World Meditation Day: ವಿಶ್ವಸಂಸ್ಥೆಯಲ್ಲಿ ವಿಶ್ವ ಧ್ಯಾನ ದಿನದ ಪ್ರಯುಕ್ತ ಜಗತ್ತಿಗೆ ಧ್ಯಾನದ ಮಹತ್ವ ಸಾರಿದ ರವಿಶಂಕರ್ ಗುರೂಜಿ

ಭಾರತ, ಶ್ರೀಲಂಕಾ, ಅಂಡೋರಾ, ಮೆಕ್ಸಿಕೊ, ನೇಪಾಳ ಇತರ ಸದಸ್ಯ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಗಳು, ಪ್ರಾಚೀನ ಪದ್ಧತಿಯಾದ ಧ್ಯಾನವನ್ನು ಆಚರಿಸಲು ಒಗ್ಗೂಡಿದ್ದಾರೆ. ಜಾಗತಿಕವಾಗಿ ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಲ್ಲಿ ಧ್ಯಾನದ ಅಗತ್ಯ ಮತ್ತು ಪಾತ್ರವನ್ನು ಅವರು ಹಂಚಿಕೊಂಡಿದ್ದಾರೆ. ಆರ್ಟ್ ಆಫ್ ಲಿವಿಂಗ್​ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ವಿಶ್ವಸಂಸ್ಥೆಯಲ್ಲಿ ವಿಶ್ವ ಧ್ಯಾನ ದಿನಾಚರಣೆಯ ಅಂಗವಾಗಿ ಪ್ರಾಸ್ತಾವಿಕ ಭಾಷಣ ಮಾಡಿದ್ದಾರೆ.

World Meditation Day: ವಿಶ್ವಸಂಸ್ಥೆಯಲ್ಲಿ ವಿಶ್ವ ಧ್ಯಾನ ದಿನದ ಪ್ರಯುಕ್ತ ಜಗತ್ತಿಗೆ ಧ್ಯಾನದ ಮಹತ್ವ ಸಾರಿದ ರವಿಶಂಕರ್ ಗುರೂಜಿ
Sri Sri Ravi Shankar Guruji

Updated on: Dec 20, 2025 | 6:36 PM

ನವದೆಹಲಿ, ಡಿಸೆಂಬರ್ 20: ವಿಶ್ವಸಂಸ್ಥೆಯ ಹಲವು ಸದಸ್ಯ ರಾಷ್ಟ್ರಗಳು ಎರಡನೇ ವಿಶ್ವ ಧ್ಯಾನ ದಿನವನ್ನು ಆಚರಿಸಲು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಒಟ್ಟುಗೂಡಿವೆ. ಜಾಗತಿಕ ಶಾಂತಿ, ಮಾನಸಿಕ ಆರೋಗ್ಯ ಮತ್ತು ನಾಯಕತ್ವಕ್ಕೆ ಧ್ಯಾನದ ಅಗತ್ಯವನ್ನು ಅವು ಪುನರುಚ್ಚರಿಸಿವೆ. ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ ಎಂಬ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ್ (Sri Sri Ravishankar) ಅವರ ಪ್ರಾಸ್ತಾವಿಕ ಭಾಷಣ ಮತ್ತು ಧ್ಯಾನದ ಮಾರ್ಗದರ್ಶನವಿತ್ತು. ಇದು ಭಾರತದ ನಾಗರಿಕತೆಯ ಪರಂಪರೆಯಲ್ಲಿ ಬೇರೂರಿರುವ ಧ್ಯಾನವೆಂಬ ಅಭ್ಯಾಸವನ್ನು ವಿಶ್ವದ ಪ್ರಮುಖ ರಾಜತಾಂತ್ರಿಕ ವೇದಿಕೆಯ ಕೇಂದ್ರಕ್ಕೆ ತಂದಿತು.

