Maruti Brezza CNG: ಭರ್ಜರಿ ಮೈಲೇಜ್ ನೀಡುವ ಮಾರುತಿ ಸುಜುಕಿ ಬ್ರೆಝಾ ಸಿಎನ್ ಜಿ ಬಿಡುಗಡೆ

|

Updated on: Mar 17, 2023 | 9:00 PM

ಮಾರುತಿ ಸುಜುಕಿ ಕಂಪನಿಯು ತನ್ನ ಬಹುನೀರಿಕ್ಷಿತ ಬ್ರೆಝಾ ಸಿಎನ್ ಜಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ಭರ್ಜರಿ ನೀಡಲಿದೆ.

ಭಾರತದಲ್ಲಿ ಸಿಎನ್ ಜಿ ಕಾರುಗಳ(CNG Cars) ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಾರುತಿ ಸುಜುಕಿ(Maruti Suzuki) ಕಂಪನಿ ತನ್ನ ಬಹುನೀರಿಕ್ಷಿತ ಬ್ರೆಝಾ ಸಿಎನ್ ಜಿ(Brezza CNG) ವರ್ಷನ್ ಬಿಡುಗಡೆ ಮಾಡಿದೆ. ಹೊಸ ಸಿಎನ್ ಜಿ ಕಾರು ಮಾದರಿಯು ಎಸ್ ಯುವಿ ವಿಭಾಗದಲ್ಲಿ ಬಿಡುಗಡೆಯಾದ ಮೊದಲ ಕಾರು ಮಾದರಿಯಾಗಿದ್ದು, ಹೊಸ ಕಾರು ಕೂಡಾ ಉತ್ತಮ ಮೈಲೇಜ್ ನೀಡಲಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಭಾರತದಲ್ಲಿ ಸಿಎನ್ ಜಿ ಕಾರುಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಾರುತಿ ಸುಜುಕಿ ಕಂಪನಿಯು ವಿವಿಧ ಮಾದರಿಗಳೊಂದಿಗೆ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದೆ. ಮಾರುತಿ ಸುಜುಕಿ ಕಂಪನಿಯು ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಸಿಎನ್ ಜಿ ಆವೃತ್ತಿಗಳನ್ನ ಪರಿಚಯಿಸಿದ್ದು, ಇದೀಗ ಬ್ರೆಝಾ ಮಾದರಿಯಲ್ಲೂ ಸಿಎನ್ ಜಿ ಪರಿಚಯಿಸಿದೆ.

ವೆರಿಯೆಂಟ್ ಮತ್ತು ಬೆಲೆ

ಹೊಸ ಬ್ರೆಝಾ ಸಿಎನ್ ಜಿ ಮಾದರಿಯು ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎನ್ನುವ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9.14 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಹೆಚ್ಚಿನ ತಾಂತ್ರಿಕ ಸೌಲಭ್ಯಗಳನ್ನ ಹೊಂದಿರುವ ಟಾಪ್ ಎಂಡ್ ಮಾದರಿಯು ರೂ. 11.90 ಲಕ್ಷ ಬೆಲೆ ಪಡೆದುಕೊಂಡಿದೆ. ಇದರಲ್ಲಿ ಡ್ಯುಯಲ್ ಟೋನ್ ಆವೃತ್ತಿಯು ತುಸು ದುಬಾರಿಯಾಗಿರಲಿದ್ದು, ಡ್ಯುಯಲ್ ಟೋನ್ ಖರೀದಿಸುವ ಗ್ರಾಹಕರು ಹೆಚ್ಚುವರಿಯಾಗಿ ರೂ. 16 ಸಾವಿರ ಪಾವತಿಸಬೇಕಾಗುತ್ತದೆ.

ಪರ್ಫಾಮೆನ್ಸ್ ಮತ್ತು ಮೈಲೇಜ್

ಬ್ರೆಝಾ ಸಿಎನ್ ಜಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ವೆರಿಯೆಂಟ್ ಹೊಂದಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ರೂ. 95 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದೆ. ಆದರೆ ಹೊಸ ಕಾರು ಭರ್ಜರಿ ಮೈಲೇಜ್ ನೊಂದಿಗೆ ಗಮನಸೆಳೆಯಲಿದ್ದು, 1.5 ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ನೊಂದಿಗೆ ಸಿಎನ್ ಜಿ ಕಿಟ್ ಹೊಂದಿದೆ. ಇದು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 88 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಈ ಮೂಲಕ ಹೊಸ ಕಾರು ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 25.51 ಕಿ.ಮೀ ಮೈಲೇಜ್ ನೀಡುತ್ತದೆ.

ಹೊಸ ವೈಶಿಷ್ಟ್ಯತೆಗಳು

ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಸಿಎನ್ ಜಿ ಕಿಟ್ ಹೊರತುಪಡಿಸಿ ಯಾವುದೇ ಗುರುತರ ಬದಲಾವಣೆಗಳನ್ನ ಪರಿಚಯಿಸಿಲ್ಲ. ಸಾಮಾನ್ಯ ಪೆಟ್ರೋಲ್ ಮಾದರಿಯಲ್ಲಿರುವಂತೆಯೇ ಬಹುತೇಕ ತಾಂತ್ರಿಕ ಸೌಲಭ್ಯಗಳಿದ್ದು, ಸುರಕ್ಷತೆಯಲ್ಲೂ ಇದು ಗಮನಸೆಳೆಯಲಿದೆ. ಹೊಸ ಬ್ರೆಝಾ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಇದೀಗ 6 ಏರ್ ಬ್ಯಾಗ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡುತ್ತಿದ್ದು, ಇಂಟಿರಿಯರ್ ಫೀಚರ್ಸ್ ಕೂಡಾ ಗಮನಸೆಳೆಯಲಿವೆ.

Published On - 5:30 pm, Fri, 17 March 23