟಕ್ಕೆ ಇಳಿದರು. ಟರ್ಕಿಯಿಂದ ಖರೀದಿಸಿದ ಡ್ರೋಣ್ಗಳು ಮತ್ತು ಅಮೆರಿಕ ನೀಡಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ರಷ್ಯಾದ ಲೆಕ್ಕಾಚಾರವನ್ನು ಬುಡಮೇಲು ಮಾಡಿತು. ರಷ್ಯಾದ ಸಾಕಷ್ಟು ಯುದ್ಧ ಟ್ಯಾಂಕ್ಗಳು ಹಾಗೂ ಅತ್ಯಾಧುನಿಕ ಯುದ್ಧನೌಕೆಯನ್ನು ರಷ್ಯಾ ಕಳೆದುಕೊಳ್ಳಬೇಕಾಯಿತು. ಆದರೆ ರಷ್ಯಾ ಆಗಲಿ ಉಕ್ರೇನ್ ಆಗಲಿ ಈವರೆಗೆ ಸೋತಿಲ್ಲ, ಸೋಲುವುದೂ ಇಲ್ಲ. ವಿಶ್ವದ ಹಲವು ದೇಶಗಳು ಹಸ್ತಕ್ಷೇಪ ಮಾಡುತ್ತಿರುವುದರಿಂದ ಸದ್ಯಕ್ಕೆ ಫಲಿತಾಂಶ ಹೀಗೆ ಎಂದು ಹೇಳಲೂ ಆಗುವುದಿಲ್ಲ.
ಯುದ್ಧದಿಂದಾಗಿ ಸುಮಾರು 66 ಲಕ್ಷ ಉಕ್ರೇನ್ ನಾಗರಿಕರು ದೇಶಭ್ರಷ್ಟರಾಗಿ ವಿದೇಶಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಪುರುಷರು ದೇಶಬಿಟ್ಟು ಹೋಗುವಂತಿಲ್ಲ ಎಂದು ಉಕ್ರೇನ್ ನಿರ್ಬಂಧ ವಿಧಿಸಿದೆ. ಈವರೆಗೆ ಸುಮಾರು 9,000 ಉಕ್ರೇನ್ ಯೋಧರು ಯುದ್ಧದಲ್ಲಿ ಮೃತಪಟ್ಟಿದ್ದಾರೆ. ರಷ್ಯಾ ಸೇನೆಯ ಸುಮಾರು 15,000 ಸೈನಿಕರು ಸಾವನ್ನಪ್ಪಿದ್ದಾರೆ. ಎರಡೂ ಕಡೆ ಈವರೆಗೆ ಸುಮಾರು 5,000 ನಾಗರಿಕರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ತೈಲ, ಆಹಾರ ಬಿಕ್ಕಟ್ಟು
ದಿನದಿಂದ ದಿನಕ್ಕೆ ಕದನಕಣ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ರಷ್ಯಾದ ಗಡಿಯೊಳಗೂ ಉಕ್ರೇನ್ ಹಲವು ಬಾರಿ ದಾಳಿ ಮಾಡಿದೆ. ಯುದ್ಧ ಬೇಗ ಮುಗಿದು, ಶಾಂತಿ ನೆಲೆಸಲಿ ಎಂದು ಭಾರತ ಸೇರಿ ವಿಶ್ವದ ಹಲವು ದೇಶಗಳು ಪ್ರಯತ್ನಿಸುತ್ತಿವೆ.
ಉಕ್ರೇನ್ ಯುದ್ಧವು ಯಾರೂ ಗೆಲ್ಲದ-ಯಾರೂ ಸೋಲದ ಸ್ಥಿತಿಗೆ ಬಂದು ತಲುಪಿದೆ. ಇದು ಇಡೀ ಜಗತ್ತಿಗೆ ಹತ್ತಾರು ಬಗೆಯ ಸಂಕಷ್ಟಗಳನ್ನು ತಂದೊಡ್ಡಿದೆ. ರಷ್ಯಾದಿಂದ ಬರುತ್ತಿದ್ದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲವನ್ನು ಅವಲಂಬಿಸಿದ್ದ ಯೂರೋಪ್ನ ಹಲವು ದೇಶಗಳಲ್ಲಿ ಬಿಕ್ಕಟ್ಟು ಎದುರಾಗಿದೆ. ಬಲಾಢ್ಯ ಆರ್ಥಿಕತೆ ಎನಿಸಿಕೊಂಡಿದ್ದ ಜರ್ಮನಿ ಮತ್ತು ಬ್ರಿಟನ್ ದೇಶಗಳು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿವೆ. ಉಕ್ರೇನ್ನಿಂದ ಬರುವ ಗೋಧಿಯನ್ನೇ ಅವಲಂಬಿಸಿದ್ದ ಈಜಿಪ್ಟ್, ಇಥಿಯೋಪಿಯಾ, ಲೆಬನಾನ್ನಂಥ ದೇಶಗಳು ಮುಂದಿನ ವರ್ಷ ಆಹಾರ ಸಮಸ್ಯೆ ಹೆಗೆ ಪರಿಹರಿಸಿಕೊಳ್ಳುವುದು ಎಂಬುದು ತೋಚದೆ ಕಂಗಾಲಾಗಿವೆ.