ಎಕ್ಸ್‌ಟರ್ ಸೇರಿದಂತೆ ವಿವಿಧ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಹ್ಯುಂಡೈ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಮೇಲೆ ಭರ್ಜರಿ ಆಫರ್ ಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಎಕ್ಸ್‌ಟರ್ ಮೇಲೂ ಆಫರ್ ನೀಡುತ್ತಿದ್ದು, ಆಫರ್ ಗಳ ಮಾಹಿತಿ ಇಲ್ಲಿದೆ.
ಹೊಸ ಕಾರುಗಳ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುತ್ತಿರುವ ಹ್ಯುಂಡೈ (Hyundai) ಕಂಪನಿಯು ಮೇ ಅವಧಿಗಾಗಿ ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ ಗಳನ್ನು ಘೋಷಣೆ ಮಾಡಿದೆ. ಹೊಸ ಆಫರ್ ಗಳಲ್ಲಿ ಹ್ಯುಂಡೈ ಕಂಪನಿಯು ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಗಳನ್ನು ನೀಡುತ್ತಿದ್ದು, ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.
ಹ್ಯುಂಡೈ ಕಂಪನಿಯು ಮೇ ತಿಂಗಳ ಆಫರ್ ನಲ್ಲಿ ಎಕ್ಸ್‌ಟರ್ ಮಾದರಿಯ ಮೇಲೆ ಮೊದಲ ಬಾರಿಗೆ ರಿಯಾಯ್ತಿಗಳನ್ನು ಘೋಷಣೆ ಮಾಡಿದೆ. ಎಕ್ಸ್‌ಟರ್ ಕಾರು ಖರೀದಿಸುವ ಗ್ರಾಹಕರಿಗೆ ರೂ. 10 ಸಾವಿರ ತನಕ ಎಕ್ಸ್ ಚೆಂಜ್ ಬೋನಸ್ ನೀಡುತ್ತಿದ್ದು, ಇದು ಪ್ರಮುಖ 17 ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ.
ಎಕ್ಸ್‌ಟರ್ ಕಾರು ಮಾದರಿಯಲ್ಲಿ 1.2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆಗಳನ್ನು ನೀಡಲಾಗುತ್ತಿದ್ದು, ಇದು ಸಣ್ಣ ಕಾರುಗಳ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಸ್ಯಾಂಟ್ರೊ ಸ್ಥಗಿತ ನಂತರದ ಬಂದ ಎಕ್ಸ್‌ಟರ್ ಕಾರು ಟಾಟಾ ಪಂಚ್ ಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 6.13 ಲಕ್ಷದಿಂದ ರೂ. 10.28 ಲಕ್ಷ ಬೆಲೆ ಹೊಂದಿದೆ.
ಇದನ್ನೂ ಓದಿ: ಕೋಟಿ ಬೆಲೆಯ ಪವರ್ ಫುಲ್ ಐಷಾರಾಮಿ ಕಾರು ಖರೀದಿಸಿದ ‘ಸಿಂಹಪ್ರಿಯಾ’ ಜೋಡಿ
ಎಕ್ಸ್‌ಟರ್ ನಂತರ ಹ್ಯುಂಡೈ ಕಂಪನಿಯು ವೆನ್ಯೂ ಮತ್ತು ಗ್ರ್ಯಾಂಡ್ ಐ10 ನಿಯೋಸ್ ಮೇಲೂ ಅತ್ಯುತ್ತಮ ಆಫರ್ ಗಳನ್ನು ನೀಡುತ್ತಿದೆ. ವೆನ್ಯೂ ಕಾರು ಖರೀದಿಯ ಮೇಲೆ ರೂ. 35 ಸಾವಿರ ಮೌಲ್ಯದ ಆಫರ್ ನೀಡಲಾಗುತ್ತಿದ್ದರೆ ಗ್ರ್ಯಾಂಡ್ ಐ10 ನಿಯೋಸ್ ಮೇಲೆ ರೂ. 48 ಸಾವಿರ ಮೌಲ್ಯದ ಆಫರ್ ನೀಡಲಾಗುತ್ತಿದೆ. ಹೊಸ ಆಫರ್ ಗಳಲ್ಲಿ ವೆನ್ಯೂ ಕಾರು ರೂ. 25 ಸಾವಿರದಷ್ಟು ಕ್ಯಾಶ್ ಡಿಸ್ಕೌಂಟ್ ಹೊಂದಿದ್ದರೆ ಗ್ರ್ಯಾಂಡ್ ಐ10 ನಿಯೋಸ್ ಕಾರು ರೂ. 45 ಸಾವಿರದಷ್ಟು ಕ್ಯಾಶ್ ಡಿಸ್ಕೌಂಟ್ ಪಡೆದುಕೊಂಡಿದೆ.
ವೆನ್ಯೂ ಮತ್ತು ಗ್ರ್ಯಾಂಡ್ ಐ10 ನಿಯೋಸ್ ಕಾರುಗಳು ಹ್ಯುಂಡೈ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಡುವ ಮಾದರಿಗಳಾಗಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 7.94 ಲಕ್ಷದಿಂದ ರೂ.13.90 ಲಕ್ಷ ಮತ್ತು ರೂ. 5.92 ಲಕ್ಷದಿಂದ ರೂ. 8.56 ಲಕ್ಷದ ತನಕ ಬೆಲೆ ಹೊಂದಿವೆ. ಇವುಗಳಲ್ಲಿ 1.2 ಲೀಟರ್ ಪೆಟ್ರೋಲ್, 1.2 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿವೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಇನ್ನು ಹ್ಯುಂಡೈ ಕಂಪನಿಯು ಜನಪ್ರಿಯ ಹ್ಯಾಚ್ ಬ್ಯಾಕ್ ಮಾದರಿಯಾದ ಐ20 ಮೇಲೂ ವಿವಿಧ ಆಫರ್ ನೀಡುತ್ತಿದೆ. ಐ20 ಖರೀದಿಯ ಮೇಲೆ ರೂ. 45 ಸಾವಿರ ತನಕ ಆಫರ್ ಸಿಗಲಿದ್ದು, ಇದರಲ್ಲಿ ರೂ. 20 ಸಾವಿರ ತನಕ ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದಾಗಿದೆ. ಐ20 ಕಾರು ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ಮಾದರಿಯಾಗಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹೊಸ ಆಫರ್ ನೀಡಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 7.04 ಲಕ್ಷದಿಂದ ರೂ. 12.52 ಲಕ್ಷ ಬೆಲೆ ಹೊಂದಿರುವ ಐ20 ಕಾರು 1.2 ಲೀಟರ್ ಪೆಟ್ರೋಲ್, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.