ಹೀರೋ ಮೋಟೊಕಾರ್ಪ್(Hero MotoCorp) ಕಂಪನಿಯು ತನ್ನ ಹೊಚ್ಚ ಹೊಸ ಕರಿಜ್ಮಾ ಎಕ್ಸ್ಎಂಆರ್(Karizma XMR) ಬೈಕ್ ಮಾದರಿಯನ್ನು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಿತ್ತು. ಈ ವೇಳೆ ಹೊಸ ಬೈಕ್ ಬೆಲೆಯನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1,72,900 ನಿಗದಿಪಡಿಸಿದ್ದ ಹೀರೋ ಮೋಟೊಕಾರ್ಪ್ ಕಂಪನಿಯೂ ಇದೀಗ ಪೂರ್ವ ನಿಗದಿಯೆಂತೆ ರೂ. 7 ಸಾವಿರ ಬೆಲೆ ಹೆಚ್ಚಿಸಿದೆ.
ಹೊಸ ಕರಿಜ್ಮಾ ಎಕ್ಸ್ಎಂಆರ್ ಬೈಕ್ ಬಿಡುಗಡೆಯ ಸಂದರ್ಭದಲ್ಲಿಯೇ ಬೆಲೆ ಏರಿಕೆಯ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದ ಹೀರೋ ಕಂಪನಿಯು ಇದೀಗ ಹೊಸ ದರ ಬಹಿರಂಗಪಡಿಸಿದ್ದು, ಹೊಸ ದರ ಪಟ್ಟಿಯಲ್ಲಿ 1.80 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಹೊಸ ಬೈಕ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನವೀಕರಣಗೊಂಡಿದ್ದು, ಹೊಸ ತಲೆಮಾರಿನ ಹಲವಾರು ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.
ಸುಮಾರು ಎರಡು ದಶಕಗಳ ಜನಪ್ರಿಯತೆ ಹೊಂದಿದ್ದ ಕರಿಜ್ಮಾ ಬೈಕ್ ಇತ್ತೀಚೆಗೆ ವಿವಿಧ ಕಂಪನಿಗಳ ಪ್ರತಿಸ್ಪರ್ಧಿ ಬೈಕ್ ಮಾದರಿಗಳಿಂದ ತೀವ್ರ ಹಿನ್ನಡೆ ಅನುಭವಿಸಿತ್ತು. ಜೊತೆಗೆ ಕೇಂದ್ರ ಸರ್ಕಾರವು ಜಾರಿಗೆ ತಂದ ಹೊಸ ಸುರಕ್ಷಾ ಮಾನದಂಡಗಳು ಮತ್ತು ಮಾಲಿನ್ಯ ನಿಯಂತ್ರಣ ಮಾನದಂಡಗಳು ಕರಿಜ್ಮಾ ಮಾರಾಟ ಸ್ಥಗಿತಕ್ಕೆ ಪ್ರಮಖ ಕಾರಣವಾಗಿತ್ತು. ಕಳೆದ ಮೂರು ವರ್ಷಗಳ ಹಿಂದೆಯೇ ಕರಿಜ್ಮಾ ಮಾರಾಟ ಸ್ಥಗಿತಗೊಳಿಸಿದ್ದ ಹೀರೋ ಮೋಟೊಕಾರ್ಪ್ ಕಂಪನಿಯು ಇದೀಗ ಭಾರೀ ಬದಲಾವಣೆಯೊಂದಿಗೆ ಮರುಬಿಡುಗಡೆ ಮಾಡಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟಾಪ್ 5 ಇವಿ ಸ್ಕೂಟರ್ ಗಳಿವು!
