Auto News: ಅಟೋ ಮಾರುಕಟ್ಟೆಯಲ್ಲಿ ತಗ್ಗಿದ SUV ಕ್ರೇಜ್: ಮೊದಲ ಬಾರಿ ಮಾರಾಟದಲ್ಲಿ ಕುಸಿತ
ಭಾರತದಲ್ಲಿ SUV ವಾಹನಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ, ಜೂನ್ ತಿಂಗಳಲ್ಲಿ SUV ಮಾರಾಟ ಕುಸಿದಿದೆ. ವರದಿಯ ಪ್ರಕಾರ, ಎಸ್‌ಯುವಿ ಮಾರಾಟದಲ್ಲಿನ ಈ ಇಳಿಕೆ ಜನರು ಇಷ್ಟಪಡುತ್ತಿಲ್ಲ ಎಂದಲ್ಲ. ಬದಲಾಗಿ ಐಟಿ ವಲಯದಲ್ಲಿನ ವಜಾಗಳು, ಜಾಗತಿಕ ಅಸ್ಥಿರತೆ ಮತ್ತು ಇತರ ಆರ್ಥಿಕ ಸವಾಲುಗಳು ಇದರ ಹಿಂದಿನ ಕಾರಣಗಳಾಗಿವೆ.

ಬೆಂಗಳೂರು (ಆ. 11): SUV (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ವಾಹನಗಳು ಯಾವಾಗಲೂ ಭಾರತದ ಜನರ ಮೊದಲ ಆಯ್ಕೆಯಾಗಿವೆ. ಅವುಗಳು ತಮ್ಮ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ವಿಶಾಲವಾದ ಕ್ಯಾಬಿನ್ ಮತ್ತು ಆರಾಮದಾಯಕ ಆಸನಗಳಿಂದ ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಇದಕ್ಕಾಗಿ SUV ಗಳ ದೇಶದಲ್ಲಿ ಭರ್ಜರಿ ಸೇಲ್ ಆಗುತ್ತವೆ. ಈ ವಾಹನಗಳು ಕೆಟ್ಟ ರಸ್ತೆಗಳ ಮೂಲಕ ಸುಲಭವಾಗಿ ಹಾದು ಹೋಗುತ್ತವೆ. ಟಾಟಾ ಸಫಾರಿ (TATA Safari), ಮಹೀಂದ್ರಾ ಸ್ಕಾರ್ಪಿಯೋ, ಟೊಯೋಟಾ ಫಾರ್ಚೂನರ್ ಅಥವಾ ಯಾವುದೇ ಇತರ SUV ಆಗಿರಲಿ ಇದಕ್ಕೆ ಉತ್ತಮ ಬೇಡಿಕೆ ಇದೆ. ಆದರೆ ಈಗ ಇದರ ಕ್ರೇಜ್ ಕೊಂಚ ಕಡಿಮೆಯಾಗುತ್ತಿರುವಂತೆ ಕಾಣುತ್ತಿದೆ. ಏಕೆಂದರೆ ಇವುಗಳ ಮಾರಾಟದಲ್ಲಿ ಕುಸಿತ ಕಂಡಿದೆ.
ETAuto ವರದಿಯ ಪ್ರಕಾರ, ಭಾರತದಲ್ಲಿ SUV ಮಾರಾಟವು ಕಳೆದ ಐದು ವರ್ಷಗಳಲ್ಲಿ ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಕಡಿಮೆಯಾಗಿದೆ. ಜೂನ್‌ನಲ್ಲಿ ಸುಮಾರು 1,75,000 SUV ಯೂನಿಟ್‌ಗಳು ಮಾರಾಟವಾಗಿವೆ, ಇದು ಕಳೆದ ವರ್ಷದ ಇದೇ ತಿಂಗಳಿಗಿಂತ 2.1% ಕಡಿಮೆಯಾಗಿದೆ. 2026 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿಯೂ ಸಹ, ಮಾರಾಟದ ಬೆಳವಣಿಗೆ ನಿಧಾನವಾಗಿತ್ತು ಮತ್ತು ಕೇವಲ 5.6% ರಷ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
JATO ಡೈನಾಮಿಕ್ಸ್‌ನ ಮಾಹಿತಿಯ ಪ್ರಕಾರ, ಜೂನ್‌ನಲ್ಲಿ 1,71,341 ಸಾಮಾನ್ಯ SUV ಗಳು ಮತ್ತು 3,660 ಐಷಾರಾಮಿ SUV ಗಳು ಮಾರಾಟವಾಗಿವೆ. ಇದು ಜನವರಿಗಿಂತ ತುಂಬಾ ಕಡಿಮೆ. ಜನವರಿಯಲ್ಲಿ ಒಟ್ಟು 2,11,946 SUV ಗಳು ಮಾರಾಟವಾಗಿದ್ದು, ಇದು ಜೂನ್‌ಗಿಂತ 40,605 ಯುನಿಟ್‌ಗಳು ಹೆಚ್ಚಾಗಿದೆ.
