AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Citroen: ಟಾಟಾ ಕರ್ವ್ ಗೆ ಪೈಪೋಟಿಯಾಗಿ ಬಿಡುಗಡೆಗೆ ಸಿದ್ದವಾದ ಸಿಟ್ರನ್ ಬಸಾಲ್ಟ್

ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಸ ಕಾರು ಉತ್ಪನ್ನಗಳ ಬಿಡುಗಡೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಬಹುನೀರಿಕ್ಷಿತ ಬಸಾಲ್ಟ್ ವಿಷನ್ ಕೂಪೆ ಎಸ್‌ಯುವಿ ಬಿಡುಗಡೆಗಾಗಿ ಭರ್ಜರಿ ತಯಾರಿ ನಡೆಸುತ್ತಿದೆ.

Citroen: ಟಾಟಾ ಕರ್ವ್ ಗೆ ಪೈಪೋಟಿಯಾಗಿ ಬಿಡುಗಡೆಗೆ ಸಿದ್ದವಾದ ಸಿಟ್ರನ್ ಬಸಾಲ್ಟ್
ಸಿಟ್ರನ್ ಬಸಾಲ್ಟ್
Praveen Sannamani
|

Updated on: May 09, 2024 | 10:21 PM

Share

ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಸಿಟ್ರನ್ (Citroen) ಕಂಪನಿಯು ಇತ್ತೀಚೆಗೆ ಸಿ ಸರಣಿ ಕಾರುಗಳ ವಿಭಾಗದಲ್ಲಿ ಹೊಸದಾಗಿ ಬಸಾಲ್ಟ್ ವಿಷನ್ ಕೂಪೆ ಎಸ್‌ಯುವಿ ಅನಾವರಣಗೊಳಿಸಿತ್ತು. ಹೊಸ ಕಾರನ್ನು ಸಿಟ್ರನ್ ಕಂಪನಿಯು ಭಾರತ ಮತ್ತು ದಕ್ಷಿಣ ಅಮೆರಿಕಾದಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದು, ಉತ್ಪಾದನಾ ಮಾದರಿಯು ಇದೀಗ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.

ಭಾರತದಲ್ಲಿ ಸದ್ಯ ಸಿ3, ಇಸಿ3, ಸಿ3 ಏರ್ ಕ್ರಾಸ್ ಮತ್ತು ಸಿ5 ಏರ್ ಕ್ರಾಸ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಸಿಟ್ರನ್ ಕಂಪನಿ ಮುಂಬರುವ ಕೆಲವೇ ತಿಂಗಳುಗಳಲ್ಲಿ ತನ್ನ 5ನೇ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಬಿಡುಗಡೆ ಮಾಡಲು ನಿರ್ಧರಿಸಿರುವ ಹೊಸ ಕೂಪೆ ಎಸ್ ಯುವಿಯು ಸಿ3 ಮತ್ತು ಸಿ3 ಏರ್ ಕ್ರಾಸ್ ಕಾರುಗಳನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಇದು ಮಧ್ಯಮ ಕ್ರಮಾಂಕದ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ. ಹಾಗೆಯೇ ಹೊಸ ಕಾರಿನಲ್ಲಿ ಸಿ3 ಏರ್ ಕ್ರಾಸ್ ಕಾರಿನಲ್ಲಿರುವಂತೆ ಹಲವು ತಾಂತ್ರಿಕ ಅಂಶಗಳನ್ನು ನೀಡಲಾಗುತ್ತಿದ್ದು, ಇದು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ರಸ್ತೆಗಿಳಿಯಬಹುದಾಗಿದೆ.

ಹೊಸ ಬಸಾಲ್ಟ್ ವಿಷನ್ ಕಾರು ಆಕರ್ಷಕವಾದ ಕೂಪೆ ಎಸ್‌ಯುವಿ ಶೈಲಿ ಹೊಂದಿರುವುದರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಗಳಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಎಂಜಿ ಆಸ್ಟರ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ. ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಬಿಡುಗಡೆ ಮಾಡುತ್ತಿರುವ ಕರ್ವ್ ಕಾರಿಗೆ ಇದು ನೇರ ಪೈಪೋಟಿಯಾಗಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ.

ಬಸಾಲ್ಟ್ ವಿಷನ್ ಕಾರು ಪ್ರತಿಸ್ಪರ್ಧಿಗಳಿಗೆ ಪೈಪೋಟಿಯಾಗಿ ಎಲ್ಇಡಿ ಹೆಡ್ ಲ್ಯಾಂಪ್ಸ್, ಎಲ್ಇಡಿ ಟೈಲ್ ಲ್ಯಾಂಪ್ಸ್, 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್ ಮತ್ತು ಕೂಪೆ ವಿನ್ಯಾಸಕ್ಕೆ ಪೂರಕವಾದ ಶಾರ್ಕ್ ಫಿನ್ ಆಟೆಂನಾ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದೆ. ಹಾಗೆಯೇ ಹೊಸ ಕಾರಿನ ಒಳಾಂಗಣವು ಕೂಡಾ ಸಾಕಷ್ಟು ಸ್ಥಳಾವಕಾಶದೊಂದಿಗೆ ಪ್ರಯಾಣಿಕರಿಗೆ ಪ್ರೀಮಿಯಂ ಚಾಲನಾ ಅನುಭವ ನೀಡಲಿದ್ದು, ಹೊಸ ಕಾರಿನ ಇಂಟಿರಿಯರ್ ಶೀಘ್ರದಲ್ಲಿಯೇ ಬಹಿರಂಗವಾಗಲಿದೆ.

ಇನ್ನು ಹೊಸ ಕಾರಿನ ಒಳಭಾಗದಲ್ಲಿ ಸಿಟ್ರನ್ ಕಂಪನಿಯು ಲೆದರ್ ಆಸನಗಳೊಂದಿಗೆ ಫ್ರಂಟ್ ಸೀಟ್ ವೆಂಟೆಲೆಷನ್ ಸಿಸ್ಟಂ ಜೋಡಣೆ ಮಾಡಿದೆ. ಇದರ ಜೊತೆಗೆ ವೆರ್ ಲೆಸ್ ಚಾರ್ಜಿಂಗ್ ಪಾಡ್, ಆಟೋ ಹೆಡ್ ಲ್ಯಾಂಪ್, ಆಟೋ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಗಳಿರಲಿವೆ. ಮಾಹಿತಿಗಳ ಪ್ರಕಾರ, ಹೊಸ ಕಾರಿನಲ್ಲಿ ಕಂಪನಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ಪರಿಚಯಿಸಲಿದೆಯೆಂತೆ. ಟ್ಯೂನ್ ಮಾಡಲಾಗಿರುವ ಹೊಸ ಪೆಟ್ರೋಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದ್ದು, ಇದು 108 ಹಾರ್ಸ್ ಪವರ್ ಮತ್ತು 190 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿರಬಹುದಾಗಿದೆ.

ಈ ಮೂಲಕ ಹೊಸ ಬಸಾಲ್ಟ್ ವಿಷನ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವ ಸಿಟ್ರನ್ ಕಂಪನಿ ಈ ವರ್ಷದ ಕೊನೆಯಲ್ಲಿ ಅಥವಾ 2025ರ ಆರಂಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.