ಭಾರತ, ಶ್ರೀಲಂಕಾ, ಅಂಡೋರಾ, ಮೆಕ್ಸಿಕೊ, ನೇಪಾಳ ಸೇರಿದಂತೆ ಹಲವು ಸದಸ್ಯ ರಾಷ್ಟ್ರಗಳ ಶಾಶ್ವತ ಪ್ರತಿನಿಧಿಗಳು ಹಾಗೂ ವಿಶ್ವಸಂಸ್ಥೆಯ ವಿವಿಧ ಸಂಸ್ಥೆಗಳು ಒಟ್ಟಾಗಿ ಸೇರಿ ಪ್ರಸ್ತುತ ಕಾಲದ ಜಾಗತಿಕ ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಆರೋಗ್ಯಗಳ ಸವಾಲುಗಳಿಗೆ ಪರಿಹಾರಕ್ಕೆ ಪ್ರಾಚೀನ ಧ್ಯಾನ ಪದ್ಧತಿಯು ಹೇಗೆ ಸಹಾಯಕವೆಂದು ಚರ್ಚಿಸಿದರು.

ಅಮೆರಿಕದ ನ್ಯೂಯಾರ್ಕ್​ನಲ್ಲಿನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಎರಡನೇ ವಿಶ್ವ ಧ್ಯಾನ ದಿನದ ಅಂಗವಾಗಿ ಆಯೋಜಿಸಲಾದ ‘ಜಾಗತಿಕ ಶಾಂತಿ ಮತ್ತು ಸೌಹಾರ್ದತೆಗಾಗಿ ಧ್ಯಾನ’ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮತ್ತು ಅದರ ಅಂಗ ಸಂಸ್ಥೆಗಳು ಭಾಗವಹಿಸಿದ್ದವು. ಈ ವೇಳೆ ಜಾಗತಿಕ ಶಾಂತಿ, ಮಾನಸಿಕ ಸುಸ್ಥಿತಿ ಮತ್ತು ನಾಯಕತ್ವದಂತಹ ವಿಷಯಗಳಲ್ಲಿ ಧ್ಯಾನದ ಮಹತ್ತರವಾದ ಪಾತ್ರವನ್ನು ಗುರುತಿಸಲಾಯಿತು. ಈ ಸಂದರ್ಭದಲ್ಲಿ ಆರ್ಟ್​ ಆಫ್ ಲಿವಿಂಗ್​ನ ಸಂಸ್ಥಾಪಕ ಹಾಗೂ ಜಾಗತಿಕ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಪ್ರಧಾನ ಭಾಷಣ ಮಾಡಿದ್ದಾರೆ. ಧ್ಯಾನದ ಮಾರ್ಗದರ್ಶನವನ್ನು ನಡೆಸಿಕೊಡುವ ಮೂಲಕ, ಭಾರತದ ನಾಗರಿಕತೆಯ ಪರಂಪರೆಯಲ್ಲಿ ಬೇರೂರಿರುವ ಧ್ಯಾನ ಪದ್ಧತಿಯನ್ನು ವಿಶ್ವದ ಅತ್ಯಂತ ಮಹತ್ವದ ರಾಜತಾಂತ್ರಿಕ ವೇದಿಕೆಯ ಮೂಲಕ ಮುನ್ನೆಲೆಗೆ ತಂದಿದ್ದಾರೆ.

ಇದನ್ನೂ ಓದಿ: ಧ್ಯಾನ ಫ್ಯಾಷನ್ ಅಲ್ಲ, ಇಂದಿನ ಸಮಾಜದ ಅಗತ್ಯ; ಜಿನೀವಾದಲ್ಲಿ ರವಿಶಂಕರ್ ಗುರೂಜಿ ಅಭಿಮತ

