Kia Carens: ಜನಪ್ರಿಯ ಕಿಯಾ ಕಾರೆನ್ಸ್ ಎಂಪಿವಿ ಇದೀಗ ಮತ್ತಷ್ಟು ದುಬಾರಿ
ಕಿಯಾ ಇಂಡಿಯಾ ಕಂಪನಿಯು ತನ್ನ ಹೊಸ ಕಾರೆನ್ಸ್ ಎಂಪಿವಿ ಕಾರು ಮಾದರಿಯ ಬೆಲೆ ಹೆಚ್ಚಿಸಿದ್ದು, ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ.
ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಕಿಯಾ ಇಂಡಿಯಾ ಕಂಪನಿಯು ಕಾರೆನ್ಸ್ ಎಂಪಿವಿಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಕಾರಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಕಿಯಾ ಕಂಪನಿಯು ಬೆಲೆ ಹೆಚ್ಚಳ ಘೋಷಣೆ ಮಾಡಿದ್ದು, ಹೊಸ ದರಪಟ್ಟಿಯಲ್ಲಿ ಕಾರೆನ್ಸ್ ಬೆಲೆಯು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಎಕ್ಸ್ ಶೋರೂಂ ಪ್ರಕಾರ ರೂ. 10 ಸಾವಿರದಿಂದ ರೂ. 50 ಸಾವಿರ ತನಕ ದರ ಹೆಚ್ಚಳವಾಗಿದೆ.
ಹೊಸ ದರ(ಎಕ್ಸ್ ಶೋರೂಂ ಪ್ರಕಾರ)
ಕಿಯಾ ಕಂಪನಿಯು ಬಿಡುಗಡೆ ಮಾಡಿರುವ ಹೊಸ ದರ ಪಟ್ಟಿಯಲ್ಲಿ ಕಾರೆನ್ಸ್ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ವೆರಿಯೆಂಟ್ ಗಳ ಬೆಲೆಯಲ್ಲಿರುವ ರೂ. 10 ಸಾವಿರದಿಂದ ರೂ. 50 ಸಾವಿರ ತನಕ ಬೆಲೆ ಹೆಚ್ಚಳವಾದರೆ ಡೀಸೆಲ್ ವೆರಿಯೆಂಟ್ ಗಳ ಬೆಲೆಯಲ್ಲಿ ರೂ. 30 ಸಾವಿರ ತನಕ ದುಬಾರಿಯಾಗಿರಲಿದೆ.
ಪೆಟ್ರೋಲ್ ವೆರಿಯೆಂಟ್ ಗಳಲ್ಲಿರುವ ಪ್ರೆಸ್ಟೀಜ್ ಮ್ಯಾನುವಲ್ 7 ಸೀಟರ್ ಮತ್ತು ಡೀಸೆಲ್ ಮಾದರಿಯಲ್ಲಿರುವ ಲಗ್ಷುರಿ ಮ್ಯಾನುವಲ್ 7 ಸೀಟರ್ ಮಾದರಿಯು ಹೆಚ್ಚಿನ ಬೆಲೆ ಪಡೆದುಕೊಂಡಿದ್ದು, ಹೊಸ ಕಾರು ಬಿಡುಗಡೆಯ ನಂತರ ಇದು ಎರಡು ಬಾರಿ ಬೆಲೆ ಹೆಚ್ಚಳವಾಗಿದೆ. ಕಳೆದ ಫೆಬ್ರವರಿ ಆರಂಭದಲ್ಲಿ ಬಿಡುಗಡೆಯಾಗಿದ್ದ ಕಾರೆನ್ಸ್ ಕಾರು ಇದುವರೆಗೆ ಸುಮಾರು 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಖರೀದಿಗಾಗಿ ಕನಿಷ್ಠ 10 ತಿಂಗಳಿನಿಂದ ಗರಿಷ್ಠ ಒಂದೂವರೆ ವರ್ಷಗಳ ಕಾಲ ಕಾಯಬೇಕಾಗುತ್ತದೆ.
ಎಂಜಿನ್ ಮತ್ತು ಇಂಧನ ದಕ್ಷತೆ ಹೊಸ ಕಾರೆನ್ಸ್ ಕಾರಿನಲ್ಲಿ ಕಿಯಾ ಕಂಪನಿಯು 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಈ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಮಾದರಿ ಇದಾಗಿದೆ. ಹೊಸ ಕಾರಿನಲ್ಲಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, 1.5 ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 15.7 ಕಿ.ಮೀ ಮೈಲೇಜ್ ನೀಡಿದ್ದಲ್ಲಿ 1.4 ಲೀಟರ್ ಟರ್ಬೊ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 16.2 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 16.5 ಕಿ.ಮೀ ಮೈಲೇಜ್ ನೀಡುತ್ತದೆ.
ಇದರಲ್ಲಿ 1.5 ಲೀಟರ್ ಡೀಸೆಲ್ ಮಾದರಿಯಲ್ಲಿನ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 21.3 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಆಟೋಮ್ಯಾಟಿಕ್ ಮಾದರಿಯು ಪ್ರತಿ ಲೀಟರ್‌ಗೆ 18.3 ಕಿ.ಮೀ ಮೈಲೇಜ್ ನೀಡುತ್ತದೆ. ಇದರೊಂದಿಗೆ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್ ಜೊತೆಗೆ ಸೇಫ್ಟಿ ಫೀಚರ್ಸ್ ನೀಡಲಾಗಿದೆ.
ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳು ಆಕರ್ಷಕವಾದ ಡಿಸೈನ್ ಮತ್ತು ಗುಣಮಟ್ಟದ ಫೀಚರ್ಸ್ ನೊಂದಿಗೆ ಗ್ರಾಹಕರ ಗಮನಸೆಳೆಯುತ್ತಿರುವ ಕಾರೆನ್ಸ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಮತ್ತು ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೋಡಿಸಲಾಗಿದೆ. ಇನ್ನುಳಿದಂತೆ ವಿವಿಧ ವೆರಿಯೆಂಟ್‌ಗಳಿಗೆ ಅನ್ವಯಿಸುವಂತೆ ಎಬಿಎಸ್ ಜೊತೆ ಇಬಿಡಿ, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದ್ದು, ಮಾರುತಿ ಎರ್ಟಿಗಾ, ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.
Published On - 4:48 pm, Fri, 4 November 22