‘ನಿಮ್ಮನ್ನು ಹುಡುಕದೇ ಬಿಡುವುದಿಲ್ಲ’; ಮಿನಾಬ್ ಶಾಲೆ ಮೇಲಿನ ದಾಳಿಗೆ ಆದೇಶಿಸಿದ ಅಮೆರಿಕನ್ ನೌಕಾಪಡೆ ಅಧಿಕಾರಿಗಳಿಗೆ ಇರಾನ್ ಬೆದರಿಕೆ
ಇರಾನ್ನ ಮಿನಾಬ್ ಪ್ರಾಥಮಿಕ ಶಾಲೆಯ ಮೇಲೆ ನಡೆದ ಭೀಕರ ಕ್ಷಿಪಣಿ ದಾಳಿಗೆ ಆದೇಶ ನೀಡಿದ್ದಾರೆಂದು ಆರೋಪಿಸಿ, ಇಬ್ಬರು ಅಮೆರಿಕನ್ ನೌಕಾಪಡೆ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿರುವ ಇರಾನ್, "ನಾವು ನಿಮ್ಮನ್ನು ಹುಡುಕಿಯೇ ತೀರುತ್ತೇವೆ" ಎಂದು ನೇರ ಬೆದರಿಕೆ ಹಾಕಿದೆ. ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಅಮೆರಿಕನ್ ನೌಕಾಪಡೆ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಈ ಬೆದರಿಕೆ ಸಂದೇಶವನ್ನು ಪ್ರಕಟಿಸಿದೆ. ಫೆಬ್ರವರಿ 28ರಂದು ನಡೆದ ಯುದ್ಧದ ಮೊದಲ ದಿನದಂದು ಇರಾನ್ನ ಮಿನಾಬ್ನಲ್ಲಿರುವ ಶಜರೆಹ್ ತಯ್ಯೆಬೆಹ್ ಪ್ರಾಥಮಿಕ ಶಾಲೆಯ ಮೇಲೆ ಕ್ಷಿಪಣಿ ದಾಳಿ ನಡೆದಿತ್ತು. ಈ ಭೀಕರ ದಾಳಿಯಲ್ಲಿ ಸುಮಾರು 168 ಮಂದಿ ಸಾವನ್ನಪ್ಪಿದ್ದರು ಎಂದು ಇರಾನ್ ಆರೋಪಿಸಿದೆ.

ಟೆಹ್ರಾನ್, ನವೆಂಬರ್ 16: ಇರಾನ್ನ ಮಿನಾಬ್ ಪ್ರಾಥಮಿಕ ಶಾಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿ, 168 ಮಕ್ಕಳ ಸಾವಿಗೆ ಕಾರಣರಾದ ಇಬ್ಬರು ಅಮೆರಿಕನ್ ನೌಕಾಪಡೆ ಅಧಿಕಾರಿಗಳನ್ನು ಹುಡುಕದೇ ಬಿಡುವುದಿಲ್ಲ ಎಂದು ಇರಾನ್ ಎಚ್ಚರಿಕೆ ನೀಡಿದೆ. “ನಾವು ನಿಮ್ಮನ್ನು ಹುಡುಕಿಯೇ ತೀರುತ್ತೇವೆ” ಎಂದು ಇರಾನ್ ಬೆದರಿಕೆ ಹಾಕಿದೆ. ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಅಧಿಕಾರಿಗಳನ್ನು ಗುರುತಿಸಿ ಸಾಮಾಜಿಕ ಜಾಲತಾಣದಲ್ಲಿ ಈ ಬೆದರಿಕೆ ಸಂದೇಶವನ್ನು ಪ್ರಕಟಿಸಿದೆ ಎಂದು ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ. ಫೆಬ್ರವರಿ 28ರಂದು ಅಮೆರಿಕನ್ ಪಡೆಗಳು ಇರಾನ್ನ ಶಾಲೆಯ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ 168 ಮಕ್ಕಳು ಸಾವನ್ನಪ್ಪಿದ್ದರು.
ರಾಯಭಾರ ಕಚೇರಿಯು ‘ಯುಎಸ್ಎಸ್ ಸ್ಪ್ರೂಯೆನ್ಸ್’ ಯುದ್ಧನೌಕೆಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಲೀ ಆರ್. ಟೇಟ್ ಮತ್ತು ನೌಕೆಯ ಕಾರ್ಯನಿರ್ವಾಹಕ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಜೆಫ್ರಿ ಇ. ಯಾರ್ಕ್ ಅವರ ಹೆಸರುಗಳನ್ನು ಬಹಿರಂಗಪಡಿಸಿದೆ. ನವೆಂಬರ್ 13ರಂದು ‘ಎಕ್ಸ್’ ಖಾತೆಯಲ್ಲಿ ಈ ಇಬ್ಬರು ಅಧಿಕಾರಿಗಳ ಫೋಟೋಗಳನ್ನು ಹಂಚಿಕೊಂಡಿರುವ ಇರಾನ್ ರಾಯಭಾರ ಕಚೇರಿ, “ನಾವು ನಿಮ್ಮನ್ನು ಹುಡುಕಿಯೇ ತೀರುತ್ತೇವೆ” ಎಂಬ ಎಚ್ಚರಿಕೆಯನ್ನು ನೀಡಿದೆ.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿಗೆ ಇರಾನ್ ತತ್ತರ; ಸಾಲ ತೀರಿಸಲು ದೇಹದ ಅಂಗಾಂಗಗಳನ್ನೇ ಆನ್ಲೈನ್ನಲ್ಲಿ ಮಾರಾಟಕ್ಕಿಟ್ಟ ಜನ!
