ಧ್ಯಾನ ಫ್ಯಾಷನ್ ಅಲ್ಲ, ಇಂದಿನ ಸಮಾಜದ ಅಗತ್ಯ; ಜಿನೀವಾದಲ್ಲಿ ರವಿಶಂಕರ್ ಗುರೂಜಿ ಅಭಿಮತ
ಧ್ಯಾನವೆಂಬುದು ಐಷಾರಾಮಿಯಲ್ಲ, ಅದೊಂದು ಅಗತ್ಯ. ವೈಯಕ್ತಿಕ ಶಾಂತಿಗೆ ಮಾತ್ರವಲ್ಲದೆ, ದಣಿವು, ಒತ್ತಡ, ಘರ್ಷಣೆ, ಅನಿಶ್ಚಿತತೆ ಮತ್ತು ಭಾವನಾತ್ಮಕ ಸಂಕಟಗಳಿಂದ ಬಳಲುತ್ತಿರುವ ಸಮಾಜಕ್ಕೆ ಧ್ಯಾನ ಅತ್ಯಂತ ಅಗತ್ಯ. ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಶಕ್ತಿಶಾಲಿ ಸಾಧನವೆಂದರೆ ಅದು ಧ್ಯಾನ ಎಂದು ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಹಾಗೂ ಜಾಗತಿಕ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ. ವಿಶ್ವ ಧ್ಯಾನ ದಿನದ ಹಿನ್ನೆಲೆಯಲ್ಲಿ ಅವರು ಜಿನೀವಾದಲ್ಲಿ ಮಾತನಾಡಿದ್ದಾರೆ.

ನವದೆಹಲಿ, ಡಿಸೆಂಬರ್ 19: ಡಿಸೆಂಬರ್ 21ರಂದು ಜಗತ್ತಿನಾದ್ಯಂತ ವಿಶ್ವ ಧ್ಯಾನ ದಿನವನ್ನು ಆಚರಿಸಲಾಗುತ್ತದೆ. ಸಾರ್ವಜನಿಕ ಆರೋಗ್ಯ, ಸಾಮಾಜಿಕ ಸ್ಥಿತಿಸ್ಥಾಪಕತ್ವ ಮತ್ತು ಅಂತಾರಾಷ್ಟ್ರೀಯ ಸಹಕಾರದ ಆಧಾರಸ್ತಂಭವಾಗಿ ಧ್ಯಾನವನ್ನು ಮುನ್ನಡೆಸುವಲ್ಲಿ ಭಾರತದ ನಾಯಕತ್ವವು ಇದೀಗ ಜಾಗತಿಕ ಗಮನಕ್ಕೆ ಬರುತ್ತಿದೆ. 2024ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದ ನಿರ್ಣಯದ ನಂತರ ಡಿಸೆಂಬರ್ 21 ಅನ್ನು ವಿಶ್ವ ಧ್ಯಾನ ದಿನವೆಂದು (World Meditation Day) ವಿಶ್ವಸಂಸ್ಥೆಯು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿನೀವಾದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ವಿಶ್ವ ಧ್ಯಾನ ದಿನಕ್ಕೂ ಮುನ್ನ ಭಾಷಣವನ್ನು ಮಾಡಿದ್ದಾರೆ.
