ಹೊಸ ವರ್ಷಕ್ಕೆ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ಕೊಟ್ಟ ಮಾರುತಿ ಸುಜುಕಿ

| Updated By: Praveen Sannamani

Updated on: Nov 28, 2023 | 5:37 PM

ಹೊಸ ವರ್ಷದ ಸಂಭ್ರಮದಲ್ಲಿ ಕಾರುಗಳ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಬೆಲೆ ಏರಿಕೆಯ ಶಾಕ್ ನೀಡಿದ್ದು, ವರ್ಷದ ಆರಂಭದಲ್ಲಿಯೇ ಹೊಸ ಕಾರುಗಳ ಬೆಲೆ ಹೆಚ್ಚಿಸುವ ಸುಳಿವು ನೀಡಿವೆ.

ಹೊಸ ವರ್ಷಕ್ಕೆ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ಕೊಟ್ಟ ಮಾರುತಿ ಸುಜುಕಿ
ಮಾರುತಿ ಸುಜುಕಿ ಕಾರುಗಳು
Follow us on

ನಿರ್ವಹಣಾ ವೆಚ್ಚಗಳು ಮತ್ತು ಉತ್ಪಾದನಾ ಬಿಡಿಭಾಗಗಳ ಬೆಲೆ ಏರಿಕೆಯ ಪರಿಣಾಮ ಮಾರುತಿ ಸುಜುಕಿ (Maruti Suzuki) ಸೇರಿದಂತೆ ವಿವಿಧ ಕಾರು ಕಂಪನಿಗಳು ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮುಂಬರುವ ಜನವರಿ 1ರಿಂದಲೇ ಅನ್ವಯಿಸುವಂತೆ ಹೊಸ ದರಪಟ್ಟಿ ಸಿದ್ದಪಡಿಸಿವೆ. ಈ ಮೊದಲ ಆರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದ ವಾಹನ ಉತ್ಪಾದನಾ ಕಂಪನಿಯು ಕೋವಿಡ್ ನಂತರ ವಾಹನಗಳ ಬೆಲೆಯನ್ನು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಹೆಚ್ಚಳ ಮಾಡುತ್ತಿದ್ದು, ನಿರಂತರ ಬೆಲೆ ಹೆಚ್ಚಳದಿಂದ ಕಾರುಗಳ ಖರೀದಿ ಸಾಕಷ್ಟು ದುಬಾರಿಯಾಗುತ್ತಿದೆ.

ನಿರಂತರ ಬೆಲೆ ಹೆಚ್ಚಳದಿಂದಾಗಿ ಕಳೆದ ಎರಡು ವರ್ಷಗಳ ಅಂತರದಲ್ಲಿ ರೂ. 5 ಲಕ್ಷದಿಂದ ರೂ. 10 ಲಕ್ಷ ಬೆಲೆ ಅಂತರದ ಕಾರುಗಳಲ್ಲಿ ರೂ. 70 ಸಾವಿರದಿಂದ ರೂ. 1 ಲಕ್ಷದಿಂದದಷ್ಟು ದುಬಾರಿಯಾಗಿದ್ದರೆ ರೂ. 11 ಲಕ್ಷದಿಂದ ರೂ. 20 ಲಕ್ಷ ಬೆಲೆಯ ಕಾರುಗಳಲ್ಲಿ ರೂ. 1 ಲಕ್ಷದಿಂದ ರೂ. 1.50 ಲಕ್ಷದಷ್ಟು ಬೆಲೆ ಹೆಚ್ಚಳವಾಗಿದೆ. ಹಾಗೆಯೇ ರೂ. 20 ಲಕ್ಷದಿಂದ ರೂ. 1 ಕೋಟಿ ಬೆಲೆಯ ಕಾರುಗಳಲ್ಲಿ ರೂ. 2 ಲಕ್ಷದಿಂದ ರೂ. 5 ಲಕ್ಷದ ತನಕ ಬೆಲೆ ಹೆಚ್ಚಳವಾಗಿವೆ.

ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?

ಬಜೆಟ್ ಕಾರುಗಳ ಮೂಲಕ ಉತ್ತಮ ಬೇಡಿಕೆ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ಸಹ ಜನವರಿ 1ರಿಂದಲೇ ವಿವಿಧ ಕಾರು ಮಾದರಿಗಳ ಬೆಲೆಗೆ ಅನುಗುಣವಾಗಿ ಶೇ. 0.8ರಿಂದ ಶೇ. 1.50 ರಷ್ಟು ಬೆಲೆ ಹೆಚ್ಚಿಸುವ ಸುಳಿವು ನೀಡಿದ್ದು, ಹೊಸ ವರ್ಷದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಮತ್ತಷ್ಟು ಹೊರೆಯಾಗಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಅರೆನಾ ಮತ್ತು ನೆಕ್ಸಾ ಪ್ಲ್ಯಾಟ್ ಫಾರ್ಮ್ ಮೂಲಕ 15ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಬಜೆಟ್ ಕಾರುಗಳ ಜೊತೆಗೆ ಪ್ರೀಮಿಯಂ ಕಾರುಗಳಿಂದಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಅರೆನಾ ಪ್ಲ್ಯಾಟ್ ಫಾರ್ಮ್ ಮೂಲಕ ಆಲ್ಟೊ, ಆಲ್ಟೊ ಕೆ10, ವ್ಯಾಗನ್ಆರ್, ಸೆಲೆರಿಯೊ, ಎಸ್-ಪ್ರೆಸ್ಸೊ, ಸ್ವಿಫ್ಟ್, ಇಕೋ, ಡಿಜೈರ್, ಬ್ರೆಝಾ, ಎರ್ಟಿಗಾ ಕಾರುಗಳನ್ನು ಮಾರಾಟ ಮಾಡುತ್ತಿದ್ದರೆ ನೆಕ್ಸಾ ಪ್ಲ್ಯಾಟ್ ಫಾರ್ಮ್ ಮೂಲಕ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್ಎಲ್6, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಫ್ರಾಂಕ್ಸ್ ಮತ್ತು ಇನ್ವಿಕ್ಟೊ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಹೊಸ ಕಾರು ಮಾದರಿಗಳಲ್ಲಿ ಸದ್ಯಕ್ಕೆ ಪೆಟ್ರೋಲ್ ಮತ್ತು ಸಿಎನ್ ಜಿ ವೆರಿಯೆಂಟ್ ಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದು, ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳ ಜಾರಿ ನಂತರ ಡೀಸೆಲ್ ಕಾರುಗಳ ಮಾದರಿಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಹೀಗಾಗಿ ಪರಿಸರ ಸ್ನೇಹಿ ಮಾದರಿಗಳ ಮಾತ್ರ ಗಮನಹರಿಸಿರುವ ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!

2024ರಲ್ಲಿ ತನ್ನ ಮೊದಲ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಇವಿ ಕಾರು ಮಾದರಿಯನ್ನು ರೂ. 10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ಇದು ಪೆಟ್ರೋಲ್ ಮಾದರಿಗಳಿಗೆ ಪರ್ಯಾಯವಾಗಿ ಉತ್ತಮವಾಗಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಭವಿಷ್ಯದಲ್ಲಿ ವಿವಿಧ ಕಾರು ಮಾದರಿಗಳಲ್ಲಿ ಎಲೆಕ್ಟ್ರಿಕ್ ವರ್ಷನ್ ರಸ್ತೆಗಿಳಿಯಲಿವೆ.