255 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಸ್ಕೂಟರ್ ಮಾಲೀಕ ಕೊನೆಗೂ ಸಿಕ್ಕಿಬಿದ್ದಾಗ!

|

Updated on: Dec 13, 2023 | 10:48 PM

ಸಂಚಾರಿ ನಿಯಮಗಳ ಕಟ್ಟುನಿಟ್ಟಾದ ಪಾಲನೆಗಾಗಿ ಹಲವಾರು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದಿದ್ದರೂ ನಿಯಮ ಪಾಲನೆ ಮಾಡದ ವಾಹನ ಸವಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದ ಸ್ಕೂಟರ್ ಮಾಲೀಕನೊಬ್ಬ ಇದೀಗ ಸಿಕ್ಕಿಬೀಳುವ ಮೂಲಕ ಲಕ್ಷಕ್ಕೂ ಅಧಿಕ ಮೊತ್ತದ ದಂಡಾಸ್ತ್ರ ಎದುರಿಸುತ್ತಿದ್ದಾನೆ.

255 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಸ್ಕೂಟರ್ ಮಾಲೀಕ ಕೊನೆಗೂ ಸಿಕ್ಕಿಬಿದ್ದಾಗ!
ಬೆಂಗಳೂರು ಟ್ರಾಫಿಕ್ ಪೊಲೀಸರು
Follow us on

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಳದೊಂದಿಗೆ ಸಂಚಾರಿ ನಿಯಮ (Traffic Rules) ಉಲ್ಲಂಘನೆ ಪ್ರಕರಣಗಳು ಕೂಡಾ ಏರಿಕೆಯಾಗುತ್ತಿವೆ. ಹೀಗಾಗಿ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ದ ಪೊಲೀಸರು ಎಐ ಕ್ಯಾಮೆರಾ ಮೂಲಕ ದಂಡಾಸ್ತ್ರ ಪ್ರಯೋಗಿಸುತ್ತಿದ್ದು, ಸ್ಕೂಟರ್ ಮಾಲೀಕನೊಬ್ಬ ಕೂಡಾ ಹೀಗೆ ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನ ಜಯನಗರದ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ ವೇಳೆ ಸ್ಕೂಟರ್ ಒಂದರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸಿದಾಗ 225 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ. 225 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಬರೋಬ್ಬರಿ 1,34,000 ರೂ. ದಂಡ ವಿಧಿಸಲಾಗಿದ್ದು, ದೊಡ್ಡ ಮೊತ್ತದ ದಂಡಕ್ಕೆ ಸ್ಕೂಟರ್ ಮಾಲೀಕನಾದ ಏಳುಮಲೈ ಶಾಕ್ ಆಗಿದ್ದಾನೆ.

ಇದನ್ನೂ ಓದಿ: ಅಪಘಾತಗಳನ್ನು ತಗ್ಗಿಸಲು ಇನ್ಮುಂದೆ ಈ ಸೇಫ್ಟಿ ಫೀಚರ್ಸ್ ಅಳವಡಿಕೆ ಕಡ್ಡಾಯ!

ಸದ್ಯಕ್ಕೆ 1,34,000 ರೂ. ಬದಲಾಗಿ 10,000 ರೂ. ದಂಡವನ್ನು ಪಾವತಿಸಿರುವ ಸ್ಕೂಟರ್ ಮಾಲೀಕ ಏಳುಮಲೈ ಬಾಕಿ ದಂಡ ಪಾವತಿಗೆ ಸಮಯಾವಕಾಶ ಕೇಳುವುದರ ಜೊತೆಗೆ ದಂಡದ ಮೊತ್ತ ಇಳಿಕೆಗೆ ಮನವಿ ಮಾಡಿದ್ದಾನೆ. ದಿನಗೂಲಿ ನೌಕರನಾಗಿರುವ ಏಳುಮಲೈ ಸ್ಕೂಟರ್ ವಿರುದ್ದ ದಾಖಲಾಗಿರುವ ಬಹುತೇಕ ಪ್ರಕರಣಗಳು ಹೆಲ್ಮೆಟ್ ರಹಿತ ಪ್ರಯಾಣಕ್ಕಾಗಿ ದಂಡ ವಿಧಿಸಲಾಗಿದ್ದು, ದಂಡ ಪಾವತಿಗಾಗಿ ಸ್ಕೂಟರ್ ಮಾರಾಟ ಮಾಡಿದರು ಸಹ ಪಾವತಿ ಅಸಾಧ್ಯ ಎನ್ನಲಾಗಿದೆ.

ಇನ್ನ ವಾಹನಗಳ ಸಂಖ್ಯೆ ಹೆಚ್ಚಳದೊಂದಿಗೆ ರಸ್ತೆ ಅಪಘಾತ ಪ್ರಕರಣಗಳು ಕೂಡಾ ಹೆಚ್ಚುತ್ತಿದ್ದು, ಅಪಘಾತ ಪ್ರಕರಣ ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಕೂಡಾ ಸಾವು ನೋವುಗಳು ಹೆಚ್ಚುತ್ತಿವೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2022ರ ಅವಧಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ವರದಿ ಪ್ರಕಟಿಸಿದ್ದು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಗಳಿಂದ ಪಡೆದ ಮಾಹಿತಿಯ ಆಧರಿಸಿದ ಆತಂಕಕಾರಿಯಾದ ಮಾಹಿತಿ ಹಂಚಿಕೊಂಡಿದೆ. ಭಾರತದಲ್ಲಿ ಕಳೆದ ವರ್ಷ ಒಟ್ಟು 4,61,312 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ಬರೋಬ್ಬರಿ 1,68,491 ಜನ ಪ್ರಾಣಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!

ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವೆಂದರೆ ಅತಿವೇಗದ ಚಾಲನೆ ಎಂದು ಗುರುತಿಸಲಾಗಿದ್ದು, ತದನಂತರದಲ್ಲಿ ಅಜಾಗರೂಕ ಚಾಲನೆ, ಕುಡಿದು ವಾಹನ ಚಾಲನೆ, ಸಂಚಾರ ನಿಯಮ ಪಾಲಿಸದಿರುವುದು ಕೂಡಾ ಪ್ರಮುಖ ಕಾರಣಗಳಾಗಿವೆ. ಇದರಲ್ಲಿ ಮತ್ತೊಂದು ಆತಂಕ ಮಾಹಿತಿಯೆಂದರೆ ಕಳೆದ ವರ್ಷದ ಅಪಘಾತದಲ್ಲಿ ಮರಣ ಹೊಂದಿದವರಲ್ಲಿ ಶೇ. 40 ರಷ್ಟು ಜನ 18 ರಿಂದ 35 ವಯಸ್ಸಿನವರು ಎಂದು ವರದಿ ಉಲ್ಲೇಖಿಸಲಾಗಿದೆ.