AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tesla: ಚೀನಾದಲ್ಲಿ ತಯಾರಿಸಿದ್ದೆಂದು ಮೂಗು ಮುರಿಯುವ ಕೊರಿಯನ್ನರು; ಜನವರಿಯಲ್ಲಿ ಒಂದೇ ಟೆಸ್ಲಾ ಕಾರು ಮಾರಾಟ

Tesla Sold Just 1 Car In South Korea: ಟೆಸ್ಲಾದ ಓಡುವ ಕುದುರೆ ಎನ್ನಲಾದ ಮಾಡೆಲ್ ವೈ ಕಾರು ದಕ್ಷಿಣ ಕೊರಿಯಾದಲ್ಲಿ 2024ರ ಜನವರಿ ತಿಂಗಳಲ್ಲಿ ಒಂದೇ ಒಂದು ಮಾರಾಟವಾಗಿದೆ. 2022ರ ಜೂನ್ ತಿಂಗಳಲ್ಲಿ ಟೆಸ್ಲಾದ ಒಂದೂ ಕಾರು ಕೊರಿಯಾದಲ್ಲಿ ಮಾರಾಟವಾಗಿರಲಿಲ್ಲ. ಮೇಡ್ ಇನ್ ಚೀನಾ ಎನ್ನುವುದು, ಬಡ್ಡಿದರ ಹೆಚ್ಚಿರುವುದು ಇತ್ಯಾದಿ ಕಾರಣಕ್ಕೆ ಟೆಸ್ಲಾ ಕಾರು ಮಾರಾಟವಾಗಿಲ್ಲದಿರಬಹುದು.

Tesla: ಚೀನಾದಲ್ಲಿ ತಯಾರಿಸಿದ್ದೆಂದು ಮೂಗು ಮುರಿಯುವ ಕೊರಿಯನ್ನರು; ಜನವರಿಯಲ್ಲಿ ಒಂದೇ ಟೆಸ್ಲಾ ಕಾರು ಮಾರಾಟ
ಟೆಸ್ಲಾ ಕಾರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2024 | 4:05 PM

Share

ಸೋಲ್, ಫೆಬ್ರುವರಿ 7: ವಿಶ್ವದ ನಂಬರ್ ಒನ್ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ (Tesla) ದಕ್ಷಿಣ ಕೊರಿಯಾ ದೇಶದಲ್ಲಿ ಮಾರುಕಟ್ಟೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಜನವರಿಯ ಇಡೀ ಒಂದು ತಿಂಗಳಲ್ಲಿ ಟೆಸ್ಲಾ ಒಂದೇ ಒಂದು ಕಾರು ಮಾರಾಟ ಮಾಡಿದೆ. ತಂತ್ರಜ್ಞಾನದಲ್ಲಿ ಬಹಳ ಮುಂದಿರುವ ಕೊರಿಯಾದಲ್ಲಿ ಇವಿ (EV- electric vehicle) ಮಾರಲು ಟೆಸ್ಲಾ ಹರಸಾಹಸ ಮಾಡಬೇಕಾಗಿದೆ. ಒಂದು ತಿಂಗಳಲ್ಲಿ ಒಂದು ಕಾರ್ ಮಾತ್ರ ಮಾರಾಟವಾಗುವುದೆಂದರೆ ದಾರುಣ ಪರಿಸ್ಥಿತಿಯೇ. 2022ರಲ್ಲಿ ಜುಲೈ ತಿಂಗಳಲ್ಲಿ ಟೆಸ್ಲಾದ ಒಂದೂ ಕಾರು ಸೇಲ್ ಆಗಿರಲಿಲ್ಲ. ಅದಾದ ಬಳಿಕ ಟೆಸ್ಲಾಗೆ ಆಗಿರುವ ಅತ್ಯಂತ ನಿರಾಸೆ ಎಂದರೆ ಈ ವರ್ಷದ ಜನವರಿಯದ್ದು. ಆದರೆ, ದಕ್ಷಿಣ ಕೊರಿಯಾದಲ್ಲಿ ಟೆಸ್ಲಾ ಮಾತ್ರವಲ್ಲ, ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳೂ ಡಿಮ್ಯಾಂಡ್ ಕಳೆದುಕೊಂಡಿವೆ. ಡಿಸೆಂಬರ್​ಗೆ ಹೋಲಿಸಿದರೆ ಜನವರಿಯಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳ ಬುಕಿಂಗ್ ಶೇ. 80ರಷ್ಟು ಕಡಿಮೆ ಆಗಿದೆ. ಇದಕ್ಕೆ ಕಾರಣಗಳೂ ಹಲವುಂಟು.

