H-1B Visa ನಿರ್ಬಂಧಕ್ಕೆ ತಡೆ; ಸದ್ಯ ಭಾರತೀಯ ಉದ್ಯೋಗಿಗಳು ನಿರಾಳ

|

Updated on: Dec 03, 2020 | 11:13 AM

ಬೇರೆ ರಾಷ್ಟ್ರಗಳಿಂದ ಬಂದು ಇಲ್ಲಿ ಕೆಲಸ ಮಾಡುವವರಿಗೆ ನಾವು ಅವಕಾಶ ನೀಡಬೇಕು. ನಮ್ಮ ಆರ್ಥಿಕತೆ ಅಭಿವೃದ್ಧಿಗೆ ಅವರ ಕೊಡುಗೆ ಕೂಡ ಮುಖ್ಯವಾಗಿದೆ ಎಂದು ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯ ಹೇಳಿದೆ. ಈ ಮೂಲಕ ಟ್ರಂಪ್ ನಿರ್ಧಾರಕ್ಕೆ ತಡೆ ನೀಡಿದೆ.

H-1B Visa ನಿರ್ಬಂಧಕ್ಕೆ ತಡೆ; ಸದ್ಯ ಭಾರತೀಯ ಉದ್ಯೋಗಿಗಳು ನಿರಾಳ
ಸಾಂದರ್ಭಿಕ ಚಿತ್ರ
Follow us on

ವಾಷಿಂಗ್ಟನ್: ಅಮೆರಿಕದವರಿಗೆ ಹೆಚ್ಚಾಗಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1 ಬಿ ವೀಸಾ ಮೇಲೆ ನಿರ್ಬಂಧ ಹೇರಿದ್ದರು. ಡಿಸೆಂಬರ್ 7ರಿಂದ ಈ ನಿಯಮ ಜಾರಿಗೆ ಬರುವುದರಲ್ಲಿತ್ತು. ಅದಕ್ಕೂ ಮೊದಲೇ ಅಮೆರಿಕ ನ್ಯಾಯಾಲಯ ಈ ನಿರ್ಬಂಧಕ್ಕೆ ತಡೆ ನೀಡಿದೆ. ಇದರಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು ನಿರಾಳರಾಗಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಪ್ರಶ್ನಿಸಿ ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಹಿಂದಿನ ನ್ಯಾಯಾಲಯಕ್ಕೆ ಛೀಮಾರಿ ಹಾಕಿದೆ. ಎಚ್-1 ಬಿ ವೀಸಾ H1 B Visa Rule ಮೇಲಿನ ನಿರ್ಬಂಧದ ನಿರ್ಧಾರ ಸರಿ ಇಲ್ಲ. ಇದೊಂದು ತರಾತುರಿಯ ಕ್ರಮ. ಈ ನಿರ್ಧಾರ ಕೈಗೊಳ್ಳುವುದಕ್ಕೂ ಮೊದಲು ಸಾರ್ವಜನಿಕರ ಪ್ರತಿಕ್ರಿಯೆಯನ್ನು ಪಡೆದುಕೊಂಡಿಲ್ಲ. ಹೀಗಾಗಿ, ಇದಕ್ಕೆ ನಾವು ತಡೆ ನೀಡುತ್ತಿದ್ದೇವೆ ಎಂದು ಕೋರ್ಟ್ ಹೇಳಿದೆ.

ಬೇರೆ ರಾಷ್ಟ್ರಗಳಿಂದ ಬಂದು ಇಲ್ಲಿ ಕೆಲಸ ಮಾಡುವವರಿಗೆ ನಾವು ಅವಕಾಶ ನೀಡಬೇಕು. ನಮ್ಮ ಆರ್ಥಿಕತೆ ಅಭಿವೃದ್ಧಿಗೆ ಅವರ ಕೊಡುಗೆ ಕೂಡ ಮುಖ್ಯವಾಗಿದೆ ಎಂದು ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಮೂಲಕ ಟ್ರಂಪ್ ನಿರ್ಧಾರಕ್ಕೆ ತಡೆ ನೀಡಿದೆ.

ನಿರ್ಬಂಧ ಏಕೆ?:

ಅಮೆರಿಕದಲ್ಲಿ ಕೊರೋನಾ ವೈರಸ್ ಪ್ರಕರಣ ಮಿತಿ ಮೀರಿ ಏರಿಕೆ ಆಗಿತ್ತು. ಇದರಿಂದ ಅಮೆರಿಕದಲ್ಲಿ ಸಾಕಷ್ಟು ಕಂಪೆನಿಗಳ ಆದಾಯ ನೆಲ ಕಚ್ಚಿತ್ತು. ಅಲ್ಲದೆ, ನಿರುದ್ಯೋಗ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು. ಈ ವೇಳೆ ಹೊರ ದೇಶದಿಂದ ಬಂದವರನ್ನು ಕೆಲಸದಿಂದ ತೆಗೆದು, ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಟ್ರಂಪ್ ಎಚ್-1 ಬಿ ವೀಸಾ ಮೇಲೆ ಟ್ರಂಪ್ ನಿರ್ಬಂಧ ಹೇರಿದ್ದರು. ಇದರ ಬೆನ್ನಲ್ಲೇ ಅನೇಕ ಭಾರತೀಯರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದರೆ, ಈಗ ಕೋರ್ಟ್ ಇದರ ಮೇಲೆ ನಿರ್ಬಂಧ ಹೇರಿರುವುದಕ್ಕೆ ಸಾಕಷ್ಟು ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಚುನಾವಣೆ ಮೇಲೆ ಕಣ್ಣು.. ವೀಸಾ ನಿರ್ಬಂಧ ಸಡಿಲುಗೊಳಿಸಿದ ದೊಡ್ಡಣ್ಣ ಟ್ರಂಪ್‌!

Published On - 11:08 am, Thu, 3 December 20