ಕೈನೆಟಿಕ್ ಗ್ರೀನ್ (Kinetic Green) ಕಂಪನಿಯು ತನ್ನ ಹೊಚ್ಚ ಹೊಸ ಇ-ಲೂನಾ (E-Luna) ಮೊಪೆಡ್ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಮೊಪೆಡ್ ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಾಗಿದೆ. ಹೊಸ ಇವಿ ಮೊಪೆಡ್ ನಲ್ಲಿರುವ ಎಕ್ಸ್1 ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 69,,990 ಬೆಲೆ ಹೊಂದಿದ್ದರೆ ಎಕ್ಸ್2 ವೆರಿಯೆಂಟ್ ರೂ. 74,990 ಬೆಲೆ ಹೊಂದಿದೆ.
ಹೊಸ ಇ-ಲೂನಾದಲ್ಲಿ ಕೈನೆಟಿಕ್ ಗ್ರೀನ್ ಕಂಪನಿಯು 2ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೊತೆಗೆ 1.2 ಕೆವಿ ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದು ಪೂರ್ತಿ ಚಾರ್ಜ್ ನೊಂದಿಗೆ ಗರಿಷ್ಠ 110 ಕಿ.ಮೀ ಮೈಲೇಜ್ ನೀಡಲಿದೆ. ಇದರಲ್ಲಿ ಬ್ಯಾಟರಿ ರೇಂಜ್ ಹೆಚ್ಚಿಸುವುದಕ್ಕಾಗಿ ಹೊಸ ಇವಿ ಮೊಪೆಡ್ ವೇಗವನ್ನು ಪ್ರತಿ ಗಂಟೆಗೆ 50 ಕಿ.ಮೀ ಗರಿಷ್ಠ ವೇಗವನ್ನು ಮಿತಿಗೊಳಿಸಲಾಗಿದ್ದು, ಇದು ದಿನನಿತ್ಯದ ಸಂಚಾರಕ್ಕೆ ಸಾಕಷ್ಟು ಅನುಕೂಲಕರವಾಗಿದೆ.
ಇದನ್ನೂ ಓದಿ: ಆಕರ್ಷಕ ಬೆಲೆಯ ಓಲಾ ಎಸ್1 ಎಕ್ಸ್ ಸ್ಕೂಟರ್ ಬಿಡುಗಡೆ
ಇ-ಲೂನಾದಲ್ಲಿ ಬ್ಯಾಟರಿ ಪ್ಯಾಕ್ ಪೂರ್ತಿ ಚಾರ್ಜ್ ಆಗಲು ಗರಿಷ್ಠ ನಾಲ್ಕು ಗಂಟೆ ತೆಗೆದುಕೊಳ್ಳಲಿದ್ದು, ಹತ್ತಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಇವಿ ಮೊಪೆಡ್ ನಲ್ಲಿ ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್ ಜೊತೆಗೆ 16 ಇಂಚಿನ ವ್ಹೀಲ್ ಗಳನ್ನು ಜೋಡಿಸಲಾಗಿದ್ದು, ಸುರಕ್ಷತೆಗಾಗಿ ಸೈಡ್ ಸ್ಟ್ಯಾಂಡ್ ಸೆನ್ಸಾರ್, ಸ್ಯಾರಿ ಗಾರ್ಡ್, ಸೇಫ್ಟಿ ಲಾಕ್, ಫ್ರಂಟ್ ಲೆಗ್ ಗಾರ್ಡ್, ಬ್ಯಾಗ್ ಹುಕ್ ಮತ್ತು ಕಾಂಬಿ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ.
ಪ್ರೀಮಿಯಂ ಮಾದರಿಗಾಗಿ ಕೈನೆಟಿಕ್ ಗ್ರೀನ್ ಕಂಪನಿಯು ಪ್ರಮುಖ ಮೂರು ರೈಡಿಂಗ್ ಮೋಡ್ ಗಳೊಂದಿಗೆ ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಸೌಲಭ್ಯಗಳನ್ನು ನೀಡಲಾಗಿದ್ದು, ಇದು ಒಟ್ಟಾರೆಯಾಗಿ 96 ಕೆಜಿ ತೂಕ ಹೊಂದಿದೆ. ಈ ಮೂಲಕ ಇದು ಹಲವಾರು ಪ್ರಾಯೋಗಿಕ ಅಂಶಗಳೊಂದಿಗೆ ನಿರ್ಮಾಣಗೊಂಡಿದ್ದು, ಅಗತ್ಯಗಳಿಗೆ ಅನುಗುಣವಾಗಿ ಹಿಂಬದಿಯ ಆಸನವನ್ನು ತೆಗೆದುಹಾಕುವ ಮೂಲಕ ಲಗೇಜ್ ಸಾಗಾಣಿಕೆಗೂ ಬಳಕೆ ಮಾಡಬಹುದು.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಹೆಚ್ಚಳಕ್ಕಾಗಿ ಕೇಂದ್ರದಿಂದ ಮಹತ್ವದ ಯೋಜನೆ
ಹೊಸ ಇ-ಲೂನಾ ಮೊಪೆಡ್ ನಲ್ಲಿ ಮಾಲೀಕರು ಕೇವಲ 10 ಪೈಸೆಯಲ್ಲಿ ಪ್ರತಿ ಕಿಲೋಮೀಟರ್ ಕ್ರಮಿಸಬಹುದು ಎನ್ನುವ ಭರವಸೆ ನೀಡಿದ್ದು, ಈ ಮೂಲಕ ಇದು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಇದಕ್ಕಾಗಿ ಕೈನೆಟಿಕ್ ಗ್ರೀನ್ ಕಂಪನಿಯು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿರುವ ತನ್ನ ಹೊಸ ಉತ್ಪಾದನಾ ಸ್ಥಾವರದಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದು, ಪ್ರತಿ ತಿಂಗಳು ಸುಮಾರು 5 ಸಾವಿರ ಇ-ಲೂನಾವನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ.
ಇನ್ನು ಇ-ಲೂನಾ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್ ಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಆಸಕ್ತ ಗ್ರಾಹಕರು ರೂ. 500 ಮುಂಗಡದೊಂದಿಗೆ ಬುಕಿಂಗ್ ಮಾಡಬಹುದಾಗಿದೆ.
Published On - 10:12 pm, Wed, 7 February 24