Honda: ಹೋಂಡಾ ಎಕ್ಸ್ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಬೈಕ್ ಬಿಡುಗಡೆ

|

Updated on: Nov 01, 2023 | 9:27 PM

ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಭಾರತದಲ್ಲಿ ತನ್ನ ಹೊಚ್ಚ ಹೊಸ ಎಕ್ಸ್ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಿದೆ.

Honda: ಹೋಂಡಾ ಎಕ್ಸ್ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಬೈಕ್ ಬಿಡುಗಡೆ
ಹೋಂಡಾ ಎಕ್ಸ್ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಬೈಕ್
Follow us on

ಮುಂಚೂಣಿ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಮೋಟಾರ್ ಸೈಕಲ್(Honda Motorcycle & Scooter) ಭಾರತದಲ್ಲಿ ತನ್ನ ಹೊಸ ಎಕ್ಸ್ಎಲ್750 ಟ್ರಾನ್ಸಲ್ಪ್ (XL750 Transalp) ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ.11 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಪ್ರೀಮಿಯಂ ಬೈಕ್ ಮಾದರಿಗಳಿಗೆ ಹೆಚ್ಚುತ್ತಿರುವ ಬೇಡಿಕೆ ಆಧರಿಸಿ ಹೋಂಡಾ ಕಂಪನಿಯು ಎಕ್ಸ್ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಬೈಕ್ ಪರಿಚಯಿಸಿದ್ದು, ಹೊಸ ಬೈಕ್ ಮಾದರಿಯು ಸಿಬಿಯು ಆಮದು ನೀತಿ ಅಡಿಯಲ್ಲಿ ಭಾರತದಲ್ಲಿ ಮಾರಾಟಗೊಳ್ಳಲಿದೆ. ಹೀಗಾಗಿ ಹೊಸ ಬೈಕ್ ಮಾದರಿಯು ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಮೊದಲ ಹಂತದಲ್ಲಿ ಕೇವಲ 100 ಗ್ರಾಹಕರಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

ಹೊಸ ಎಕ್ಸ್ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಬೈಕ್ ಮಾದರಿಯನ್ನು ಹೋಂಡಾ ಮೋಟಾರ್ ಸೈಕಲ್ ಕಂಪನಿಯು ತನ್ನ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟ ಮಳಿಗೆಯಾದ ಬಿಗ್ ವಿಂಗ್ ಟಾಪ್ ಲೈನ್ ಪ್ಲ್ಯಾಟ್ ಫಾರ್ಮ್ ಮೂಲಕ ಮಾರಾಟ ಮಾಡಲಿದ್ದು, ಹೊಸ ಬೈಕ್ ಮಾದರಿಯು ವಿಶೇಷವಾಗಿ ಅಡ್ವೆಂಚರ್ ಬೈಕ್ ಸವಾರರಿಗಾಗಿಯೇ ಅಭಿವೃದ್ದಿಗೊಂಡಿದೆ.

