ಬಹುನೀರಿಕ್ಷಿತ ಕೈನೆಟಿಕ್ ಇ-ಲೂನಾ (Kinetic e-Luna) ಬಿಡುಗಡೆಗೆ ಸಿದ್ದವಾಗಿರುವ ಕೈನೆಟಿಕ್ ಗ್ರೀನ್ (Kinetic Green) ಕಂಪನಿಯು ಹೊಸ ಇವಿ ಮೊಪೆಡ್ ಮಾದರಿಯನ್ನು ಫೆಬ್ರವರಿ 7ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದು, ಹೊಸ ಇವಿ ಮೊಪೆಡ್ ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರಲಿದೆ.
ಹೊಸ ಕೈನೆಟಿಕ್ ಇ-ಲೂನಾ ಖರೀದಿಗಾಗಿ ಈಗಾಗಲೇ ರೂ. 500 ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿರುವ ಕೈನೆಟಿಕ್ ಗ್ರೀನ್ ಕಂಪನಿ ಫೆಬ್ರವರಿ ಅಂತ್ಯಕ್ಕೆ ಇವಿ ಮೊಪೆಡ್ ವಿತರಿಸುವ ಭರವಸೆ ನೀಡಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಇವಿ ಸ್ಕೂಟರ್ ಗಳಿಂತಲೂ ಕಡಿಮೆ ಬೆಲೆ ಮತ್ತು ಅತ್ಯುತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಹೊಂದಿರಲಿದೆ.
ಇನ್ನೂ ಓದಿ: ಭರ್ಜರಿ ಫೀಚರ್ಸ್ ಹೊಂದಿರುವ ಎಥರ್ 450 ಅಪೆಕ್ಸ್ ಪ್ರೀಮಿಯಂ ಇವಿ ಸ್ಕೂಟರ್ ಬಿಡುಗಡೆ
ಕೈನೆಟಿಕ್ ಇ-ಲೂನಾ ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಗಳಂತೆ ಗುಣಮಟ್ಟದ ಬಿಡಿಭಾಗಗಳೊಂದಿಗೆ ನಿರ್ಮಾಣಗೊಂಡಿದ್ದು, ಇದು ದಿನನಿತ್ಯದ ಸಂಚಾರ ಅನುಕೂಲಕರವಾಗುವ ಹಲವಾರು ಫೀಚರ್ಸ್ ಹೊಂದಿರಲಿದೆ. ಹೊಸ ಇವಿ ಮೊಪೆಡ್ ನಲ್ಲಿ ಗಂಟೆಗೆ 50 ಕಿಮೀ ಟಾಪ್ ಸ್ಪೀಡ್ ಹೊಂದಿರುವ ಎಲೆಕ್ಟ್ರಿಕ್ ಮೋಟಾರ್ ಜೋಡಿಸಲಾಗಿದ್ದು, ಪ್ರತಿ ಚಾರ್ಜ್ ಗೆ ಗರಿಷ್ಠ 110 ಕಿ.ಮೀ ಮೈಲೇಜ್ ನೀಡಬಹುದಾದ ಬ್ಯಾಟರಿ ಪ್ಯಾಕ್ ನೀಡಲಾಗಿದೆ.
ಫೇಮ್ 2 ಯೋಜನೆಯಡಿಯಲ್ಲಿ ಕೈನೆಟಿಕ್ ಇ-ಲೂನಾ ಖರೀದಿಗೆ ರಿಯಾಯಿತಿ ಸಹ ಸಿಗಲಿದ್ದು, ಇದು ಸುಮಾರು ರೂ. 70 ಸಾವಿರದಿಂದ ರೂ. 85 ಸಾವಿರ ತನಕ ಬೆಲೆ ಪಡೆಯಬಹುದಾಗಿದೆ. ಈ ಮೂಲಕ ಇದು ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್ ಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಪೆಟ್ರೋಲ್ ಸ್ಕೂಟರ್ ಗಳಿಗೆ ಇದು ಉತ್ತಮ ಪೈಪೋಟಿ ನೀಡಲಿದೆ.
ಇನ್ನೂ ಓದಿ: ಹೀರೋ ವಿಡಾ ವಿ1 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಭರ್ಜರಿ ಆಫರ್
ಕೈನೆಟಿಕ್ ಗ್ರೀನ್ ಕಂಪನಿಯು ಹೊಸ ಕೈನೆಟಿಕ್ ಇ-ಲೂನಾವನ್ನು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿರುವ ತನ್ನ ಹೊಸ ಉತ್ಪಾದನಾ ಸ್ಥಾವರದಲ್ಲಿ ತಯಾರಿಸುತ್ತಿದ್ದು, ಈ ಸ್ಥಾವರದಲ್ಲಿ ಪ್ರತಿ ತಿಂಗಳು ಸುಮಾರು 5 ಸಾವಿರ ಇ-ಲೂನಾವನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ. ಹೀಗಾಗಿ ಹೊಸ ಇವಿ ಸ್ಕೂಟರ್ ಭಾರೀ ಪ್ರಮಾಣದಲ್ಲಿ ಮಾರಾಟವಾಗುವ ನೀರಿಕ್ಷೆಗಳಿದ್ದು, 90ರ ದಶಕದಲ್ಲಿ ತನ್ನ ಬೇಡಿಕೆಯನ್ನು ಮರಳಿ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.