ತಮ್ಮ ಭಾಷಣದ ಆರಂಭದಲ್ಲೇ ಗುರುದೇವ ರವಿಶಂಕರ್ ಅವರು ಒಂದು ಸರಳವಾದ ಮತ್ತು ಅರ್ಥಪೂರ್ಣವಾದ ಕಥೆಯನ್ನು ಹಂಚಿಕೊಂಡರು. ‘ಒಮ್ಮೆ ತತ್ವಜ್ಞಾನಿಗಳ ಗುಂಪೊಂದು ಧ್ಯಾನದ ಸಾರವನ್ನು ವಿವರಿಸಲು ಧ್ಯಾನಗುರುವೊಬ್ಬರನ್ನು ಕೇಳಿತು. ಅದಕ್ಕೆ ಗುರುಗಳು, ನೀವು ಅತ್ಯಂತ ಮೌಲ್ಯವಾದ ವಸ್ತುವನ್ನು ಒಂದು ಪಾತ್ರೆಯಲ್ಲಿ ತಂದುಕೊಡಿ ಎಂದರು. ಅವರು ನೀರು, ಮಣ್ಣು, ಎಣ್ಣೆ, ಜೇನು ಮತ್ತು ಹಾಲು ತುಂಬಿದ ಪಾತ್ರೆಗಳೊಂದಿಗೆ ಮರಳಿದರು. ಅವುಗಳನ್ನೆಲ್ಲ ಒಂದೇ ಪಾತ್ರೆಯಲ್ಲಿ ಸುರಿದಾಗ, ಅವರ ಪಾತ್ರೆಗಳು ಖಾಲಿಯಾದವು. ಇದೇ ಧ್ಯಾನ’ ಎಂದು ಗುರುದೇವ ರವಿಶಂಕರ್ ಹೇಳಿದ್ದಾರೆ.


ಈ ಕಥೆಯನ್ನು ವಿವರಿಸಿದ ಗುರುದೇವ ರವಿಶಂಕರ್, ತತ್ವಶಾಸ್ತ್ರಗಳು ಮನಸ್ಸೆಂಬ ಪಾತ್ರೆಯನ್ನು ತುಂಬುತ್ತವೆ. ಆದರೆ ಧ್ಯಾನವು ಚಿಂತನೆಯಾಚೆ ಕರೆದೊಯ್ದು ಅಂತರಂಗದಲ್ಲಿ ಸ್ಪಷ್ಟತೆ ಮತ್ತು ಶಾಂತಿ – ನೆಮ್ಮದಿಯನ್ನು ಅನುಭವಿಸಲು ಅವಕಾಶ ಮಾಡಿಕೊಡುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಇಂದಿನ ಜಗತ್ತಿನಲ್ಲಿ, ಧ್ಯಾನವನ್ನು ಅತ್ಯಂತ ತುರ್ತಾಗಿ ಅಭ್ಯಾಸ ಮಾಡಬೇಕಾಗಿದೆ ಎಂದು ಅವರು ಉಲ್ಲೇಖಿಸಿದರು. ವಿಶ್ವದಾದ್ಯಂತ ಸುಮಾರು 500ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಈಗಾಗಲೇ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳುತ್ತಿರುವುದನ್ನೂ ಅವರು ಪ್ರಸ್ತಾಪಿಸಿದರು.

ಇದನ್ನೂ ಓದಿ: World Meditation Day: ಡಿ. 21 ವಿಶ್ವ ಧ್ಯಾನ ದಿನ; ಅಶಾಂತ ಜಗತ್ತಿಗೆ ಧ್ಯಾನವೇ ಶಾಂತಿಯ ದಾರಿ: ರವಿಶಂಕರ್ ಗುರೂಜಿ

ಉಕ್ರೇನ್‌ನಲ್ಲಿನ 8,000ಕ್ಕೂ ಹೆಚ್ಚು ಸೈನಿಕರು ಆಘಾತ ಮತ್ತು ಒತ್ತಡದಿಂದ ಹೊರಬರಲು ಧ್ಯಾನವನ್ನು ಕಲಿತಿದ್ದಾರೆ. ಅದು ಅವರ ಮನೋಬಲವನ್ನು ಮರುಸ್ಥಾಪಿಸಿತು ಎಂದು ಹೇಳಿದ ರವಿಶಂಕರ್ ಗುರೂಜಿ, ಧ್ಯಾನವು ಕೇವಲ ಶಾಲಾ ತರಗತಿಗಳಲ್ಲಿ ಚಿಕಿತ್ಸೆಗಳಲ್ಲಿ ಮಾತ್ರವಲ್ಲದೇ, ಯುದ್ಧಭೂಮಿಯಲ್ಲೂ ಇದರ ಪಾತ್ರ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21ರಂದು ವಿಶ್ವ ಧ್ಯಾನ ದಿನವೆಂದು ಅಧಿಕೃತವಾಗಿ ಘೋಷಿಸಿ, ಧ್ಯಾನವನ್ನು ಭಾವನಾತ್ಮಕ ಸ್ಥೈರ್ಯ, ಮಾನಸಿಕ ಆರೋಗ್ಯ ಮತ್ತು ಶಾಂತಿ ಸಾಮರಸ್ಯಕ್ಕೆ ನೆರವಾಗುವ ವಿಶ್ವವ್ಯಾಪಿ ಅನುಸರಿಸಬಹುದಾದ ಪದ್ಧತಿಯಾಗಿ ಗುರುತಿಸಿತ್ತು. ಭಾರತಕ್ಕೆ ದೀರ್ಘಕಾಲದಿಂದ ಪರಿಚಿತವಾಗಿರುವ ಈ ಧ್ಯಾನದ ಪರಂಪರೆ, ಇಂದಿನ ಜಾಗತಿಕ ಸವಾಲುಗಳನ್ನು ಎದುರಿಸಲು ಉಪಯುಕ್ತ ಸಾಧನವಾಗಿ ಜಾಗತಿಕ ಸ್ವೀಕಾರ ಪಡೆಯುತ್ತಿರುವುದನ್ನು ಈ ಘೋಷಣೆ ಪ್ರತಿಬಿಂಬಿಸುತ್ತದೆ.