ಇದನ್ನೂ ಓದಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಎಕ್ಸ್ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಬೈಕ್ ಮಾದರಿಯಲ್ಲಿ ಹೋಂಡಾ ಕಂಪನಿಯು 755 ಸಿಸಿ, ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ ಜೋಡಣೆ ಮಾಡಿದ್ದು, ಇದು 270 ಡಿಗ್ರಿ ಕ್ರ್ಯಾಂಕ್‌ನಿಂದ ಚಾಲಿತವಾಗಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದ್ದು, ಇದು 90.51 ಹಾರ್ಸ್ ಪವರ್ ಮತ್ತು 75 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಜೊತೆಗೆ ಹೊಸ ಬೈಕಿನ ಎಂಜಿನ್ ನಿಕಲ್ ಸಿಲಿಕಾನ್ ಕಾರ್ಬೈಡ್ ಕೋಟಿಂಗ್ ಹೊಂದಿದ್ದು, ವೋರ್ಟೆಕ್ಸ್ ಫ್ಲೋ ಡಕ್ಟ್ಸ್, ಥ್ರೊಟಲ್ ಬೈ-ವೈರ್ ಟೆಕ್, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (HSTC) ಎಂಜಿನ್ ಬ್ರೇಕಿಂಗ್ ಈ ಬೈಕಿನ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಜೊತೆಗೆ ಹೊಸ ಬೈಕಿನಲ್ಲಿ ಅಡ್ವೆಂಚರ್ ಬೈಕ್ ಚಾಲನೆಗೆ ಸಹಕಾರಿಯಾಗುವ ಸ್ಪೋರ್ಟ್, ಸ್ಟ್ಯಾಂಡರ್ಡ್, ರೈನ್, ಗ್ರಾವೆಲ್ ಮತ್ತು ಯೂಸರ್ ಎಂಬ ಐದು ರೈಡ್ ಮೋಡ್‌ಗಳನ್ನು ನೀಡಲಾಗಿದ್ದು, ಇದರಲ್ಲಿ ಸಾಕಷ್ಟು ಹಗುರವಾಗಿರುವ ಸ್ಟೀಲ್ ಡೈಮಂಡ್ ಫ್ರೇಮ್ ನೊಂದಿಗೆ ಮುಂಭಾಗದಲ್ಲಿ 43ಎಂಎಂ ಎಸ್ಎಫ್ಎಫ್-ಸಿಎ ಯುಎಸ್ ಡಿ ಫೋರ್ಕ್ಸ ಮತ್ತು ಹಿಂಬದಿಯಲ್ಲಿ ಪ್ರೊ ಲಿಂಕ್ ಮೊನೊ ಸಸ್ಪೆನ್ಷನ್‌ ಜೋಡಿಸಲಾಗಿದೆ.

ಇದನ್ನೂ ಓದಿ: ಜಾವಾ ಯೆಜ್ಡಿ ಬೈಕ್ ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ

ಇದರೊಂದಿಗೆ ಹೊಸ ಬೈಕಿನಲ್ಲಿ ಕನೆಕ್ವಿಟಿ ಸೌಲಭ್ಯಕ್ಕಾಗಿ 5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ಯೊಂದಿಗೆ ಹೋಂಡಾ ಸ್ಮಾರ್ಟ್ ವಾಯ್ಸ್ ಕಂಟ್ರೋಲ್ ಸಿಸ್ಟಂ ಜೋಡಿಸಲಾಗಿದ್ದು, ಇದು ಎಮರ್ಜೆನ್ಸಿ ಬ್ರೇಕ್ ಸಿಗ್ನಲ್, ಆಟೋಮ್ಯಾಟಿಕ್ ಟರ್ನ್ ಸಿಗ್ನಲ್ ಸೌಲಭ್ಯಗಳನ್ನು ಒಳಗೊಂಡಿದೆ. ಹಾಗೆಯೇ ಟಿಎಫ್ ಟಿ ಡಿಸ್ ಪ್ಲೇ ಮೂಲಕ ಬೈಕ್ ಸವಾರರು ಸ್ಪೀಡೋ ಮೀಟರ್, ಟ್ಯಾಕೋಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್, ಫ್ಯೂಯಲ್ ಗೇಜ್ ಸೇರಿದಂತೆ ಇತರೆ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಹೊಸ ಬೈಕ್ ಮಾದರಿಯಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇದರಲ್ಲಿ ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನಲ್ ಎಬಿಎಸ್ ನೊಂದಿಗೆ ಮುಂಭಾಗದ ಚಕ್ರದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯ ಚಕ್ರದಲ್ಲಿ 256 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಜೋಡಿಸಲಾಗಿದೆ. ಈ ಮೂಲಕ ಇದು ಅಡ್ವೆಂಚರ್ ಜೊತೆಗೆ ಸಾಮಾನ್ಯ ರಸ್ತೆಗಳಲ್ಲೂ ಪ್ರಯಾಣಕ್ಕೂ ಅನುಕೂಲಕರವಾಗಿದ್ದು, ಪ್ರೀಮಿಯಂ ಬೈಕ್ ವಿಭಾಗದಲ್ಲಿ ಇದು ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Published On - 9:19 pm, Wed, 1 November 23