ಕಾಣದಂತೆ ಇದ್ದ ಖರ್ಗ್ ದ್ವೀಪದ ಮೇಲೆ ಅಮೆರಿಕದ ಕಣ್ಣು; ಏನದರ ಮಹತ್ವ?

US might attack on Kharg island near persian gulf: ಇರಾನ್ ಅನ್ನು ಹತ್ತಿಕ್ಕಲು ಅಮೆರಿಕ ಹಲವು ಮಾರ್ಗಗಳನ್ನು ಹುಡುಕುತ್ತಿದೆ. ಸಾಕಷ್ಟು ವೈಮಾನಿಕ ದಾಳಿಗಳನ್ನು ಮಾಡಿದೆ. ಆದರೆ, ಇರಾನ್ ಪ್ರತಿರೋಧ ಕಡಿಮೆ ಆಗಿಲ್ಲ. ಪ್ರತಿದಾಳಿ ಹೆಚ್ಚೆಚ್ಚು ನಡೆಯುತ್ತಿದೆ. ಇದೇ ವೇಳೆ, ಇರಾನ್​ನ ಪುಟ್ಟ ದ್ವೀಪವಾದ ಖರ್ಗ್ ಮೇಲೆ ಅಮೆರಿಕದ ಕಣ್ಣು ನೆಟ್ಟಿದೆ. ಖರ್ಗ್ ದ್ವೀಪವು ಇರಾನ್​ನ ಆರ್ಥಿಕತೆಯ ಬೆನ್ನೆಲುಬಿನಂತಿದೆ.

ಕಾಣದಂತೆ ಇದ್ದ ಖರ್ಗ್ ದ್ವೀಪದ ಮೇಲೆ ಅಮೆರಿಕದ ಕಣ್ಣು; ಏನದರ ಮಹತ್ವ?
ಖರ್ಗ್ ದ್ವೀಪ

Updated on: Mar 09, 2026 | 5:29 PM

ನವದೆಹಲಿ, ಮಾರ್ಚ್ 9: ಯುದ್ಧದ ತೀವ್ರತೆ ಹೆಚ್ಚುತ್ತಿರುವಂತೆಯೇ ಇರಾನ್ ಅನ್ನು ಕಟ್ಟಿಹಾಕಲು ಅಮೆರಿಕ ವಿವಿಧ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಇರಾನ್​ನ ಹಲವು ಮಿಲಿಟರಿ ಮತ್ತು ಪರಮಾಣು ಸೌಕರ್ಯಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳಿಂದ ಸಾಕಷ್ಟು ದಾಳಿಗಳಾಗಿವೆ. ಈ ಮಧ್ಯೆ ಅಮೆರಿಕ ಹೊಸ ತಂತ್ರ ಹಾಕಿದೆ. ಇರಾನ್​ನ ಆರ್ಥಿಕತೆಯ ಬೆನ್ನೆಲುಬಾಗಿರುವ ಒಂದು ದ್ವೀಪದ ಮೇಲೆ ಟ್ರಂಪ್ ಕಣ್ಣಾಕಿದ್ದಾರೆ. ಅದು ಖರ್ಗ್ ಐಲ್ಯಾಂಡ್ (Kharg Island).

ಖರ್ಗ್ ದ್ವೀಪವು ಇರಾನ್​ನ ಪ್ರಮುಖ ರಫ್ತು ಅಡ್ಡೆ ಎನಿಸಿದೆ. ಈ ದ್ವೀಪವನ್ನು ವಶಕ್ಕೆ ತೆಗೆದುಕೊಳ್ಳಲು ಅಥವಾ ಹಾನಿ ಮಾಡಲು ಅಮೆರಿಕ ಯೋಜಿಸಿದೆ. ಖರ್ಗ್ ದ್ವೀಪವು ಪರ್ಷಿಯನ್ ಕೊಲ್ಲಿಯಲ್ಲಿರುವ ಒಂದು ಪುಟ್ಟ ದ್ವೀಪ. ಇರಾನ್​ನ ಕರಾವಳಿಯಿಂದ ಸುಮಾರು 30 ಕಿಮೀ ದೂರದಲ್ಲಿದೆ. ಇದು ಇರಾನ್​ನ ಪ್ರಮುಖ ಕಚ್ಚಾ ತೈಲ ರಫ್ತಿನ ಟರ್ಮಿನಲ್ ಅಥವಾ ಹಡಗುದಾಣ ಎನಿಸಿದೆ. ಇರಾನ್​ನ ಶೇ. 90ರಷ್ಟು ತೈಲ ರಫ್ತು ಈ ಟರ್ಮಿನಲ್​ನಿಂದಲೇ ಆಗುವುದು. ದಿನಕ್ಕೆ 70 ಲಕ್ಷ ಬ್ಯಾರಲ್ ತೈಲವನ್ನು ಇಲ್ಲಿಂದ ಲೋಡ್ ಮಾಡಿ ಕಳುಹಿಸಬಹುದು.

ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್​​ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್​​ ಮಹತ್ವದ ಎಚ್ಚರಿಕೆ

ಖರ್ಗ್ ದ್ವೀಪಕ್ಕೆ ಅಥವಾ ಅದರಲ್ಲಿರುವ ಆಯಿಲ್ ಎಕ್ಸ್ಪೋರ್ಟ್ ಟರ್ಮಿನಲ್​ಗೆ ಧಕ್ಕೆಯಾದರೆ ಇರಾನ್​ನ ಆರ್ಥಿಕ ಬೆನ್ನೆಲುಬು ಮುರಿದಂತಾಗಬಹುದು. ಆದರೂ ಕೂಡ ದಶಕಗಳಿಂದ ಗಲ್ಫ್​ನಲ್ಲಿ ಯಾವ ಸಂಘರ್ಷ ಏರ್ಪಟ್ಟರೂ ಇರಾನ್​ನಲ್ಲಿರುವ ಖರ್ಗ್ ಐಲ್ಯಾಂಡ್ ಮೇಲೆ ಇದೂವರೆಗೂ ಯಾರೂ ಕೂಡ ದಾಳಿ ಮಾಡಿದ್ದಿಲ್ಲ. ಅದಕ್ಕೆ ಕೆಲ ಸಕಾರಣಗಳಿವೆ.

ಖರ್ಗ್ ಐಲ್ಯಾಂಡ್​ನಿಂದ ಜಗತ್ತಿಗೆ ಸಾಕಷ್ಟು ತೈಲ ಸರಬರಾಜಾಗುತ್ತದೆ. ಇದಕ್ಕೆ ಧಕ್ಕೆಯಾದರೆ ತೈಲಕ್ಕೆ ಹಾಹಾಕಾರ ಶುರುವಾಗಬಹುದು. ಜಗತ್ತಿನ ಶೇ. 40ರಷ್ಟು ತೈಲ ಸಾಗಣೆ ಆಗುವ ಹಾರ್ಮುಜ್ ಜಲಸಂಧಿಗೆ ಬಹಳ ಸಮೀಪದಲ್ಲೇ ಖರ್ಗ್ ಇದೆ. ಇಲ್ಲಿ ಹಾನಿಯಾದರೆ ಹಾರ್ಮುಜ್ ಮಾರ್ಗಕ್ಕೂ ಧಕ್ಕೆಯಾಗಬಹುದು. ಇದರಿಂದ ಜಾಗತಿಕವಾಗಿ ಪರಿಣಾಮಗಳಾಗಬಹುದು. ಈ ಕಾರಣಕ್ಕೆ ಇದೂವರೆಗೂ ಯಾರೂ ಕೂಡ ಖರ್ಗ್ ದ್ವೀಪವನ್ನು ಮುಟ್ಟಿಲ್ಲ. ಈಗ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಖರ್ಗ್ ಮೇಲೆ ಕಣ್ಣಾಕಿವೆ.

ಇದನ್ನೂ ಓದಿ: ಬಹರೇನ್​ನ ಅಮೆರಿಕನ್ ಫಿಫ್ತ್ ಫ್ಲೀಟ್ ಮೇಲೆ ಇರಾನ್ ದಾಳಿ; 21 ಸೈನಿಕರ ಹತ್ಯೆ

ಇರಾನ್ ಅನ್ನು ಹೇಗಾದರೂ ಸೋಲಿಸಲೇಬೇಕು ಅಥವಾ ನಿಯಂತ್ರಿಸಬೇಕು ಎಂದು ಪಣತೊಟ್ಟಿರುವ ಇಸ್ರೇಲ್ ಮತ್ತು ಅಮೆರಿಕ ದೇಶಗಳಿಗೆ ಈಗ ಖರ್ಗ್ ಐಲ್ಯಾಂಡ್ ಒಂದು ಆಯಕಟ್ಟಿನ ಜಾಗವಾಗಬಹುದು. ಈ ಜಾಗವೇನಾದರೂ ತಮ್ಮ ವಶಕ್ಕೆ ಹೋದರೆ ಇರಾನ್​ನ ತಳಹದಿಯೇ ಅಲುಗಾಡುತ್ತದೆ. ಹೀಗಾಗಿ, ಖರ್ಗ್ ಮೇಲೆ ಎರಗಿ ಹೋಗುವ ಆಲೋಚನೆ ನಡೆದಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us