ಎಸಿ ಆನ್ ಮಾಡಿ ಕಾರು ಓಡಿಸಿದರೆ ಎಷ್ಟು ಮೈಲೇಜ್ ಕಡಿಮೆಯಾಗುತ್ತದೆ?: ನಿಮಗೆ ತಿಳಿದಿರಲಿ ಈ ವಿಚಾರ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 26, 2024 | 5:30 PM

ಕಾರಿನ ಎಸಿ ಎಷ್ಟು ಇಂಧನವನ್ನು ಬಳಸುತ್ತದೆ?, ಕಾರಿನ ಎಸಿಯನ್ನು ಒಂದು ಗಂಟೆ ಓಡಿಸಿದರೆ, ಅದರ ಬೆಲೆ ಎಷ್ಟು?. ಈ ಪ್ರಶ್ನೆಗೆ ಸರಿಯಾದ ಉತ್ತರ ನಿಮಗೆ ತಿಳಿದಿದೆಯೇ?. ನೀವು ಕಾರಿನಲ್ಲಿ ಎಸಿ ಆನ್ ಮಾಡಿ ಓಡಿಸುತ್ತಿದ್ದರೆ ಈ ವಿಚಾರವನ್ನು ತಿಳಿಯುವುದು ಬಹಳ ಮುಖ್ಯ.

ಎಸಿ ಆನ್ ಮಾಡಿ ಕಾರು ಓಡಿಸಿದರೆ ಎಷ್ಟು ಮೈಲೇಜ್ ಕಡಿಮೆಯಾಗುತ್ತದೆ?: ನಿಮಗೆ ತಿಳಿದಿರಲಿ ಈ ವಿಚಾರ
ಸಾಂದರ್ಭಿಕ ಚಿತ್ರ
Follow us on

ಕಾರು ಚಾಲಕರು ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಸಿ ಅಂದರೆ ಹವಾನಿಯಂತ್ರಣವನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಲವರು ಮಳೆಗಾಲ, ಚಳಿಗಾಲದಲ್ಲೂ ಉಪಯೋಗಿಸುತ್ತಾರೆ. ಆದರೆ ಒಂದು ಗಂಟೆ ಎಸಿ ಬಳಸಿದರೆ ಕಾರಿನಲ್ಲಿ ಎಷ್ಟು ಇಂಧನ ಖರ್ಚಾಗುತ್ತದೆ ಗೊತ್ತಾ?. ಈ ದಿನಗಳಲ್ಲಿ ಇಂಧನದ ಬೆಲೆ ತುಂಬಾ ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕಾರಿನ ಎಸಿ ಎಷ್ಟು ಇಂಧನವನ್ನು ಬಳಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕಾರಿನ ಎಸಿಯನ್ನು ಹೆಚ್ಚು ಹೊತ್ತು ಓಡಿಸಿದರೆ ಕಾರಿನ ಮೈಲೇಜ್ ಮೇಲೂ ಪರಿಣಾಮ ಬೀರುತ್ತದೆ.

ಕಾರಿನ ಗಾತ್ರ:

ನೀವು ಕಾರಿನ ಮೈಲೇಜ್ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಅದು ಕಾರಿನ ಪ್ರಕಾರವನ್ನು ಅವಲಂಬಿಸಿರುತ್ತದೆ ಎಂಬುದು ತಿಳಿದಿರಬೇಕು. ಹ್ಯಾಚ್ಬ್ಯಾಕ್ ಮತ್ತು ಸೆಡಾನ್ ಕಾರುಗಳ ಎಂಜಿನ್ ಸಾಮಾನ್ಯವಾಗಿ ಚಿಕ್ಕದಾಗಿದೆ ಮತ್ತು ಕಡಿಮೆ ಶಕ್ತಿಯುತವಾಗಿರುತ್ತದೆ. ಈ ಸಂದರ್ಭದಲ್ಲಿ, ಅವರ ಎಂಜಿನ್ 1 ರಿಂದ 1.5 ಲೀಟರ್ ವರೆಗೆ ಇರುತ್ತದೆ. ಅದೇ ಸಮಯದಲ್ಲಿ, ದೊಡ್ಡ ಕಾರಿನ ಎಂಜಿನ್ ಅಂದರೆ 7 ಸೀಟರ್ ಎಸ್​ಯುವಿ ದೊಡ್ಡದಾಗಿದೆ. ಇವುಗಳು 2 ಲೀಟರ್ ಅಥವಾ 2 ಲೀಟರ್‌ಗಿಂತ ಹೆಚ್ಚಿನ ಎಂಜಿನ್‌ಗಳನ್ನು ಹೊಂದಿವೆ. ಈ ಕಾರಣದಿಂದಾಗಿ, ಎಸ್​ಯುವಿಗಳು ಹೆಚ್ಚು ಇಂಧನವನ್ನು ಬಳಸುತ್ತವೆ.