ಕೊರಿಯನ್ನರು ಎಲೆಕ್ಟ್ರಿಕ್ ವಾಹನ ಒಲ್ಲೆ ಎನ್ನಲು ಇವು ಕಾರಣಗಳು…

  • ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಿರುವುದು
  • ಬಹಳಷ್ಟು ಜನರು ಇವಿಗಳನ್ನು ಈ ಮುಂಚೆಯೇ ಖರೀದಿಸಿರುವುದು
  • ಬಡ್ಡಿದರ ಹೆಚ್ಚಿರುವುದು
  • ಹಣದುಬ್ಬರ ಹೆಚ್ಚಿರುವುದು
  • ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಕೆಯಾಗುವ ಬ್ಯಾಟರಿಗಳಿಂದ ಆದ ಬೆಂಕಿ ಅನಾಹುತಗಳು
  • ಫಾಸ್ಟ್ ಚಾರ್ಜಿಂಗ್ ಉಪಕರಣಗಳ ಕೊರತೆ
  • ಸರ್ಕಾರ ಸಬ್ಸಿಡಿ ಘೋಷಣೆ ಮಾಡುವವರೆಗೂ ಜನರು ಕಾಯುತ್ತಿರುವುದು.

ಇದನ್ನೂ ಓದಿ: ಕೇವಲ 15,000 ರೂ ಸಂಬಳ ಪಡೆಯುವ ಸಿಇಒ; ಜೀವನ ಹೇಗೆ ನಡೆಸ್ತಾರೆ ಕುನಾಲ್? ಎಂಥವರನ್ನೂ ಕರಗಿಸೀತು ಇವರ ಜೀವನ ಕಥೆ

ದಕ್ಷಿಣ ಕೊರಿಯಾದ ಸರ್ಕಾರ ಈ ಫೆಬ್ರುವರಿ ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಜನವರಿಯಲ್ಲಿ ಅಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ಆಗಿಲ್ಲದಿರಬಹುದು.

ಆದರೆ, ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾದ ಮಾಡೆಲ್ ವೈ ಎಲೆಕ್ಟ್ರಿಕ್ ಕಾರು 2023ರಲ್ಲಿ ಟಾಪ್ ಸೆಲ್ಲರ್ ಎನಿಸಿತ್ತು. ಆ ಕಾರು ಕೊರಿಯಾದಲ್ಲಿ ಮಾರಾಟ ಕಾಣದೇ ಹೋಗಿದ್ದು ಅಚ್ಚರಿ ಮೂಡಿಸಿದೆ.

ಮೇಡ್ ಇನ್ ಚೀನಾ ಎಂದು ಮೂಗು ಮುರಿಯುವ ಕೊರಿಯನ್ನರು…

ಟೆಸ್ಲಾದ ಮಾಡೆಲ್ ವೈ ಕಾರು ಚೀನಾದಲ್ಲಿ ತಯಾರಾಗುತ್ತದೆ. ಕೊರಿಯಾದ ಹಲವು ಜನರಿಗೆ ಮೇಡ್ ಇನ್ ಚೀನಾದ ಉತ್ಪನ್ನವೆಂದರೆ ಅಷ್ಟಕಷ್ಟೇ. ಗುಣಮಟ್ಟ ಕಳಪೆಯಾಗಿರುತ್ತದೆಂಬ ಭಾವನೆ ಅಲ್ಲಿನ ಜನರಲ್ಲಿದೆ. ಟೆಸ್ಲಾ ಮೇಡ್ ಇನ್ ಚೀನಾ ಎಂದಾದ್ದರಿಂದ ಅದರ ಬಗ್ಗೆ ಅವರ ಆಸಕ್ತಿ ಕಡಿಮೆಯೇ ಆಗಿದೆ.

ಇದನ್ನೂ ಓದಿ: ಸತ್ಯ ನಾದೆಲ್ಲಾ ಸಿಇಒ ಆದ 10 ವರ್ಷದಲ್ಲಿ 11 ಪಟ್ಟು ಬೆಳೆದಿರುವ ಮೈಕ್ರೋಸಾಫ್ಟ್ ಷೇರು; ಭಾರತಕ್ಕೆ ಎಐ ನೆರವು ನೀಡಲು ಸಿಇಒ ಅಪೇಕ್ಷೆ

2022ರಲ್ಲಿ ದಕ್ಷಿಣ ಕೊರಿಯಾದಲ್ಲಿ ಸ್ಥಳೀಯ ಕಂಪನಿಗಳ ಕಾರುಗಳೇ ಹೆಚ್ಚಾಗಿ ಮಾರಾಟವಾಗಿರುವುದು. ಹ್ಯೂಂಡಾಯ್, ಕಿಯಾದ ಕಾರುಗಳು ಇವಿ ಮಾರುಕಟ್ಟೆಯಲ್ಲಿ ಅಧಿಕವಾಗಿ ಆಕ್ರಮಿಸಿವೆ. ಟೆಸ್ಲಾದ ಮಾಡೆಲ್ ವೈ ಮತ್ತು ಮಾಡೆಲ್ 3 ಕಾರುಗಳು ಒಟ್ಟು 14-15 ಸಾವಿರ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಟೆಸ್ಲಾದ ಮಾಡೆಲ್ ವೈ ಕಾರು ದಕ್ಷಿಣ ಕೊರಿಯಾ ದೇಶದಲ್ಲಿ 5.7 ಕೋಟಿ ವೋನ್ ಮಾರಾಟ ದರ ಹೊಂದಿದೆ. ಅಂದರೆ ಭಾರತೀಯ ರುಪಾಯಿಯಲ್ಲಿ ಅದು 35 ಲಕ್ಷ ರುಪಾಯಿಗೆ ಅಲ್ಲಿ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