ಲಂಡನ್: ಕೊರೊನಾ ವಿರುದ್ಧದ ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ (World Health Organization- WHO) ತನ್ನ ಬೆಂಬಲವನ್ನು ಸೂಚಿಸಿದ್ದು, ಆಸ್ಟ್ರಾಜೆನೆಕಾ ಲಸಿಕೆಯ ಬಳಕೆ ಮಾಡಬಹುದು ಎಂದು ಅನುಮೋದನೆ ಸೂಚಿಸಿದೆ. ಫ್ರಾನ್ಸ್, ಜರ್ಮನಿ, ಇಟಲಿ ಸಹಿತ ಆರಕ್ಕೂ ಹೆಚ್ಚು ಯುರೋಪಿಯನ್ ದೇಶಗಳು ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಲಸಿಕೆ ಬಳಕೆಯನ್ನು ನಿಲ್ಲಿಸಿದ್ದವು. ಲಸಿಕೆ ಪಡೆದ ಸುಮಾರು 37 ಮಂದಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾದ ಹಾಗೂ ಎರಡು ಸಾವು ಸಂಭವಿಸಿದ ಕಾರಣ ಕೆಲವು ರಾಷ್ಟ್ರಗಳು ಆಸ್ಟ್ರಾಜೆನೆಕಾ ಲಸಿಕೆ ಬಳಸದಿರಲು ತೀರ್ಮಾನಿಸಿದ್ದವು.
ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಇಂದು (ಮಾರ್ಚ್ 17) ತನ್ನ ಪ್ರತಿಕ್ರಿಯೆ ತಿಳಿಸಿದೆ. ಈ ಸಂದರ್ಭದಲ್ಲಿ ಆಸ್ಟ್ರಾಜೆನೆಕಾ ಲಸಿಕೆಯ ಲಾಭಗಳು ಅಥವಾ ಧನಾತ್ಮಕ ಅಂಶಗಳು ಅದರ ಅಪಾಯದ ಪ್ರಮಾಣವನ್ನು ಮೀರಿಸುತ್ತವೆ ಎಂದು ಹೇಳಿರುವ ಆರೋಗ್ಯ ಸಂಸ್ಥೆ ಲಸಿಕೆ ಬಳಕೆಯನ್ನು ಮುಂದುವರಿಸಲು ಸೂಚಿಸಿದೆ.
ಸ್ವೀಡನ್, ಲಟ್ವಿಯಾ ಹಾಗೂ ಲಿಥುಯೇನಿಯಾ ದೇಶಗಳು ಮಂಗಳವಾರವಷ್ಟೇ (ಮಾರ್ಚ್ 16) ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ಬಳಕೆಯನ್ನು ನಿಲ್ಲಿಸಿದ್ದವು. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ಮತ್ತು ಇಂಡೋನೇಷಿಯಾ ಕೂಡ ಆಸ್ಟ್ರಾಜೆನೆಕಾ ಲಸಿಕೆ ವಿತರಣೆಯನ್ನು ಮುಂದೂಡಿದ್ದವು. ಆದರೆ, ಥಾಯ್ಲೆಂಡ್ ಆಸ್ಟ್ರಾಜೆನೆಕಾ ಲಸಿಕೆ ವಿತರಣೆ ನಿಲ್ಲಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿತ್ತು.
ಕೊವಿಡ್-19 ವಿರುದ್ಧದ ಲಸಿಕೆಯು ಇತರೆ ಕಾರಣಗಳಿಂದ ಉಂಟಾಗುವ ಸಾವು ಅಥವಾ ಅನಾರೋಗ್ಯವನ್ನು ತಡೆಗಟ್ಟುವುದಿಲ್ಲ. ರಕ್ತ ಹೆಪ್ಪುಗಟ್ಟಿದಂಥ ಘಟನೆಗಳು ನಿಯಮಿತವಾಗಿ ಉಂಟಾಗುತ್ತಿತ್ತು. ದೊಡ್ಡ ಮಟ್ಟದ ಲಸಿಕೆ ವಿತರಣಾ ಅಭಿಯಾನದ ಸಂದರ್ಭ ಕೆಲವು ಪ್ರತಿಕೂಲ ಘಟನೆಗಳು ನಡೆಯುವುದು, ಅವುಗಳ ವಿರುದ್ಧ ಪರಿಣಾಮಕಾರಿಯಾಗಿ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು ಅನಿವಾರ್ಯ. ಇಂಥಾ ಘಟನೆಗಳು ಲಸಿಕೆಗೆ ಸಂಬಂಧಪಟ್ಟವು ಎಂದು ಅರ್ಥವಲ್ಲ. ಆದರೆ, ಅವುಗಳನ್ನು ತನಿಖೆ ನಡೆಸುವುದು ಒಳ್ಳೆಯ ನಡೆಯೇ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪತ್ರದಲ್ಲಿ ಉಲ್ಲೇಖಿಸಿದೆ.
ಆಸ್ಟ್ರಾಜೆನೆಕಾ ಲಸಿಕೆಯು ಫೈಜರ್-ಬಯೋಎನ್ಟೆಕ್ ಮತ್ತು ಮಾಡರ್ನಾ ಲಸಿಕೆಯಂತಲ್ಲ. ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಗೆ ಕೋಲ್ಡ್ ಸ್ಟೋರೇಜ್ ಬೇಕಾಗಿರುವುದಿಲ್ಲ. ಜೊತೆಗೆ, ಲಸಿಕೆ ಕಡಿಮೆ ಖರ್ಚಿನದ್ದಾಗಿದೆ. ಹಾಗಾಗಿ, ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಯು ಯುರೋಪಿಯನ್ ದೇಶಗಳಲ್ಲಿ ಲಸಿಕೆ ಅಭಿಯಾನದ ಬೆನ್ನೆಲುಬಾಗಿ ಇರಬೇಕಿತ್ತು.
ಇದನ್ನೂ ಓದಿ: ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ಬಳಕೆಯಿಂದ ಹಿಂದೆ ಸರಿದ ಕೆಲ ದೇಶಗಳು; ಲಸಿಕೆ ಸೇಫ್ ಅಲ್ವಂತೆ!
AstraZeneca Side Effects: ಆಸ್ಟ್ರಾಜೆನಿಕಾ ಲಸಿಕೆಯ ಅಡ್ಡಪರಿಣಾಮಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಿದ ಭಾರತ
Published On - 11:02 pm, Wed, 17 March 21