LML Star Electric Scooter: ಹೊಸ ಎಲ್ಎಂಎಲ್ ಸ್ಟಾರ್ ಇವಿ ಸ್ಕೂಟರ್ ಖರೀದಿ ಬುಕಿಂಗ್ ಶುರು
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಸ್ಕೂಟರ್ ಉತ್ಪಾದನಾ ಕಂಪನಿಯಾಗಿರುವ ಎಲ್ಎಂಎಲ್ ಕೂಡಾ ಹೊಸ ಇವಿ ಸ್ಕೂಟರ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಲೋಹಿಯಾ ಮೋಟಾರ್ಸ್ ಲಿಮಿಟೆಡ್(LML) ಕಂಪನಿಯು ಎಲೆಕ್ಟ್ರಿಕ್ ವಾಹನ(Electric Vehicles) ಉದ್ಯಮ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ಹೊಸ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಯೋಜನೆ ಅಡಿ ಮೊದಲ ಹಂತದಲ್ಲಿ ಕಂಪನಿಯು ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಮುಂದಾಗಿದ್ದು, ಹೊಸ ಸ್ಕೂಟರ್ ಮಾದರಿಗಾಗಿ ಇದೀಗ ಕಂಪನಿಯು ಅಧಿಕೃತ ಬುಕಿಂಗ್ ಆರಂಭಿಸಿದೆ.
ಉಚಿತ ಬುಕಿಂಗ್ ಘೋಷಣೆ
ಹೊಸದಾಗಿ ಬಿಡುಗಡೆ ಮಾಡಲಾಗಿರುವ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಎಲ್ಎಂಎಲ್ ಕಂಪನಿಯು ಆಸಕ್ತ ಗ್ರಾಹಕರಿಂದ ಉಚಿತವಾಗಿ ಬುಕಿಂಗ್ ಸ್ವಿಕರಿಸುತ್ತಿದ್ದು, ಹೊಸ ಇವಿ ಸ್ಕೂಟರ್ ಕುರಿತಾಗಿ ಇದುವರೆಗೂ ಯಾವುದೇ ಅಧಿಕೃತ ತಾಂತ್ರಿಕ ಅಂಶಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ಹೀಗಾಗಿ ಕಂಪನಿಯು ಸದ್ಯಕ್ಕೆ ಆಸಕ್ತ ಗ್ರಾಹಕರಿಂದ ಯಾವುದೇ ಮುಂಗಡ ಸ್ವಿಕರಿಸದೆ ಬುಕಿಂಗ್ ಸ್ವಿಕರಿಸುತ್ತಿದ್ದು, ಆಧುನಿಕ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಹೊಸ ಇವಿ ದ್ವಿಚಕ್ರ ವಾಹನಗಳಿಗಾಗಿ ಎಲ್ಎಂಎಲ್ ಕಂಪನಿಯು ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಟ್ರೇಡ್ ಮಾರ್ಕ್ ಸಹ ಸಲ್ಲಿಸಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವಾಗಿ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ವೆಸ್ಪಾ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಲ್ಎಂಎಲ್ ಕೂಡಾ ಸಹಭಾಗೀತ್ವ ಯೋಜನೆ ಅಡಿ ಇವಿ ವಾಹನ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ದವಾಗಿದೆ.
ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ಮುಂದಿನ ಎರಡು ವರ್ಷದೊಳಗೆಗ ಮೂರು ಹೊಸ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿರುವ ಎಲ್ಎಂಎಲ್ ಕಂಪನಿಯು ಇದಕ್ಕಾಗಿ ಕಂಪನಿಯು ರೂ. 1 ಸಾವಿರ ಕೋಟಿ ಹೂಡಿಕೆಯೊಂದಿಗೆ ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ. 1972ರಲ್ಲಿ ಮೊದಲ ಬಾರಿಗೆ ದ್ವಿಚಕ್ರ ವಾಹನಗಳನ್ನು ಆರಂಭಿಸಿದ್ದ ಉತ್ತರಪ್ರದೇಶದ ಕಾನ್ಪುರ್ ಮೂಲದ ಎಲ್ಎಂಎಲ್ ಕಂಪನಿಯು ಹಲವಾರು ಜನಪ್ರಿಯ ವಾಹನಗಳನ್ನು ಬಿಡುಗಡೆ ಮಾಡಿತ್ತು.
1984ರ ವೇಳೆಗೆ ತನ್ನ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿ ಗುರುತಿಸಿಕೊಂಡ ಎಲ್ಎಂಎಲ್ ಕಂಪನಿಯು ತದನಂತರ ವೆಸ್ಪಾ ಸ್ಕೂಟರ್‌ಗಳನ್ನು ಭಾರತದಲ್ಲಿ ತಯಾರಿಸಲು ಪಿಯಾಜಿಯೊ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಕಂಪನಿಯು ಹೊಸ ತಲೆಮಾರಿನ ಇವಿ ವಾಹನಗಳೊಂದಿಗೆ ಪ್ರತ್ಯೇಕ ಹೂಡಿಕೆಯ ಮೂಲಕ ಮರಳಿ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ದವಾಗುತ್ತಿದ್ದು, ಹರಿಯಾಣ ಮೂಲದ ಸೈರಾ ಎಲೆಕ್ಟ್ರಿಕ್ ಆಟೋ ಸಹಯೋಗದಲ್ಲಿ ಎಲ್ಎಂಎಲ್ ಕಂಪನಿಯು ಹೊಸ ಇವಿ ವಾಹನಗಳನ್ನು ಉತ್ಪಾದಿಸಲಿದೆ.
ಹೊಸ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಕಂಪನಿಯು ತನ್ನ ಹಳೆಯ ಸ್ಟಾರ್ ಪೆಟ್ರೋಲ್ ಮಾದರಿಯ ಹೆಸರನ್ನು ಇದೀಗ ಇವಿ ಸ್ಕೂಟರ್ ಮಾದರಿಗಾಗಿ ಬಳಕೆ ಮಾಡುತ್ತಿದ್ದು, ಮ್ಯಾಕ್ಸಿ ವೈಶಿಷ್ಟ್ಯತೆ ಹೊಂದಿರುವ ಹೊಸ ಮಾದರಿಯು ಸ್ಪೋರ್ಟಿ ಎಡ್ಜ್ ಜೊತೆಗೆ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿರಲಿದೆ. ಇವಿ ಸ್ಕೂಟರ್‌ನಲ್ಲಿ ಕಂಪನಿಯು ಅಪ್ ಫ್ರಂಟ್, ಸ್ಪೋರ್ಟಿಯಾಗಿರುವ ಡಿಸ್‌ಪ್ಲೇ ಪ್ಯಾನೆಲ್, ಆಸನ, ಹೆಚ್ಚಿನ ಸ್ಥಳಾವಕಾಶ ಹೊಂದಿರುವ ಫ್ಲೋರ್‌ಬೋರ್ಡ್ ಮತ್ತು ರೆಡ್ ಆಕ್ಸೆಂಟ್ ಹೊಂದಿರುವ ಗಾರ್ಬ್ ರೈಲ್ ಸೌಲಭ್ಯವನ್ನು ನೀಡಲಾಗಿದ್ದು, ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಕುರಿತಾಗಿ ಯಾವುದೇ ಮಾಹಿತಿಗಳನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸಲಿದೆ.
Published On - 12:15 pm, Sat, 5 November 22