ರವಿಶಂಕರ್ ಗುರೂಜಿ ಅವರು ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿಯಲ್ಲಿ ಭಾಗವಹಿಸಿದ್ದು, ವಿಶ್ವ ಧ್ಯಾನ ದಿನದ ಪ್ರಯುಕ್ತ ಧ್ಯಾನ ತರಬೇತಿಯನ್ನು ಕೂಡ ನೀಡಿದ್ದಾರೆ. ಅಲ್ಲಿ ಅವರು ಸಮಕಾಲೀನ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಧ್ಯಾನದಿಂದ ಯಾವ ರೀತಿಯ ಪರಿಹಾರವನ್ನು ಪಡೆಯಬಹುದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಿನೀವಾದಲ್ಲಿ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ರವಿಶಂಕರ್ ಗುರೂಜಿ, ಸಮಾಜದಲ್ಲಿ ಹೆಚ್ಚುತ್ತಿರುವ ಒತ್ತಡ, ಒಂಟಿತನ ಮತ್ತು ಭಾವನಾತ್ಮಕ ಆಯಾಸಕ್ಕೆ ಧ್ಯಾನದ ಮೊರೆಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು. ಜಗತ್ತು ಧ್ಯಾನದ ಮಹತ್ವವನ್ನು ಗುರುತಿಸಿದೆ. ಧ್ಯಾನವೆಂಬುದು ಫ್ಯಾಷನ್ ಅಥವಾ ಐಷಾರಾಮಿ ಅಲ್ಲ, ಇದು ಇಂದಿನ ಸಮಾಜದ ಅಗತ್ಯವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕೆಂದು ಅವರು ಕರೆನೀಡಿದ್ದಾರೆ.
ಇದನ್ನೂ ಓದಿ: ಅಂಗವಿಕಲರಿಗಾಗಿ ಮಿರಾಕಲ್ ಆಫ್ ಮೈಂಡ್ ಧ್ಯಾನ ಪರಿಚಯಿಸಿದ ಸದ್ಗುರುವಿನ ಇಶಾ ಫೌಂಡೇಷನ್
ನಮ್ಮ ಜನಸಂಖ್ಯೆಯ ಅರ್ಧದಷ್ಟು ಜನರು ಒಂಟಿತನದಿಂದ ಬಳಲುತ್ತಿದ್ದಾರೆ. ನಮ್ಮ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ನಮ್ಮೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವಂತಹ ಪ್ರಯತ್ನ ಮಾಡಬೇಕಾಗಿದೆ. ಅದು ನಮ್ಮ ಎಲ್ಲಾ ಒತ್ತಡವನ್ನು ತೊಡೆದುಹಾಕಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: World Meditation Day: ಡಿ. 21 ವಿಶ್ವ ಧ್ಯಾನ ದಿನ; ಅಶಾಂತ ಜಗತ್ತಿಗೆ ಧ್ಯಾನವೇ ಶಾಂತಿಯ ದಾರಿ: ರವಿಶಂಕರ್ ಗುರೂಜಿ
ನಮ್ಮ ಪ್ರಜ್ಞಾಪೂರ್ವಕ ಸ್ಥಿತಿಯು ದಾರಿಯಾದರೆ, ಧ್ಯಾನವು ಮನೆ ಇದ್ದಂತೆ. ಧ್ಯಾನವು ನಿಮ್ಮನ್ನು ನಿಮ್ಮ ಅಂತರಾಳಕ್ಕೆ ಕೊಂಡೊಯುತ್ತದೆ ಹಾಗೂ ನೆಮ್ಮದಿಯನ್ನು ನೀಡುತ್ತದೆ. ಧ್ಯಾನ ಮಾಡುವುದು ಕಷ್ಟವೇನಲ್ಲ. ಕಂಪ್ಯೂಟರ್‌ನಲ್ಲಿ ಅನಾವಶ್ಯಕ ಫೈಲ್ಗಳನ್ನು ತೆಗೆದುಹಾಕಲು ಡಿಲೀಟ್ ಬಟನ್ ಒತ್ತುವಂತೆ ಧ್ಯಾನ ಮಾಡುವುದರಿಂದ ಮನಸ್ಸಿನಲ್ಲಿರುವ ಅನವಶ್ಯಕ ವಿಷಯಗಳಿಂದ ಮುಕ್ತಿ ದೊರೆಯುತ್ತದೆ ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.
ವಿಶ್ವ ಧ್ಯಾನ ದಿನದಂದು ಭಾರತದ ಪಾಲ್ಗೊಳ್ಳುವಿಕೆಯು ಸಾರ್ವಜನಿಕ ಆರೋಗ್ಯ ಆದ್ಯತೆಗಳು, ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಬಹುಪಕ್ಷೀಯ ಸಂವಾದದ ಒಮ್ಮುಖವನ್ನು ಪ್ರತಿಬಿಂಬಿಸುತ್ತದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




