ಇದು ಹಿಂದೆಂದೂ ಕಂಡಿರದಂಥ ಚುನಾವಣೆ: ಸೋಲು, ಗೆಲುವಿನ ಲೆಕ್ಕಾಚಾರದ ಜೊತೆ ಬಾಕಿ ಕತೆಗಳೂ ಇಂಟರೆಸ್ಟಿಂಗ್!

| Updated By: KUSHAL V

Updated on: Nov 07, 2020 | 4:52 PM

ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಕುತೂಹಲಕಾರಿ ಎಂದು ಬಣ್ಣಿಸಲ್ಪಟ್ಟಿರುವ 2020ರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಅಂತಿಮ ಹಂತ ತಲುಪುತ್ತಿದ್ದಂತೆಯೇ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರಿಗೆ ಅಭಿನಂದನೆಯ ಮಹಾಪೂರ ಹರಿದುಬರಲಾರಂಭಿಸಿದೆ. ಬಹುಮತಕ್ಕೆ ಬೇಕಾದ 270 ಸೀಟುಗಳ ಪೈಕಿ ಜೋ ಬೈಡನ್ ಪರವಾದ 264 ಅಭ್ಯರ್ಥಿಗಳು ಈಗಾಗಲೇ ಜಯ ಸಾಧಿಸಿದ್ದು ಗುರಿ ತಲುಪಲು ಇನ್ನು ಕೇವಲ 6 ಸೀಟುಗಳ ಅವಶ್ಯಕತೆ ಇದೆ. ಫಲಿತಾಂಶ ಘೋಷಣೆ ಬಾಕಿ ಇರುವ ಪ್ರದೇಶಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳೇ ಮುನ್ನಡೆ ಸಾಧಿಸಿರುವ […]

ಇದು ಹಿಂದೆಂದೂ ಕಂಡಿರದಂಥ ಚುನಾವಣೆ: ಸೋಲು, ಗೆಲುವಿನ ಲೆಕ್ಕಾಚಾರದ ಜೊತೆ ಬಾಕಿ ಕತೆಗಳೂ ಇಂಟರೆಸ್ಟಿಂಗ್!
ಡೊನಾಲ್ಡ್​ ಟ್ರಂಪ್​ (ಎಡ); ಜೋ ಬೈಡನ್ (ಬಲ)
Follow us on

ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಇತಿಹಾಸದಲ್ಲೇ ಅತ್ಯಂತ ಕುತೂಹಲಕಾರಿ ಎಂದು ಬಣ್ಣಿಸಲ್ಪಟ್ಟಿರುವ 2020ರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಅಂತಿಮ ಹಂತ ತಲುಪುತ್ತಿದ್ದಂತೆಯೇ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರಿಗೆ ಅಭಿನಂದನೆಯ ಮಹಾಪೂರ ಹರಿದುಬರಲಾರಂಭಿಸಿದೆ. ಬಹುಮತಕ್ಕೆ ಬೇಕಾದ 270 ಸೀಟುಗಳ ಪೈಕಿ ಜೋ ಬೈಡನ್ ಪರವಾದ 264 ಅಭ್ಯರ್ಥಿಗಳು ಈಗಾಗಲೇ ಜಯ ಸಾಧಿಸಿದ್ದು ಗುರಿ ತಲುಪಲು ಇನ್ನು ಕೇವಲ 6 ಸೀಟುಗಳ ಅವಶ್ಯಕತೆ ಇದೆ. ಫಲಿತಾಂಶ ಘೋಷಣೆ ಬಾಕಿ ಇರುವ ಪ್ರದೇಶಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳೇ ಮುನ್ನಡೆ ಸಾಧಿಸಿರುವ ಕಾರಣ ಜೋ ಬೈಡನ್ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಎರಡನೇ ಅವಧಿಗೆ ಭಾರೀ ಅಂತರದಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಪರವಾದ 214 ಅಭ್ಯರ್ಥಿಗಳು ಗೆಲುವು ಪಡೆದಿದ್ದು ನಿರೀಕ್ಷಿತ ಗುರಿ ತಲುಪುವುದು ಕಠಿಣವಾಗಿದೆ. ಅಂಚೆ ಮತಗಳಲ್ಲಿ ಜೋ ಬೈಡನ್ ಅವರಿಗೆ ಅಧಿಕ ಬೆಂಬಲ ಲಭಿಸುವ ಸಾಧ್ಯತೆ ಇರುವುದರಿಂದ ಅದು ಟ್ರಂಪ್ ಅವರ ಕಣ್ಣು ಕೆಂಪಾಗಲು ಕಾರಣವೂ ಆಗಿದೆ. ಅಂಚೆ ಮತಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಯು.ಎಸ್. ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಟ್ರಂಪ್ ಮಾತನಾಡಿರುವರಾದರೂ ಅದು ಅವರಿಗೆ ನಿರೀಕ್ಷಿತ ಲಾಭ ತಂದುಕೊಡುವ ಸಾಧ್ಯತೆಗಳಿಲ್ಲ. ಟ್ರಂಪ್ ಅವರಿಗೆ ಹಿನ್ನಡೆಯಾಗುತ್ತಿರುವ ಸುಳಿವು ಸಿಕ್ಕ ಕೂಡಲೇ ಅವರ ಅಭಿಮಾನಿಗಳು ಮತ ಎಣಿಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ಘಟನೆಗಳು ಸಹ ವರದಿಯಾಗಿವೆ.

