ಯುನೈಟೆಡ್ ಅರಬ್ ಎಮಿರೇಟ್ಸ್ನ (United Arab Emirates) ಅತಿದೊಡ್ಡ ಏರ್ಲೈನ್, ಧ್ವಜವಾಹಕ ಎಮಿರೇಟ್ಸ್ (Emirates) ಸದ್ಯ ಈಗ ಟ್ರೆಂಡ್ನಲ್ಲಿದೆ. ಅದಕ್ಕೆ ಕಾರಣ ಒಂದು ವಿಶಿಷ್ಟ ಜಾಹೀರಾತು. ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಗೋಪುರ ಎನ್ನಿಸಿಕೊಂಡಿರುವ ಬುರ್ಜ್ ಖಲೀಪಾ (Burj Khalifa) ಗೋಪುರದ ತುತ್ತ ತುದಿಯಲ್ಲಿ ಮಹಿಳೆಯೊಬ್ಬರನ್ನು ನಿಲ್ಲಿಸಿ ಮಾಡಲಾದ ಜಾಹೀರಾತು ಇದು. ಈ ಜಾಹೀರಾತು ವಿಡಿಯೋ ನೋಡಿದರೆ ಎಂಥವರಿಗಾದರೂ ಮೈನವಿರೇಳುತ್ತದೆ.
30 ಸೆಕೆಂಡ್ಗಳ ಜಾಹೀರಾತು ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವಿಡಿಯೋ ಕ್ಲಿಪ್ ನೋಡಿದ ಪ್ರತಿಯೊಬ್ಬರೂ ಗಾಬರಿ, ಭಯ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ಅಷ್ಟು ಎತ್ತರದ ಬುರ್ಜ್ ಖಲೀಪಾದ ತುತ್ತತುದಿಗೆ ಏರಿ ನಿಲ್ಲುವ ಸಾಹಸ ಮಾಡಿದ ಮಹಿಳೆ, ವೃತ್ತಿಪರ ಸ್ಕೈಡೈವಿಂಗ್ ಬೋಧಕರಾದ ನಿಕೋಲ್ ಸ್ಮಿತ್ ಲುಡ್ವಿಕ್. ಈ ಜಾಹೀರಾತಿನಲ್ಲಿ ಎಮಿರೇಟ್ಸ್ ಕ್ಯಾಬಿನ್ ಸಿಬ್ಬಂದಿಯಾಗಿ ನಟಿಸಿದ್ದಾರೆ. ಎಮಿರೇಟ್ಸ್ನ ಸಮವಸ್ತ್ರ ಧರಿಸಿ ಜಾಹೀರಾತಿನಲ್ಲಿ ನಟನೆ ಮಾಡಿರುವ ನಿಕೋಲ್ ಬಗ್ಗೆ ಹೆಮ್ಮೆ ಎನ್ನಿಸದೆ ಇರದು..ಅವರ ಧೈರ್ಯ ನೋಡಿ ಖುಷಿಯಾಗದೆ ಇರದು.
ಅಷ್ಟು ಎತ್ತರದ ಗೋಪುರದ ಮೇಲೆ ನಿಂತ ಅವರು, ನಗುತ್ತ..ನಾನೀಗ ಜಗತ್ತಿಗಿಂತ ಎತ್ತರದಲ್ಲಿದ್ದೇನೆ ಎನ್ನುವುದನ್ನು ಕೇಳಬಹುದು. ಇಷ್ಟುದಿನ ಯುಕೆ (ಇಂಗ್ಲೆಂಡ್)ಯ ಕೆಂಪು ಲಿಸ್ಟ್ನಲ್ಲಿದ್ದ ಯುಎಇಯನ್ನು ಇತ್ತೀಚೆಗಷ್ಟೇ ಯುಕೆ ಅಂಬರ್ ಲಿಸ್ಟ್ಗೆ ಸೇರ್ಪಡೆಗೊಳಿಸಿದೆ. ಅದನ್ನು ಜಗತ್ತಿಗೆ ತಿಳಿಸಿ, ನೀವೂ ಎಮಿರೇಟ್ಸ್ನಲ್ಲಿ ಪ್ರಯಾಣಿಸಿ ಎಂದು ಹೇಳುವ ಜಾಹೀರಾತು ಇದು.
ಜಾಹೀರಾತಿನಲ್ಲಿ ಮೊದಲು ನಿಕೋಲ್ ಅವರನ್ನು ಜೂಮ್ನಲ್ಲಿ ತೋರಿಸಲಾಗುತ್ತದೆ. ಆದರೆ ನಂತರ ಕ್ಯಾಮರಾವನ್ನು ಹಿಂದೆ ತೆಗೆದುಕೊಂಡು ಬಂದಂತೆ ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಆಕೆ ನಿಂತಿರುವ ಒಂದು ಸಮಗ್ರ ನೋಟ ಕಾಣಿಸುತ್ತಿದೆ. ಆ ಕ್ಷಣ ನಿಮ್ಮ ಮೈ ಜುಂ ಅನ್ನದಿದ್ದರೆ ಕೇಳಿ. ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ 828 ಮೀಟರ್ ಎತ್ತರವಾಗಿದೆ. ಅದರ ಮೇಲೆ ಒಬ್ಬರು ಹೋಗಿ ನಿಲ್ಲುವುದು ಖಂಡಿತ ಹುಡುಗಾಟಿಕೆಯಂತೂ ಅಲ್ಲ.
ಅಷ್ಟು ದೊಡ್ಡ ಸಾಹಸದ ವಿಡಿಯೋ ಶೇರ್ ಮಾಡಿರುವ ನಿಕೋಲ್, ನನ್ನ ಜೀವನದಲ್ಲೇ ಮಾಡಿದ ಒಂದು ಅದ್ಭುತ ಮತ್ತು ಎಕ್ಸೈಟ್ ಆಗಿರುವ ಸಾಹಸ ಇದು. ಇಂಥ ಕ್ರಿಯಾಶೀಲ ಮಾರ್ಕೆಟಿಂಗ್ ಐಡಿಯಾ ಮಾಡಿರುವ ಎಮಿರೇಟ್ಸ್ನ್ನು ಶ್ಲಾಘಿಸಲೇಬೇಕು ಎಂದಿದ್ದಾರೆ.
ನೀವೂ ನೋಡಿಬಿಡಿ..ಈ ಅದ್ಭುತ..ಮಹಾನ್ ಎತ್ತರದ ಜಾಹೀರಾತನ್ನು..
Published On - 12:09 pm, Tue, 10 August 21