ದಕ್ಷಿಣ ಕೊರಿಯಾದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಕಿಯಾ (Kia) ತನ್ನ ಬಹುನೀರಿಕ್ಷಿತ ಇವಿ3 (EV3) ಎಲೆಕ್ಟ್ರಿಕ್ ಎಸ್ ಯುವಿಯನ್ನು ಅನಾವರಣಗೊಳಿಸಿದ್ದು, ಹೊಸ ಇವಿ ಕಾರು ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಹೊಸ ಇವಿ ಆವೃತ್ತಿಯನ್ನು ಕಿಯಾ ಕಂಪನಿಯು ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಹಂತ-ಹಂತವಾಗಿ ಪರಿಚಯಿಸಲಿದ್ದು, ಇದು ಮೊದಲ ಹಂತವಾಗಿ ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗುತ್ತಿದೆ.
2025ರ ಮಧ್ಯಂತರದ ವೇಳೆಗೆ ಹೊಸ ಕಾರು ಯುರೋಪಿನ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ ಭಾರತದಲ್ಲೂ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 58.3kWh ಮತ್ತು 81.4kWh ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡಲಾಗುತ್ತಿದೆ. ಇದರಲ್ಲಿ 58.3kWh ಬ್ಯಾಟರಿ ಆಯ್ಕೆ ಆವೃತ್ತಿಯನ್ನು ಸ್ಟ್ಯಾಂಡರ್ಡ್ ವೆರಿಯೆಂಟ್ ಆಗಿ ಮತ್ತು 81.4kWh ಬ್ಯಾಟರಿ ಪ್ಯಾಕ್ ಮಾದರಿಯನ್ನು ಲಾಂಗ್ ರೇಂಜ್ ವೆರಿಯೆಂಟ್ ಆಗಿ ಮಾರಾಟಗೊಳಿಸಲು ನಿರ್ಧರಿಸಿದೆ.
ಹೊಸ ಇವಿ3 ಕಾರನ್ನು ಕಿಯಾ ಕಂಪನಿಯು E-GMP ಮಾಡ್ಯೂಲರ್ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣಗೊಳಿಸಿದ್ದು, ಹೊಸ ಇವಿ ಕಾರಿನಲ್ಲಿರುವ ಬ್ಯಾಟರಿ ಆಯ್ಕೆ ಪ್ರತಿ ಚಾರ್ಜ್ ಗೆ ಗರಿಷ್ಠ 600 ಕಿ.ಮೀ ಮೈಲೇಜ್ ನೀಡುಬಹುದೆಂದು ಅಂದಾಜಿಸಲಾಗಿದೆ. ಜೊತೆಗೆ ಹೊಸ ಇವಿ ಕಾರಿನ ಮೂಲಕ ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಪರಿಚಯಿಸುತ್ತಿದ್ದು, ಕಿಯಾ ನಿರ್ಮಾಣದ ಇವಿ9, ಇವಿ6 ಮತ್ತು ಇವಿ5 ಮಾದರಿಗಳಲ್ಲಿರುಂತೆ ಹಲವು ಫೀಚರ್ಸ್ ಗಳು ಹೊಸ ಇವಿ3 ಕಾರಿನಲ್ಲಿವೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
400V ಆರ್ಕಿಟೆಕ್ಚರ್ ಹೊಂದಿರುವ ಹೊಸ ಕಾರು ಪುನರುತ್ಪಾದಕ ಬ್ರೇಕಿಂಗ್‌ಗಾಗಿ ಪ್ಯಾಡಲ್ ಶಿಫ್ಟರ್ ಹೊಂದಿದ್ದು, ಮಾರ್ಗ ಮಧ್ಯಗಳಲ್ಲಿ ಚಾರ್ಜಿಂಗ್ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ವೆಹಿಕಲ್ ಟು ವೆಹಿಕಲ್ (V2L) ತಂತ್ರಜ್ಞಾನದ ಮೂಲಕ ಚಾರ್ಜಿಂಗ್ ಸೌಲಭ್ಯವನ್ನು ಎರವಲು ಪಡೆಯಬಹುದಾಗಿದೆ. ಇದರೊಂದಿಗೆ ಹೊಸ ಕಾರು ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಶೇ. 10 ರಿಂದ 80 ಚಾರ್ಜ್ ಆಗಲು ಕೇವಲ 31 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!
ಇನ್ನು ಹೊಸ ಇವಿ3 ಕಾರು ಸಾಕಷ್ಟು ಫ್ಯೂಚರಿಸ್ಟಿಕ್ ಆಗಿದ್ದು, ಸ್ಪೋರ್ಟಿ ಫೀಚರ್ಸ್ ಗಳು ಗಮನಸೆಳೆಯುತ್ತವೆ. ಹಾಗೆಯೇ ಹೊಸ ಕಾರಿನಲ್ಲಿ ಒಳಭಾಗವು ಕೂಡಾ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಹಲವು ಫೀಚರ್ಸ್ ಗಳಿದ್ದು, ಇದು AI ತಂತ್ರಜ್ಞಾನ ಒಳಗೊಂಡಿರುವ ಮೊದಲ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಇದಲ್ಲದೆ ಹೊಸ ಕಾರು ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಹಲವು ಸುರಕ್ಷಾ ಫೀಚರ್ಸ್ ಗಳನ್ನು ಸಹ ಪಡೆದುಕೊಂಡಿದ್ದು, ಇದು ಭಾರತದಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 35 ಲಕ್ಷದಿಂದ ರೂ. 40 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.
Published On - 6:39 pm, Mon, 27 May 24