ಅದೇನೆ ಆದರೂ, 2020ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕುತೂಹಲ ಕೆರಳಿಸಿರುವುದರ ಜೊತೆಗೆ ಹಲವು ಮೊದಲುಗಳಿಗೆ ಕಾರಣವಾಗುತ್ತಿರುವುದು ಗಮನಾರ್ಹ ಸಂಗತಿ. ಅಲ್ಲಿನ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಒಟ್ಟು ಶೇ.50.6 ಮತಗಳನ್ನು ಅಂದರೆ 7,48,11,378 ಮತಗಳನ್ನು ಪಡೆದಿದ್ದರೆ ಟ್ರಂಪ್ ಶೇ.47.7 ಮತಗಳನ್ನು ಅಂದರೆ 7,05,54,537 ಮತಗಳನ್ನು ಪಡೆದುಕೊಂಡಿದ್ದಾರೆ. ಲೆಕ್ಕಾಚಾರದ ಪ್ರಕಾರ ಇವರಿಬ್ಬರೂ ಪಡೆದಿರುವ ಮತಗಳ ಸಂಖ್ಯೆ ಇದುವರೆಗಿನ ಅಧ್ಯಕ್ಷೀಯ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಪಡೆದ ಅತಿ ಹೆಚ್ಚು ಮತಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದು ವೇಳೆ, ಈ ಬಾರಿಯ ಚುನಾವಣೆಯಲ್ಲಿ ಟ್ರಂಪ್ ಸೋತರೆ ಬರೋಬ್ಬರಿ ಮೂವತ್ತು ವರ್ಷಗಳ ನಂತರ ಮರು ಆಯ್ಕೆ ಬಯಸಿ ಚುನಾವಣೆಗೆ ನಿಂತ ಅಧ್ಯಕ್ಷರೊಬ್ಬರು ಸೋಲು ಕಾಣುತ್ತಿರುವಂತಾಗುತ್ತದೆ. ಅಂತೆಯೇ, ಜೋ ಬೈಡನ್ ಗೆಲುವು ಸಾಧಿಸಿದರೆ ಅಮೆರಿಕಾದ ಅತ್ಯಂತ ಹಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾರೆ. ಅವರ ಗೆಲುವಿನೊಂದಿಗೆ ಉಪಾಧ್ಯಕ್ಷೆಯಾಗಲಿರುವ ಕಮಲಾ ಹ್ಯಾರಿಸ್ ಅಮೆರಿಕಾದ ಪ್ರಥಮ ಮಹಿಳಾ ಉಪಾಧ್ಯಕ್ಷೆ ಎಂದೆನಿಸಿಕೊಳ್ಳಲಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ 2020ನೇ ಇಸವಿಯೊಟ್ಟಿಗೆ ಈ ಚುನಾವಣೆಯೂ ಅಮೆರಿಕನ್ನರ ಮನಸ್ಸಿನಲ್ಲಿ ಬಹುಕಾಲ ಉಳಿಯುವುದು ನಿಶ್ಚಿತವಾಗಿದೆ.

Published On - 4:47 pm, Sat, 7 November 20