BYD Seal: ಆಕರ್ಷಕ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ನೀಡುವ ಬಿವೈಡಿ ಸೀಲ್ ಇವಿ ಬಿಡುಗಡೆ
ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿರುವ ಬಿವೈಡಿ ಕಂಪನಿ ತನ್ನ ಹೊಸ ಸೀಲ್ ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಎಲೆಕ್ಟ್ರಿಕ್ ಕಾರುಗಳ (Electric Cars) ಮಾರಾಟದಲ್ಲಿ ಟೆಸ್ಲಾ ಕಂಪನಿಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಬಿವೈಡಿ (BYD) ಕಂಪನಿ ಭಾರತದಲ್ಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ತನ್ನ ಮೂರನೇ ಕಾರು ಮಾದರಿಯಾದ ಸೀಲ್ (Seal) ಇವಿ ಸೆಡಾನ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಹೊಸ ಸೀಲ್ ಇವಿ ಕಾರು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಡೈನಾಮಿಕ್, ಪ್ರೀಮಿಯಂ ಮತ್ತು ಪರ್ಫಾಮೆನ್ಸ್ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಆರಂಭಿಕ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 41 ಲಕ್ಷ ಬೆಲೆ ಹೊಂದಿದ್ದರೆ ಮಧ್ಯಮ ಕ್ರಮಾಂಕದ ವೆರಿಯೆಂಟ್ ರೂ. 45.55 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಹೆಚ್ಚಿನ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯು ರೂ. 53 ಲಕ್ಷ ಬೆಲೆ ಪಡೆದುಕೊಂಡಿದೆ.
ಭಾರತದಲ್ಲಿ ಸದ್ಯ ಇ6, ಅಟ್ಟೊ 3 ಎಲೆಕ್ಟ್ರಿಕ್ ಕಾರುಗಳ ಮಾರಾಟ ಮಾಡುತ್ತಿರುವ ಬಿವೈಡಿ ಕಂಪನಿ ಇದೀಗ ಸೀಲ್ ಬಿಡುಗಡೆಯೊಂದಿಗೆ ಮತ್ತೊಂದು ಹಂತದ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಎಂಟ್ರಿ ಲೆವಲ್ ಐಷಾರಾಮಿ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲಿದೆ. ಬೆಲೆ ವಿಚಾರವಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲಿರುವ ಹೊಸ ಸೀಲ್ ಕಾರು ಹ್ಯುಂಡೈ ಐಯಾನಿಕ್ 5, ಕಿಯಾ ಇವಿ6 ಮತ್ತು ವೊಲ್ವೊ ಎಕ್ಸ್ ಸಿ40 ರೀಚಾರ್ಜ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.
ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!
ಸೀಲ್ ಇವಿ ಕಾರಿನಲ್ಲಿ ಐಷಾರಾಮಿ ಫೀಚರ್ಸ್ ಜೊತೆಗೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ನೀಡಲಾಗಿದ್ದು, ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಡ್ರೈವ್ ಆಯ್ಕೆಗಳನ್ನು ಹೊಂದಿದೆ. ಇದರೊಂದಿಗೆ ಹೊಸ ಕಾರಿನಲ್ಲಿ 61.44 ಕೆವಿಹೆಚ್ ಮತ್ತು 82.56 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಾಗಿದ್ದು, ಪ್ರತಿ ಚಾರ್ಜ್ ಗೆ ಇದು 510 ಕಿ.ಮೀ ಮತ್ತು 650 ಕಿ.ಮೀ ಮೈಲೇಜ್ ನೀಡುತ್ತದೆ. ಈ ಮೂಲಕ ಇದು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುತ್ತಿದ್ದು, ಟಾಪ್ ಎಂಡ್ ಮಾದರಿಯು 530 ಹಾರ್ಸ್ ಪವರ್ ಉತ್ಪಾದಿಸಬಲ್ಲದು.
ಇದರೊಂದಿಗೆ ಹೊಸ ಸೀಲ್ ಕಾರು 150ಕೆವಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದ್ದು, ಕೇವಲ 37 ನಿಮಿಷಗಳಲ್ಲಿ ಶೇ. 10 ರಿಂದ ಶೇ. 80ರಷ್ಟು ಚಾರ್ಜ್ ಆಗಬಲ್ಲದು. ಉಳಿದಂತೆ ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 11 ಕೆವಿ ಎಸಿ ಹೋಂ ಚಾರ್ಜರ್ ನೀಡಲಾಗಿದ್ದು, ಇದರಲ್ಲಿ ಚಾರ್ಜ್ ಮಾಡುವುದಾದರೇ ಶೇ.100 ರಷ್ಟು ಚಾರ್ಜ್ ಗೆ ಗರಿಷ್ಠ 8 ಗಂಟೆ ಸಮಯಾವಕಾಶ ತೆಗೆದುಕೊಳ್ಳುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ವೆಹಿಕಲ್ ಟು ಲೋಡ್ ಆಯ್ಕೆ ನೀಡಿದ್ದು, ಇದರಲ್ಲಿರುವ ಬ್ಯಾಟರಿಯನ್ನು ಹೊರಾಂಗಣ ಚಟುವಟಿಕೆಗಳಿಗೂ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಭಾರತದಲ್ಲಿ ರೀ ಎಂಟ್ರಿಗೆ ಸಜ್ಜಾದ ಫೋರ್ಡ್ ಹೊಸ ಕಾರುಗಳು ಹೇಗಿರಲಿವೆ?
ಇನ್ನು ಹೊಸ ಸೀಲ್ ಕಾರಿನಲ್ಲಿ ಹಲವಾರು ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿದ್ದು, ಇದು 4,800 ಎಂಎಂ ಉದ್ದಳತೆಯೊಂದಿಗೆ ಅತ್ಯುತ್ತಮ ಒಳಾಂಗಣ ಸೌಲಭ್ಯ ಹೊಂದಿದೆ. ಕೂಪೆ ಸ್ಟೈಲ್ ಹೊಂದಿರುವ ಹೊಸ ಕಾರಿನಲ್ಲಿ ಆಲ್ ಎಲ್ಇಡಿ ಲೈಟಿಂಗ್ಸ್, ಗ್ಲಾಸ್ ರೂಫ್, 19 ಇಂಚಿನ ಅಲಾಯ್ ವ್ಹೀಲ್ಸ್ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದ್ದು, ಒಳಭಾಗದಲ್ಲಿ 15.6 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೆಡ್ಸ್ ಅಪ್ ಡಿಸ್ ಪ್ಲೇ ನೀಡಲಾಗಿದೆ. ಇದರೊಂದಿಗೆ ಹೊಸ ಇವಿ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಡಿಎಎಸ್ ಸೇರಿದಂತೆ 10 ಏರ್ ಬ್ಯಾಗ್ ಗಳನ್ನು ನೀಡಲಾಗಿದೆ. ಈ ಮೂಲಕ ಇದು ಗ್ಲೋಬಲ್ ಕ್ರ್ಯಾಶ್ ಟೆಸ್ಟ್ ನಲ್ಲಿ ಈಗಾಗಲೇ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಭಾರತದಲ್ಲೂ ಹೊಸ ಸಂಚಲನ ಮೂಡಿಸಲಿದೆ.