ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಹುದ್ದೆಯನ್ನು ಜೋ ಬೈಡನ್ ಅಲಂಕರಿಸಲಿರುವುದು ಬಹುತೇಕ ನಿಶ್ಚಯವಾಗಿದೆ. ಇಂದು, ಅಮೆರಿಕಾದ ಎಲೆಕ್ಟೊರಲ್ ಕಾಲೇಜ್ ಬೈಡನ್ ಗೆಲುವನ್ನು ದೃಢೀಕರಿಸಿದ್ದು ಪ್ರತಿಪಕ್ಷದ ಡೊನಾಲ್ಡ್ ಟ್ರಂಪ್ ಮನೆ ಸೇರುವುದು ಖಚಿವಾದಂತಾಗಿದೆ.
538 ಸದಸ್ಯರ ಎಲೆಕ್ಟೊರಲ್ ಕಾಲೇಜ್, ಬೈಡನ್ ತಮ್ಮ ಗೆಲುವಿಗೆ ಬೇಕಾದ 270 ಸ್ಥಾನಗಳಿಗೂ ಹೆಚ್ಚು ಮತಗಳನ್ನು ಪಡೆದು ಶ್ವೇತಭವನ ಪ್ರವೇಶದ ಅಂತಿಮ ಹಂತಕ್ಕೆ ತಲುಪಿದ್ದಾರೆ ಎಂದು ತಿಳಿಸಿದೆ. ಬೈಡನ್-ಹ್ಯಾರಿಸ್ 306 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದಾರೆ. ಈ ಮೂಲಕ 78 ವರ್ಷ ವಯಸ್ಸಿನ ಬೈಡನ್ ಅಮೆರಿಕಾ ಅಧ್ಯಕ್ಷರಾಗುವುದು ಬಹುತೇಕ ಅಂತಿಮವಾಗಿದೆ.
ಈ ಹಿಂದೆ, 2016ರಲ್ಲಿ ಟ್ರಂಪ್ ಮತ್ತು ಮೈಕ್ ಪೆನ್ಸ್ ಕೂಡ ಅಷ್ಟೇ ಎಲೆಕ್ಟೊರಲ್ ಮತಗಳನ್ನು ಪಡೆದಿದ್ದರು. ಎಲೆಕ್ಟೊರಲ್ ಕಾಲೇಜ್ನಲ್ಲೂ ಸ್ಪಷ್ಟ ಬಹುಮತ ಪಡೆದಿರುವ ಬೈಡನ್, ನಮ್ಮ ಗೆಲುವಿನ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ, ಅವರು ತಮ್ಮ ಸಂಶಯಗಳನ್ನು ಈಗ ಬಗೆಹರಿಸಿಕೊಂಡಿರಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
ಯುಎಸ್ ಎಲೆಕ್ಟೊರಲ್ ಕಾಲೇಜ್, ಡೆಮೊಕ್ರೆಟಿಕ್ ಪಕ್ಷದ ಗೆಲುವನ್ನು ಖಚಿತಪಡಿಸಿದ ನಂತರ ಮಾತಾಡಿದ ಬೈಡೆನ್, ಅಮೆರಿಕಾದ ಹೊಸ ಅಧ್ಯಾಯ ತೆರೆಯಲು ಸಕಾಲವಿದು ಎಂದು ಹೇಳಿದ್ದಾರೆ. ತನ್ನ ಸೋಲೊಪ್ಪದೆ ಮರುಮತ ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದ ಟ್ರಂಪ್ ಬಗ್ಗೆ ಮಾತನಾಡಿ, ಯುಎಸ್ನ ಪ್ರಜಾತಂತ್ರವು ಪರೀಕ್ಷೆಗೆ ಒಳಪಟ್ಟಿತ್ತು. ಅದೀಗ ಸತ್ಯ, ದೃಢ ಮತ್ತು ಸ್ಥಿತಿಸ್ಥಾಪಕ ಶಕ್ತಿವುಳ್ಳದ್ದಾಗಿದೆ ಎಂದು ತೋರಿಸಿಕೊಟ್ಟಿದೆ ಎಂದಿದ್ದಾರೆ. ಎಲೆಕ್ಟೊರಲ್ ಕಾಲೇಜ್ನ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿ, ದೇಶದ ಉನ್ನತಿಗಾಗಿ ನಾವು ಜೊತೆಯಾಗಿ ಕೆಲಸ ಮಾಡೋಣ ಎಂದಿದ್ದಾರೆ.
ನವಂಬರ್ 3ರ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯ ವೋಟ್ ಪಡೆದಿದ್ದ ಬೈಡನ್-ಹ್ಯಾರಿಸ್, 81 ದಶಲಕ್ಷ ವೋಟ್ಗಳನ್ನು ತಮ್ಮ ಪಾಲಾಗಿಸಿಕೊಂಡಿದ್ದರು. ಇದು ಅಮೆರಿಕಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿತ್ತು. 7 ದಶಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಬೈಡನ್ ಟ್ರಂಪ್ ವಿರುದ್ಧ ಗೆದ್ದಿದ್ದರು.
Published On - 12:20 pm, Tue, 15 December 20