ಎಸಿ ಆನ್ ಇದ್ದಾಗ ಎಷ್ಟು ಇಂಧನ ಬೇಕಾಗುತ್ತದೆ?:

ಹ್ಯಾಚ್ ಬ್ಯಾಕ್ ಅಥವಾ ಸೆಡಾನ್ ಕಾರಿನಲ್ಲಿ ಒಂದು ಗಂಟೆ ಕಾಲ ಎಸಿ ಬಳಸಿದರೆ, ಪ್ರತಿ ಗಂಟೆಗೆ 0.2 ರಿಂದ 0.4 ಲೀಟರ್ ನಷ್ಟು ಇಂಧನ ಖರ್ಚಾಗುತ್ತದೆ. ಅದೇ ಸಮಯದಲ್ಲಿ, ಒಂದು ಗಂಟೆಗೆ ಎಸ್​​ಯುವಿಯಲ್ಲಿ ಎಸಿ ಚಾಲನೆಯಲ್ಲಿರುವಾಗ, ಪ್ರತಿ ಗಂಟೆಗೆ 0.5 ರಿಂದ 0.7 ಲೀಟರ್​ಗಳಷ್ಟು ಇಂಧನವನ್ನು ಸೇವಿಸುತ್ತದೆ. ಹಾಗೆಯೆ ಕಾರಿನ ಎಸಿ ಎಷ್ಟು ಇಂಧನವನ್ನು ಬಳಸುತ್ತದೆ ಎಂಬುದು ಇತರ ವಿಷಯಗಳ ಮೇಲೂ ಅವಲಂಬಿತವಾಗಿರುತ್ತದೆ. ಕಾರು ಚಿಕ್ಕದಾಗಿದ್ದರೆ, ಕಾರಿನ ಎಂಜಿನ್ ಕಡಿಮೆ ಸಾಮರ್ಥ್ಯದದ್ದಾಗಿದೆ, ಆಗ ಎಸಿ ಚಾಲನೆಯಲ್ಲಿರುವಾಗ ಇಂಧನ ಬಳಕೆ ಕಡಿಮೆ ಇರುತ್ತದೆ. ಅದೇ ಸಮಯದಲ್ಲಿ, ಕಾರಿನ ಗಾತ್ರವು ದೊಡ್ಡದಾಗಿದ್ದರೆ ಅಂದರೆ ನೀವು ಎಸ್​ಯುವಿಯಲ್ಲಿ ಎಸಿ ಚಾಲನೆ ಮಾಡುತ್ತಿದ್ದರೆ ಇಂಧನ ಬಳಕೆ ಹೆಚ್ಚು ಇರುತ್ತದೆ.

ಹೊರಗಿನ ತಾಪಮಾನವು ತುಂಬಾ ಹೆಚ್ಚಿದ್ದರೆ, ಎಸಿ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದು ಕೂಡ ಮೈಲೇಜ್ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅಂತೆಯೆ ನೀವು ಎಸಿ ಆನ್ ಮಾಡಿ ಆಗಾಗ್ಗೆ ಕಿಟಕಿಗಳನ್ನು ತೆರೆದರೆ ಆಗ ಕಾರು ತಂಪಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಮೈಲೇಜ್ ಕಡಿಮೆ ಆಗಲು ಮುಖ್ಯ ಕಾರಣ. ಚಾಲನೆಯಲ್ಲಿರುವಾಗ ಎಸಿ ಮೈಲೇಜ್ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ನೀವು ಎಲ್ಲಿ ಕಾರನ್ನು ಓಡಿಸುತ್ತಿದ್ದೀರಿ ಎಂಬುದರ ಮೇಲೆಯೂ ಅವಲಂಬಿತವಾಗಿರುತ್ತದೆ. ನಗರಗಳಲ್ಲಿ ವಾಹನ ಚಲಾಯಿಸುವಾಗ ಟ್ರಾಫಿಕ್‌ನಲ್ಲಿ ಪದೇ ಪದೇ ನಿಲ್ಲಿಸಬೇಕಾಗುತ್ತದೆ. ಆಗ ಎಂಜಿನ್ ಹೆಚ್ಚು ಕೆಲಸ ಮಾಡಬೇಕು ಮತ್ತು ಮೈಲೇಜ್ ಕೂಡ ಕುಸಿಯುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