ಕರಿಜ್ಮಾ ಎಕ್ಸ್ಎಂಆರ್ ಬೈಕ್ ನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿ ಹೊಸ 210 ಸಿಸಿ ಸಿಂಗಲ್ ಸಿಲಿಂಡರ್ ಡಿಏಹೆಚ್ ಸಿ, ಲಿಕ್ವಿಡ್ ಕೂಲ್ಡ್ ಎಂಜಿನ್ ಜೋಡಣೆ ಮಾಡಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 25.1 ಹಾರ್ಸ್ ಪವರ್ ಮತ್ತು 20.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಬೈಕಿನಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಗಾಗಿ ಸ್ಲಿಪ್ ಅಂಡ್ ಅಸಿಸ್ಟ್ ಕ್ಲಚ್ ನೀಡಲಾಗಿದ್ದು, ಇದು ಹಿಂಬದಿಯ ಚಕ್ರಕ್ಕೆ ಹೆಚ್ಚಿನ ಶಕ್ತಿ ಒದಗಿಸಲು ಸಹಕಾರಿಯಾಗಿದೆ.
ಹೊಸ ಕರಿಜ್ಮಾ ಎಕ್ಸ್ಎಂಆರ್ ಬೈಕ್ ಮಾದರಿಯು ಸ್ಟೀಲ್ ಟ್ರೇಲ್ಲಿಸ್ ಫ್ರೇಮ್ ಆಧರಿಸಿ ನಿರ್ಮಾಣಗೊಂಡಿದ್ದು, ಮುಂಭಾಗದಲ್ಲಿ ಟೆಲಿಸ್ಕೋಫಿಕ್ ಫೋರ್ಕ್ಸ್ ಮತ್ತು ಹಿಂಬದಿಯ ಚಕ್ರದಲ್ಲಿ ಮೊನೊಶಾಕ್ ಸಸ್ಷೆಂಷನ್ ನೀಡಲಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ನೀಡಲಾಗಿದ್ದು, ಸುರಕ್ಷಿತ ಬೈಕ್ ಚಾಲನೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ನೀಡಲಾಗಿದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್
ಇನ್ನು ಹೊಸ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ನೊಂದಿಗೆ ಕರಿಜ್ಮಾ ಎಕ್ಸ್ಎಂಆರ್ ಬೈಕ್ ಹೆಚ್ಚಿನ ಮಟ್ಟದ ಸ್ಪೋರ್ಟಿ ವಿನ್ಯಾಸ ಪಡೆದುಕೊಂಡಿದ್ದು, ವೈ ಆಕಾರದಲ್ಲಿರುವ ಎಲ್ಇಡಿ ಡಿಆರ್ ಎಲ್ ಹೆಚ್ಚು ಆಕರ್ಷಕವಾಗಿದೆ. ಹಾಗೆಯೇ ಪೂರ್ಣ ಪ್ರಮಾಣ ಆಕಾರ ಹೊಂದಿರುವ ಹೆಡ್‌ಲೈಟ್ ಸೆಟಪ್ ಹೊಂದಿದ್ದು, ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಮತ್ತು ರಿಯರ್ ವ್ಯೂ ಮಿರರ್‌ಗಳು ಹ್ಯಾಂಡಲ್‌ಬಾರ್ ಹೆಚ್ಚಿನ ಎತ್ತರದೊಂದಿಗೆ ಆಕರ್ಷಕ ನೋಟ ನೀಡುತ್ತವೆ.
ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಹಗುರುವಾಗಿರುವ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಸ್ಪೋರ್ಟಿಯಾಗಿರುವ ಎಕ್ಸಾಸ್ಟ್ ಮತ್ತು ಸ್ಲಿಮ್ ಆಗಿರುವ ಹಿಂಬದಿಯ ಎಲ್ಇಡಿ ಲೈಟಿಂಗ್ ಜೋಡಿಸಲಾಗಿದ್ದು, ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಫುಲ್ ಡಿಜಿಟಲ್ ಎಲ್ ಸಿಡಿ ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಬೈಕ್ ಸವಾರರು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಜೊತೆಗೆ ವಿವಿಧ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.