ಪ್ರತಿನಿಧಿಗಳನ್ನು ಸ್ವಾಗತಿಸಿದ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಪಿ. ಹರೀಶ್, ಆರ್ಥಿಕ ಅನಿಶ್ಚಿತತೆ, ರಾಜಕೀಯ ಅಸ್ಥಿರತೆ ಮತ್ತು ನಿರಂತರ ಸಂಘರ್ಷಗಳಿಂದ ಒತ್ತಡದಲ್ಲಿರುವ ಜಗತ್ತಿನ ಸ್ಥಿತಿಗತಿಗಳನ್ನು ವಿವರಿಸಿದರು. ಸ್ಪಷ್ಟತೆ, ಆತ್ಮಜ್ಞಾನ ಮತ್ತು ಸಮತೋಲನದ ನಿರ್ಧಾರ ಸಾಮರ್ಥ್ಯವನ್ನು ಬೆಳೆಸುವ ಧ್ಯಾನವನ್ನು ಅವರು ಬಣ್ಣಿಸಿದರು. ರಾಜತಾಂತ್ರಿಕತೆ ಮತ್ತು ನಾಯಕತ್ವದಲ್ಲಿಯೂ ಇದರ ಮಹತ್ವವನ್ನು ಸೂಚಿಸಿದರು.

