Hero Xpulse 200T 4V: ಬಿಡುಗಡೆಯಾಗಲಿದೆ ಬಲಶಾಲಿ ಹೀರೋ ಎಕ್ಸ್ ಪಲ್ಸ್ 200ಟಿ 4ವಿ ವರ್ಷನ್
ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೊಸ ಎಕ್ಸ್ ಪಲ್ಸ್ 200ಟಿ 4ವಿ ಮಾದರಿಯ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಬೈಕ್ ಮಾದರಿಯು ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.
ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹೀರೋ ಮೋಟೊಕಾರ್ಪ್(Hero Motocorp) ಕಂಪನಿಯು ಹೊಸ ಎಕ್ಸ್ ಪಲ್ಸ್ 200ಟಿ 4ವಿ (Xpulse 200T 4V) ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದ್ದು, ಹೊಸ ಬೈಕ್ ಬಿಡುಗಡೆಗೂ ಮುನ್ನ ಟೀಸರ್ ಚಿತ್ರದೊಂದಿಗೆ ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಹೊಸ ಬೈಕ್ ಮಾದರಿಯ ಮುಂಭಾಗ ವಿನ್ಯಾಸದ ಟೀಸರ್ ಪ್ರಕಟಿಸಲಾಗಿದ್ದು, ಹೊಸ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಕ್ಸ್ ಪಲ್ಸ್ 200ಟಿ ಮಾದರಿಗಿಂತಲೂ ಹೆಚ್ಚಿನ ಬದಲಾವಣೆ ಪಡೆದುಕೊಳ್ಳಲಿದೆ.
ಡಿಸೈನ್ ಮತ್ತು ಫೀಚರ್ಸ್ ಹೊಸ ಎಕ್ಸ್ ಪಲ್ಸ್ 200ಟಿ 4ವಿ ಮಾದರಿಯು ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಆಕರ್ಷಕ ಮತ್ತು ಸ್ಪೋರ್ಟಿ ಡಿಸೈನ್ ಹೊಂದಿದೆ. ಜೊತೆಗೆ ಹಲವು ಹೊಸ ತಾಂತ್ರಿಕ ಅಂಶಗಳಿದ್ದು, ಡ್ಯುಯಲ್ ಟೋನ್ ಆಸನ, ಸ್ಪೋರ್ಟಿಯಾಗಿರುವ ಬೆಲ್ಲಿ ಪ್ಯಾನ್, ಫೋರ್ಕ್ ಗ್ಲೈಟರ್ಸ್ ಮತ್ತು ಹೊಸ ಪ್ಲೈ ಸ್ಕ್ರೀನ್ ಸೌಲಭ್ಯವಿದೆ. ಹಾಗೆಯೇ ಹೊಸ ಬೈಕಿನಲ್ಲಿ ಫಂಕ್ಷನಲ್ ಲಾಕಿಂಗ್ ಗ್ರ್ಯಾಬ್ ರೈಲ್ ಸೇರಿದಂತೆ ಹಲವು ಫೀಚರ್ಸ್ ಗಳಿದ್ದು, ಇದು ಸಿಟಿ ರೈಡ್ ಜೊತೆಗೆ ಆಫ್-ರೋಡ್ ಚಾಲನೆಗೂ ಸಹಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: ಹೊಸ ಎಲ್ಎಂಎಲ್ ಸ್ಟಾರ್ ಇವಿ ಸ್ಕೂಟರ್ ಖರೀದಿ ಬುಕಿಂಗ್ ಶುರು
ಎಂಜಿನ್ ಮತ್ತು ಪರ್ಫಾಮೆನ್ಸ್ ಎಕ್ಸ್ ಪಲ್ಸ್ 200ಟಿ 4ವಿ ಬೈಕ್ ಮಾದರಿಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 199.6 ಸಿಸಿ, 4 ವಾಲ್ವ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿರಲಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 18.83 ಬಿಎಚ್ ಪಿ ಮತ್ತು 17.35 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. 2 ವಾಲ್ವ್ ಹೊಂದಿದ್ದ ಹಳೆಯ ಮಾದರಿಗಿಂತಲೂ ಹೊಸ ಆವೃತ್ತಿಯು ಪವರ್ ಫುಲ್ 4 ವಾಲ್ವ್ ಹೊಂದಿದ್ದು, ಇದು 200ಸಿಸಿ ಸೆಗ್ಮೆಂಟ್ ನಲ್ಲಿ ಉತ್ತಮ ಪವರ್ ಬೈಕ್ ಮಾದರಿಗಳಿಗಾಗಿ ಎದುರುನೋಡುತ್ತಿರುವ ಗ್ರಾಹಕರನ್ನು ಸೆಳೆಯಲಿದೆ.
ಹೊಸ ಬೈಕ್ ಮಾದರಿಯು ಮಹತ್ವದ ಬದಲಾವಣೆಯೊಂದಿಗೆ ತುಸು ದುಬಾರಿಯಾಗಿರಲಿದ್ದು, ಮುಂಬರುವ ಜನವರಿ ವೇಳೆಗೆ ಹೊಸ ಬೈಕ್ ಅಧಿಕೃತವಾಗಿ ಲಭ್ಯವಾಗಬಹುದಾಗಿದೆ. ಹೊಸ ಬೈಕ್ ಖರೀದಿಗಾಗಿ ಈಗಾಗಲೇ ಬುಕಿಂಗ್ ಸಹ ಆರಂಭವಾಗಿದ್ದು, ಪ್ರಮುಖ ಪ್ರತಿಸ್ಪರ್ಧಿ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.