Hyundai Creta EV: ಭರ್ಜರಿ ಮೈಲೇಜ್ ನೀಡುವ ಕ್ರೆಟಾ ಇವಿ ಬಿಡುಗಡೆಗೆ ಸಿದ್ದವಾದ ಹ್ಯುಂಡೈ
ಭಾರತದಲ್ಲಿ ವಿವಿಧ ಮಧ್ಯಮ ಕ್ರಮಾಂಕದ ವಿವಿಧ ಕಾರು ಮಾದರಿಗಳ ಮೂಲಕ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ಹ್ಯುಂಡೈ ಇಂಡಿಯಾ ಕಂಪನಿ ಎಲೆಕ್ಟ್ರಿಕ್ ಕಾರು ವಿಭಾಗದಲ್ಲೂ ಸದ್ದು ಮಾಡುವ ನೀರಿಕ್ಷೆಯಲ್ಲಿದೆ. ಕೊನಾ ಎಲೆಕ್ಟ್ರಿಕ್ ನಂತರ ಇದೀಗ ಕ್ರೆಟಾ ಇವಿ ಮಾದರಿಯನ್ನು ಪರಿಚಯಿಸುವ ಸುಳಿವು ನೀಡಿದ್ದು, ಹೊಸ ಇವಿ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ (Electric Cars) ಹೆಚ್ಚುತ್ತಿರುವ ಬೇಡಿಕೆಯಿಂದ ಇತ್ತೀಚೆಗೆ ಹಲವು ಹೊಸ ಇವಿ ಕಾರುಗಳು ಬಿಡುಗಡೆಯಾಗಿವೆ. ಇದಕ್ಕಾಗಿ ಹ್ಯುಂಡೈ ಇಂಡಿಯಾ ಕಂಪನಿ ಸಹ ಬೃಹತ್ ಯೋಜನೆ ರೂಪಿಸಿದ್ದು, ಕ್ರೆಟಾ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸುವ ಸುಳಿವು ನೀಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಕೊನಾ ಎಲೆಕ್ಟ್ರಿಕ್ ಮಾದರಿಯನ್ನು ಕೈಬಿಡಲು ನಿರ್ಧರಿಸಿರುವ ಹ್ಯುಂಡೈ ಕಂಪನಿ ಕ್ರೆಟಾ ಇವಿ ಮೂಲಕ ಪ್ರತಿಸ್ಪರ್ಧಿ ಇವಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.
ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಸದ್ಯ ಟಾಟಾ ನೆಕ್ಸಾನ್ ಇವಿ, ಮಹೀಂದ್ರಾ ಎಕ್ಸ್ ಯುವಿ400, ಎಂಜಿ ಜೆಡ್ಎಸ್ ಇವಿ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಹ್ಯುಂಡೈ ಕೂಡಾ ಕ್ರೆಟಾ ಇವಿ ಮೂಲಕ ಇವಿ ಕಾರು ಖರೀದಿದಾರರನ್ನು ಸೆಳೆಯುವ ಸಿದ್ದತೆಯಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿರುವ ಕ್ರೆಟಾ ಕಾರು ಐಷಾರಾಮಿ ಫೀಚರ್ಸ್ ಗಳೊಂದಿಗೆ ಮಾರಾಟವಾಗುತ್ತಿದ್ದು, ಕ್ರೆಟಾ ಎಲೆಕ್ಟ್ರಿಕ್ ವರ್ಷನ್ ಕೂಡಾ ಅತ್ಯುತ್ತಮ ಫೀಚರ್ಸ್ ಗಳನ್ನು ಪಡೆದುಕೊಳ್ಳಲಿದೆ.
ಇದನ್ನೂ ಓದಿ: ಭಾರತದಲ್ಲಿ ಜನಪ್ರಿಯವಾಗಿರುವ ಟಾಪ್ 5 ಕಳಪೆ ಕಾರುಗಳಿವು!
ಹೊಸ ಕ್ರೆಟಾ ಇವಿ ಆವೃತ್ತಿಗಾಗಿ ಹ್ಯುಂಡೈ ಇಂಡಿಯಾ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ನಿರ್ಮಿಸುತ್ತಿದೆ. ಹೊಸ ಇವಿ ಕಾರು ಸಾಮಾನ್ಯ ಕ್ರೆಟಾ ಹೋಲಿಕೆ ಪಡೆದುಕೊಂಡಿದ್ದರೂ ಫೀಚರ್ಸ್ ಗಳಲ್ಲಿ ಸಾಕಷ್ಟು ಬದಲಾವಣೆ ಪಡೆದುಕೊಳ್ಳಲಿದೆ. ಹೊಸ ಕಾರು 4330 ಎಂಎಂ ಉದ್ದಳತೆಯೊಂದಿಗೆ ಅತ್ಯುತ್ತಮ ಒಳಾಂಗಣ ಸೌಲಭ್ಯ ಹೊಂದಿರಲಿದ್ದು, ಇದರಲ್ಲಿ 50 ಕೆವಿಹೆಚ್ ಬ್ಯಾಟರಿ ಪ್ಯಾಕ್ ನೀಡಬಹುದಾಗಿದ್ದು, ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.
ಕ್ರೆಟಾ ಇವಿಯಲ್ಲಿರುವ 50 ಕೆವಿಹೆಚ್ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್ ಗೆ 450 ರಿಂದ 500 ಕಿ.ಮೀ ಮೈಲೇಜ್ ನೀಡಬಹುದಾಗಿದೆ. ಜೊತೆಗೆ ಹೊಸ ಇವಿ ಕಾರು ಪರ್ಫಾಮೆನ್ಸ್ ನಲ್ಲೂ ಗಮನ ಸೆಳೆಯಲಿದ್ದು, ಇದು 138 ಹಾರ್ಸ್ ಪವರ್ ಮತ್ತು 255 ಎನ್ಎಂ ಟಾರ್ಕ್ ಉತ್ಪಾದಿಸಬಹುದಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಹಲವಾರು ಐಷಾರಾಮಿ ಫೀಚರ್ಸ್ ಗಳಿರಲಿದ್ದು, ಇವು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸಲಿವೆ.
ಇದನ್ನೂ ಓದಿ: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ
ಇನ್ನು ಹೊಸ ಕ್ರೆಟಾ ಇವಿ ಕಾರಿನಲ್ಲಿ ಐಯಾನಿಕ್ 5 ಮಾದರಿಯಿಂದ ಎರವಲು ಪಡೆಯಲಾದ ಕೆಲವು ಫೀಚರ್ಸ್ ಗಳನ್ನು ಸಹ ನೀಡಬಹುದಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಎಡಿಎಎಸ್ ಸೇರಿದಂತೆ 360 ಡಿಗ್ರಿ ಕ್ಯಾಮೆರಾ, 6 ಏರ್ ಬ್ಯಾಗ್ ಗಳು, ಪನೊರಮಿಕ್ ಸನ್ ರೂಫ್, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಸೀಟು ಮತ್ತು ಕ್ಲೈಮೆಟ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಬಹುದಾಗಿದೆ. ಈ ಮೂಲಕ ಇದು ರೂ. 18 ಲಕ್ಷದಿಂದ ರೂ. 25 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಮುಂಬರುವ 2025ರ ಆರಂಭದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಬಹುತೇಕ ಖಚಿತವಾಗಿದೆ.