ಮಾರಾಟ ಕಡಿಮೆಯಾಗಲು ಕಾರಣಗಳು
ವರದಿಯ ಪ್ರಕಾರ, ಎಸ್‌ಯುವಿ ಮಾರಾಟದಲ್ಲಿನ ಈ ಇಳಿಕೆ ಜನರು ಇಷ್ಟಪಡುತ್ತಿಲ್ಲ ಎಂದಲ್ಲ. ಬದಲಾಗಿ ಐಟಿ ವಲಯದಲ್ಲಿನ ವಜಾಗಳು, ಜಾಗತಿಕ ಅಸ್ಥಿರತೆ ಮತ್ತು ಇತರ ಆರ್ಥಿಕ ಸವಾಲುಗಳು ಇದರ ಹಿಂದಿನ ಕಾರಣಗಳಾಗಿವೆ. ಎಸ್‌ಯುವಿ ಮಾರಾಟವು ಸ್ವಲ್ಪ ನಿಧಾನವಾಗಿದ್ದರೂ, ಎಂಪಿವಿ (ಬಹುಪಯೋಗಿ ವಾಹನ) ವಾಹನಗಳ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ, ಎಸ್‌ಯುವಿ ಮಾರಾಟದಲ್ಲಿನ ಈ ಇಳಿಕೆ ಜನರ ಆದ್ಯತೆಗಳಲ್ಲಿ ಶಾಶ್ವತ ಬದಲಾವಣೆಯಲ್ಲ.
Maruti Escudo: ಮಾರುತಿಯಿಂದ ಬರುತ್ತಿದೆ ಹೊಚ್ಚ ಹೊಸ ಕಾರು: ಸಿಎನ್‌ಜಿ ಕೂಡ ಲಭ್ಯ
ಭವಿಷ್ಯದಲ್ಲಿ ಏನಾಗುತ್ತದೆ?
ಮುಂದಿನ ವರ್ಷದ ವೇಳೆಗೆ ಅನೇಕ ಹೊಸ SUV ಗಳು ಬಿಡುಗಡೆಯಾಗಲಿದ್ದು, ಇದು ಮಾರುಕಟ್ಟೆಯನ್ನು ಮತ್ತೆ ಸಂಚಲನಗೊಳಿಸಬಹುದು. ಅಂದರೆ, ಮಾರಾಟ ಮತ್ತೆ ಹೆಚ್ಚಾಗಬಹುದು. ಈ ವರ್ಷದ ಅಂತ್ಯದ ವೇಳೆಗೆ ಟಾಟಾ ಮೋಟಾರ್ಸ್ ತನ್ನ ಜನಪ್ರಿಯ SUV ಸಿಯೆರಾವನ್ನು ಎಲೆಕ್ಟ್ರಿಕ್ ಅವತಾರದಲ್ಲಿ ತರಲಿದೆ. ಇದಕ್ಕೆ Sierra.ev ಎಂದು ಹೆಸರಿಡಲಾಗಿದೆ. ಹುಂಡೈ ಕ್ರೆಟಾ ಜೊತೆ ಸ್ಪರ್ಧಿಸಲು ಮಾರುತಿ ಸುಜುಕಿ ಕೂಡ ಹೊಸ SUV ಅನ್ನು ಬಿಡುಗಡೆ ಮಾಡಲಿದೆ, ಇದರ ಹೆಸರು ಎಸ್ಕ್ಯೂಡೊ ಆಗಿದೆ.
2026 ರಲ್ಲಿ ಮಹೀಂದ್ರಾ ಮುಂದಿನ ಪೀಳಿಗೆಯ ಬೊಲೆರೊ, ಫೇಸ್‌ಲಿಫ್ಟೆಡ್ ಥಾರ್ ಮತ್ತು ಫೇಸ್‌ಲಿಫ್ಟೆಡ್ XUV700 ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಮುಂದಿನ ವರ್ಷ ಕಿಯಾ ಕೂಡ ತನ್ನ ಮುಂದಿನ ಪೀಳಿಗೆಯ ಸೆಲ್ಟೋಸ್ ಅನ್ನು ತರಲಿದೆ. ಅದೇ ಸಮಯದಲ್ಲಿ, ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಡಸ್ಟರ್‌ನ ಹೊಸ ಆವೃತ್ತಿ ಮತ್ತು ಹೊಸ SUV ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ. ಈ ವಾಹನಗಳು ಮಾರುಕಟ್ಟೆಗೆ ಬರುತ್ತಿದ್ದಂತೆ, ಮುಂದಿನ ವರ್ಷದ ವೇಳೆಗೆ SUV ಗಳಿಗೆ ಬೇಡಿಕೆ ಮತ್ತೆ ಹೆಚ್ಚಾಗಬಹುದು.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