ಇರಾನ್ ಪಡೆಗಳ ವಿರುದ್ಧದ ಯುದ್ಧ ಕಾರ್ಯಾಚರಣೆ ಸೇರಿದಂತೆ 357 ದಿನಗಳ ನಿಯೋಜನೆಯನ್ನು ಪೂರ್ಣಗೊಳಿಸಿ ‘ಯುಎಸ್ಎಸ್ ಸ್ಪ್ರೂಯೆನ್ಸ್’ ಶುಕ್ರವಾರ ಸ್ಯಾನ್ ಡಿಯಾಗೋಗೆ ಮರಳಿದ ಬೆನ್ನಲ್ಲೇ ಈ ಹೊಸ ಬೆದರಿಕೆ ಬಂದಿದೆ. ಇದಕ್ಕೂ ಮುನ್ನ ಮಾರ್ಚ್ 28ರಂದು ಪೋಸ್ಟ್ ಮಾಡಿದ್ದ ರಾಯಭಾರ ಕಚೇರಿ, “ಈ ಇಬ್ಬರು ಅಪರಾಧಿಗಳನ್ನು ನೆನಪಿಟ್ಟುಕೊಳ್ಳಿ. ಅವರಿಗೂ ಮಕ್ಕಳಿಲ್ಲವೇ?” ಎಂದು ಪ್ರಶ್ನಿಸಿತ್ತು.
ಪ್ರತೀಕಾರದ ಸಂಚಿನ ಕುರಿತು ತಜ್ಞರ ಎಚ್ಚರಿಕೆ:
ಇಬ್ಬರು ಅಮೆರಿಕನ್ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಗುರಿಯಾಗಿಸಿಕೊಂಡಿರುವುದು ಭದ್ರತಾ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ. ‘ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್’ (FDD) ಸಂಸ್ಥೆಯ ಹಿರಿಯ ಸದಸ್ಯ ಬೆಹ್ನಾಮ್ ಬೆನ್ ತಾಲೆಬ್ಲು ಅವರು ಫಾಕ್ಸ್ ನ್ಯೂಸ್ ಡಿಜಿಟಲ್ಗೆ ಪ್ರತಿಕ್ರಿಯಿಸುತ್ತಾ, “ಇದು ವಾಷಿಂಗ್ಟನ್, ಶ್ವೇತಭವನ, ಪೆಂಟಗನ್ ಮತ್ತು ಸೆಂಟ್ಕಾಮ್ ವಲಯದಲ್ಲಿ ಎಚ್ಚರಿಕೆಯ ಗಂಟೆಯಾಗಿದೆ” ಎಂದಿದ್ದಾರೆ.
We will find you.
— Iran Embassy SA (@IraninSA) November 13, 2026
“ಈ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಯಾವುದೇ ಸಂಚು ರೂಪಿಸಿದ್ದರೆ, ಅದನ್ನು ತಕ್ಷಣವೇ ಪತ್ತೆಹಚ್ಚಿ, ತಡೆದು ವಿಫಲಗೊಳಿಸುವುದು ಅತ್ಯಗತ್ಯ” ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಇರಾನ್ ಯುದ್ಧ ಶುರು ಮಾಡಿದ್ದು ನಾವಲ್ಲ, 47 ವರ್ಷಗಳ ಹಿಂದೆಯೇ ಸಂಘರ್ಷ ಆರಂಭವಾಗಿತ್ತು: ಪೀಟ್ ಹೆಗ್ಸೆತ್
ಇರಾನ್ಗೆ ಟ್ರಂಪ್ ಎಚ್ಚರಿಕೆ:
ಮತ್ತೊಂದೆಡೆ, ಇರಾನ್ನ ಬೆದರಿಕೆಗಳ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದು ವೇಳೆ ಇರಾನ್ ಅಮೆರಿಕದ ಹಿರಿಯ ಅಧಿಕಾರಿಗಳ ಹತ್ಯೆಗೆ ಯತ್ನಿಸಿದರೆ ಪರಿಣಾಮ ಅತ್ಯಂತ ಭೀಕರವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ. ನವೆಂಬರ್ 12ರಂದು ರೇಡಿಯೊ ನಿರೂಪಕ ಹಗ್ ಹೆವಿಟ್ ಅವರೊಂದಿಗಿನ ಸಂದರ್ಶನದಲ್ಲಿ, ಒಂದು ವೇಳೆ ಇರಾನ್ ಅಮೆರಿಕದ ಹಿರಿಯ ಅಧಿಕಾರಿಯನ್ನು ಹತ್ಯೆ ಮಾಡಿದರೆ ಅಮೆರಿಕ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಇರಾನ್ ಸರ್ಕಾರ ಇನ್ನು ಹೆಚ್ಚು ಕಾಲ ಅಸ್ತಿತ್ವದಲ್ಲಿ ಇರುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಇದರ ಮಧ್ಯೆ ಇರಾನ್ಗೆ ಸಂಬಂಧಿಸಿದ ಕೊಲೆ ಬೆದರಿಕೆಗಳ ಹಿನ್ನೆಲೆಯಲ್ಲಿ ತಾವು ವಾಷಿಂಗ್ಟನ್ ಪ್ರದೇಶದ ತಮ್ಮ ನಿವಾಸದಿಂದ ಸೇನಾ ನೆಲೆಗೆ ಸ್ಥಳಾಂತರಗೊಂಡಿರುವುದಾಗಿ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಖಚಿತಪಡಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
