ಕೈವ್ನಲ್ಲಿ ಏಳುತ್ತಿರುವ ಬೆಂಕಿ
ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ (Russia-Ukraine) ನಡೆಸಿ ಕೆಲವು ತಾಸುಗಳೇ ಕಳೆದುಹೋಗಿವೆ. ನಮಗೆ ಉಕ್ರೇನ್ ಮೇಲೆ ಯುದ್ಧ ಮಾಡುವ ಇರಾದೆಯಿಲ್ಲ ಎಂದು ಹೇಳುತ್ತಲೇ ಬಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ (Vladimir Putin) ಇಂದು ದೂರದರ್ಶನದ ಮೂಲಕ ಮಾತನಾಡಿ, ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ. ಪುತಿನ್ ಆದೇಶ ಹೊರಬೀಳುತ್ತಿದ್ದಂತೆ ಉಕ್ರೇನ್ ಗಡಿ ದಾಟಿದ ರಷ್ಯಾ ಸೇನೆ ಶೆಲ್, ಕ್ಷಿಪಣಿ ದಾಳಿಯನ್ನು ನಡೆಸುತ್ತಿದೆ. ಇದೆಲ್ಲದ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಸುದ್ದಿಗೋಷ್ಠಿ ನಡೆಸಿ, ನಾವು ಯಾವುದೇ ಕಾರಣಕ್ಕೂ ರಷ್ಯಾಕ್ಕೆ ತಲೆಬಾಗುವುದಿಲ್ಲ. ನಾವು ಬಲಿಷ್ಠವಾಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ನಡೆದ ಪ್ರಮುಖ ಬೆಳವಣಿಗೆಗಳು ಹೀಗಿವೆ.
- ರಷ್ಯಾ ಸೇನೆಯ ಆಕ್ರಮಣಕ್ಕೆ ಉಕ್ರೇನ್ನ 40 ಸೈನಿಕರು ಮೃತಪಟ್ಟಿದ್ದಾರೆಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರ ತಿಳಿಸಿದ್ದಾರೆ. ಹಾಗೇ, ರಷ್ಯಾದ ಸುಮಾರು 50 ಯೋಧರನ್ನು ಕೊಂದಿದ್ದೇವೆ, ಇದುವರೆಗೆ ಏಳು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ಮಿಲಿಟರಿ ಪಡೆ ಹೇಳಿದೆ.
- ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ಟ್ವೀಟ್ ಮಾಡಿ, ದಾಳಿ ಮಾಡಿರುವ ರಷ್ಯಾ ವಿರುದ್ಧ ಹೋರಾಡಲು ಕೈಯಲ್ಲಿ ಶಸ್ತ್ರ ಹಿಡಿದು ಬಂದು ಸೈನಿಕರನ್ನು ಸೇರಿಕೊಳ್ಳುವ ನಾಗರಿಕರಿಗೆ ಸ್ವಾಗತ. ಅಗತ್ಯವಿದ್ದರೇ ಅಂಥವರಿಗೆ ನಾವೇ ಶಸ್ತ್ರವನ್ನೂ ನೀಡುತ್ತೇವೆ ಎಂದಿದ್ದಾರೆ.
- ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ನ್ಯಾಟೋ (NATO) ತೀವ್ರವಾಗಿ ಖಂಡಿಸಿದೆ. ರಷ್ಯಾ ಕೂಡಲೇ ಉಕ್ರೇನ್ನಿಂದ ಮಿಲಿಟರಿ ಪಡೆಯನ್ನು ಹಿಂಪಡೆದು, ಆಕ್ರಮಣವನ್ನು ನಿಲ್ಲಿಸಬೇಕು ಎಂದು ನ್ಯಾಟೋ ಪ್ರಧಾನಕಾರ್ಯದರ್ಶಿ ಜೆನ್ಸ್ ಸ್ಟೋಲ್ಟನ್ಬರ್ಗ್ ಆಗ್ರಹಿಸಿದ್ದಾರೆ.
- ಉಕ್ರೇನ್ನಲ್ಲಿ ಯುದ್ಧಾಂತಕ ಶುರುವಾದ ಬೆನ್ನಲ್ಲೇ ಕೈವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಅಲ್ಲಿರುವ ಭಾರತೀಯರಿಗಾಗಿ ಒಂದು ಅಡ್ವೈಸರಿ ಬಿಡುಗಡೆ ಮಾಡಿದೆ. ಉಕ್ರೇನ್ನಲ್ಲಿರುವ ಭಾರತೀಯರು ಎಲ್ಲೆಲ್ಲಿದ್ದೀರೋ, ಅಲ್ಲೇ ಸುರಕ್ಷಿತವಾಗಿರಿ. ಯಾರಾದರೂ ಕೈವ್ಗೆ ಆಗಮಿಸುತ್ತಿದ್ದರೆ, ದಯವಿಟ್ಟು ವಾಪಸ್ ಹೋಗಿಬಿಡಿ ಎಂದು ಹೇಳಿದೆ.
- ಸದ್ಯ ಉಕ್ರೇನ್ನ ವಾಯುಮಾರ್ಗ ಬಂದ್ ಆಗಿದ್ದು, ವಿಮಾನಯಾನ ದುಸ್ತರವಾಗಿದೆ. ಹಾಗಿದ್ದಾಗ್ಯೂ ಉಕ್ರೇನ್ನಲ್ಲಿರುವ 18 ಸಾವಿರ ಭಾರತೀಯರನ್ನು (ವಿದ್ಯಾರ್ಥಿಗಳೂ ಸೇರಿ) ಕರೆತರಲು ಭಾರತ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಪರ್ಯಾಯ ಮಾರ್ಗದಲ್ಲಿ ಭಾರತೀಯರನ್ನು ಕರೆತರಲಾಗುವುದು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
- ಇನ್ನು ಅಮೆರಿಕ, ಯುಕೆ, ಜರ್ಮನಿ, ಪೋಲ್ಯಾಂಡ್ ಸೇರಿ ಹಲವು ದೇಶಗಳು ಉಕ್ರೇನ್ ಬೆಳವಣಿಗೆಯನ್ನು ಗಮನಿಸುತ್ತಿವೆ. ರಷ್ಯಾ ಕೂಡಲೇ ಸೇನೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸುತ್ತಿವೆ. ಆಸ್ಟ್ರೇಲಿಯಾ ಮತ್ತು ಇಸ್ರೇಲ್ ದೇಶಗಳು ರಷ್ಯಾ ನಡೆಯನ್ನು ಟೀಕಿಸಿದ್ದು, ಇನ್ನೊಂದೆಡೆ ಫ್ರಾನ್ಸ್, ತುರ್ತಾಗಿ ನ್ಯಾಟೋ ಶೃಂಗಸಭೆಗೆ ನಡೆಸುವಂತೆ ಒತ್ತಾಯಿಸುತ್ತಿದೆ.
ಇದನ್ನೂ ಓದಿ: Russia-Ukraine War: ರಷ್ಯಾ- ಉಕ್ರೇನ್ ಯುದ್ಧ ಹಿನ್ನೆಲೆ; ಸಚಿವರ ತುರ್ತು ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