ವಿವಿಧ ಪ್ರದೇಶಗಳ ಪ್ರತಿನಿಧಿಗಳು ಇದೇ ಅಭಿಪ್ರಾಯವನ್ನು ಹಂಚಿಕೊಂಡರು. ಅಂಡೋರಾದ ರಾಯಭಾರಿ ಜೋನ್ ಫೋರ್ನರ್ ರೋವಿರಾ, ತಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಧ್ಯಾನವನ್ನು ಅಳವಡಿಸಿಕೊಂಡ ನಂತರ ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಭಾವನಾತ್ಮಕ ಸಾಮರಸ್ಯದಲ್ಲಿ ಕಂಡ ಸುಧಾರಣೆಯನ್ನು ಹಂಚಿಕೊಂಡರು. ಮೆಕ್ಸಿಕೋದ ಉಪ ಶಾಶ್ವತ ಪ್ರತಿನಿಧಿ ರಾಯಭಾರಿ ಅಲಿಸಿಯಾ ಗುಡಲುಪೆ ಬುವೆನೊಸ್ಟ್ರೋ ಮಾಸಿಯು, ಜಾಗತಿಕ ಸೌಹಾರ್ದತೆಗೆ ಆಂತರಿಕ ಶಾಂತಿಯೇ ಅಡಿಪಾಯ ಎಂದು ಹೇಳಿದರು. ನೇಪಾಳದ ರಾಯಭಾರಿ ಲೋಕ್ ಬಹಾದುರ್ ಥಾಪಾ, ಹಿಮಾಲಯ ಪ್ರದೇಶದ ನಾಗರಿಕತೆಯಲ್ಲಿ ಧ್ಯಾನದ ಆಳವಾದ ಬೇರುಗಳನ್ನು ನೆನಪಿಸಿ, ಹವಾಮಾನ ಬದಲಾವಣೆಗಳಿಂದ ಹಿಡಿದು ತಪ್ಪು ತಿಳುವಳಿಕೆಯಂತಹ ಜಾಗತಿಕ ಸಂಕಷ್ಟಗಳನ್ನು ಎದುರಿಸಲು ಧ್ಯಾನ ಸಹಾಯಕ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರಲ್ಲಿ ಮಹರ್ಷಿ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಡಾ. ರಾಬರ್ಟ್ ಶ್ನೈಡರ್, ಯೋಗಮಾತಾ ಫೌಂಡೇಶನ್‌ನ ಯೋಗಮಾತಾ ಕೈಕೊ ಐಕಾವಾ, ಬ್ರಹ್ಮಕುಮಾರಿ ವಿಶ್ವ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಆಡಳಿತ ಮತ್ತು ಆಧ್ಯಾತ್ಮಿಕ ಮುಖ್ಯಸ್ಥೆ ಬಿ.ಕೆ. ಮೋಹಿನಿ ಪಂಜಾಬಿ, ಜೀವನ ವಿಜ್ಞಾನ ಫೌಂಡೇಶನ್ ನೇಪಾಳದ ಎಲ್.ಪಿ. ಭಾನು ಶರ್ಮಾ, ರಟ್ಗರ್ಸ್ ವಿಶ್ವವಿದ್ಯಾಲಯದ ಡಾ. ಲಸಂತ ಚಂದನ ಗುಣತಿಲಕೆ ಹಾಗೂ ವಿಜ್ಞಾನಿ, ‘ಶಾಂತಿಗೆ ವಿಜ್ಞಾನಿಗಳ ಜಾಗತಿಕ ಒಕ್ಕೂಟ’ದ ಅಧ್ಯಕ್ಷ ಮತ್ತು ಟ್ರಾನ್ಸೆಂಡೆಂಟಲ್ ಮೆಡಿಟೇಶನ್ ಚಳವಳಿಯ ನಾಯಕ ಡಾ. ಜಾನ್ ಹ್ಯಾಗೆಲಿನ್ ಸೇರಿದ್ದರು.

ಈ ಕಾರ್ಯಕ್ರಮದ ಅಂತ್ಯದಲ್ಲಿ ಗುರುದೇವ ರವಿಶಂಕರ್ ಅವರು, ರಾಯಭಾರಿಗಳು ಮತ್ತು ಪ್ರತಿನಿಧಿಗಳಿಗೆ 20 ನಿಮಿಷಗಳ ಕಾಲ ಧ್ಯಾನವನ್ನು ಅಭ್ಯಾಸ ಮಾಡಿಸಿದರು. ಇದರಿಂದ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಪರೂಪದ ನಿಶ್ಶಬ್ದ ಕ್ಷಣವೊಂದು ಮೂಡಿತು. ಪ್ರಾಚೀನ ಪರಂಪರೆಯಿಂದ ಹುಟ್ಟಿದ ಈ ಪದ್ಧತಿಯು ಇಂದಿಗೂ ಜಾಗತಿಕ ವೇದಿಕೆಯಲ್ಲಿ ಹೊಸ ಅರ್ಥವನ್ನು ಪಡೆದುಕೊಳ್ಳುತ್ತಿರುವುದಕ್ಕೆ ಈ ಮೌನದ ಕ್ಷಣ ಸಾಕ್ಷಿಯಾಯಿತು.

ಡಿಸೆಂಬರ್ 21ರಂದು ವಿಶ್ವ ಧ್ಯಾನ ದಿನಾಚರಣೆ ನಡೆಯಲಿದೆ. ನ್ಯೂಯಾರ್ಕ್‌ನಿಂದಲೇ ಗುರುದೇವ ರವಿಶಂಕರ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ವಿಶ್ವದಾದ್ಯಂತದ ಧ್ಯಾನವನ್ನು ನೇರ ಪ್ರಸಾರದಲ್ಲಿ ಮಾರ್ಗದರ್ಶನ ಮಾಡಲಿದ್ದು, ಭಾರತ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಈ ಸಮೂಹ ಧ್ಯಾನದಲ್ಲಿ ಭಾಗವಹಿಸಲಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:34 pm, Sat, 20 December 25