ADAS ಸೇರಿದಂತೆ ಭರ್ಜರಿ ಫೀಚರ್ಸ್ ಹೊಂದಿರಲಿದೆ ಕಿಯಾ ಸೊನೆಟ್ ಫೇಸ್‌ಲಿಫ್ಟ್
ಕಿಯಾ ಇಂಡಿಯಾ ಕಂಪನಿಯು ತನ್ನ ಸೊನೆಟ್ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯು ಹಲವಾರು ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.
ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಿಯಾ ಇಂಡಿಯಾ (Kia India) ಕಂಪನಿಯು ತನ್ನ ನವೀಕೃತ ಸೊನೆಟ್ ಫೇಸ್‌ಲಿಫ್ಟ್ ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಸೊನೆಟ್ ಕಾರಿನ ಮೂಲಕ ಈಗಾಗಲೇ ಭಾರೀ ಬೇಡಿಕೆ ಪಡೆದುಕೊಂಡಿರುವ ಕಿಯಾ ಕಂಪನಿಯು ಇದೀಗ ಫೇಸ್‌ಲಿಫ್ಟ್ ಮಾದರಿಯ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಇದು ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಿಗೆ ಪೈಪೋಟಿಯಾಗಿ ಹಲವಾರು ಹೊಸ ಫೀಚರ್ಸ್ ಮತ್ತು ಸ್ಪೋರ್ಟಿಯಾಗಿ ಮರುವಿನ್ಯಾಸ ಪಡೆದುಕೊಂಡಿದೆ.
ಜಿಟಿ ಲೈನ್ ಮತ್ತು ಹೆಚ್‌ಟಿ ಲೈನ್ ವೆರಿಯೆಂಟ್‌ಗಳನ್ನು ಹೊಂದಿರುವ ಸೊನೆಟ್ ಕಾರು ಭಾರತದಲ್ಲಿ ಇದುವರೆಗೆ ಸುಮಾರು 3 ಲಕ್ಷಕ್ಕೂ ಹೆಚ್ಚು ಯುನಿಟ್ ಗಳ ಮಾರಾಟ ದಾಖಲೆ ಹೊಂದಿದ್ದು, ಈ ಬಾರಿ ಹೊಸ ಮಾದರಿಯೊಂದಿಗೆ ಮತ್ತಷ್ಟು ಸ್ಪೋರ್ಟಿಯಾಗಿರುವ ಫ್ರಂಟ್ ಗ್ರಿಲ್, ಮರುವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್ ಕನ್ಸೊಲ್, ಮರುವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್ ಲ್ಯಾಂಪ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಹಾಗೆಯೇ ಹೊಸ ಕಾರಿನ ಒಳಾಂಗಣದಲ್ಲೂ ಸಾಕಷ್ಟು ಬದಲಾವಣೆ ಪರಿಚಯಿಸಲಾಗಿದ್ದು, ಮರುವಿನ್ಯಾಸಗೊಳಿಸಲಾದ ಡ್ಯಾಶ್ ಬೋರ್ಡ್, ಸ್ಪೋರ್ಟಿಯಾಗಿರುವ ಆಸನಗಳು, ದೊಡ್ಡದಾದ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಹೊಸ ಫೀಚರ್ಸ್ ಹೊಂದಿರುವ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿರಲಿದೆ. ಈ ಮೂಲಕ ಕಾರು ಪ್ರಯಾಣವನ್ನು ಮತ್ತಷ್ಟು ಅರಾಮದಾಯಕಗೊಳಿಸುವ ಹೊಸ ಕಾರು ಪ್ರತಿಸ್ಪರ್ಧಿ ಗ್ರಾಹಕರನ್ನು ಸೆಳೆಯಲಿದೆ.
ಹೊಸ ಕಾರಿನಲ್ಲಿ ಮತ್ತೊಂದು ಮಹತ್ವದ ಬದಲಾವಣೆಯೆಂದರೆ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಸೇರಿದಂತೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯವನ್ನು ಜೋಡಣೆ ಮಾಡಲಾಗುತ್ತಿದೆ. ಹೊಸ ಎಡಿಎಎಸ್ ಸುರಕ್ಷಾ ಸೌಲಭ್ಯವನ್ನು ಕಿಯಾ ಕಂಪನಿಯು ಸೊನೆಟ್ ಕಾರಿನ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ನೀಡಬಹುದಾಗಿದೆ. ಕಾರು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡುವ ಎಡಿಎಎಸ್ ಸೌಲಭ್ಯವು ಇತ್ತೀಚೆಗೆ ಹಲವಾರು ಐಷಾರಾಮಿ ಮತ್ತು ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಇದೀಗ ಕಿಯಾ ಕಂಪನಿಯು ಸಹ ಸೊನೆಟ್ ಫೇಸ್‌ಲಿಫ್ಟ್ ಮಾದರಿಯಲ್ಲಿ ಜೋಡಣೆ ಮಾಡುತ್ತಿದೆ.
ಎಡಿಎಎಸ್ ಸೌಲಭ್ಯವನ್ನು ಹ್ಯುಂಡೈ ಕಂಪನಿಯು ಈಗಾಗಲೇ ನವೀಕೃತ ವೆನ್ಯೂ ಕಾರಿನ ಟಾಪ್ ಎಂಡ್ ವೆರಿಯೆಂಟ್ ನಲ್ಲಿ ನೀಡಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ ಕಿಯಾ ಸಹ ಸೊನೆಟ್ ಕಾರಿನಲ್ಲಿ ಜೋಡಣೆ ಮಾಡುತ್ತಿದೆ. ಹೊಸ ಸೇಫ್ಟಿ ಫೀಚರ್ಸ್ ಸೆನ್ಸಾರ್ ಮತ್ತು ರಡಾರ್ ಮೇಲೆ ಕಾರ್ಯನಿರ್ವಹಿಸಲಿದ್ದು, ಇದು ಚಾಲಕನ ಗಮನಕ್ಕೆ ಬಾರದೆ ಆಗಬಹುದಾದ ಅಪಘಾತಗಳನ್ನು ಎಚ್ಚರಿಸುವ ಮೂಲಕ ಅನಾಹುತಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!
ಇನ್ನು ಹೊಸ ಕಾರಿನ ಎಂಜಿನ್ ಆಯ್ಕೆಯನ್ನು ಪ್ರಸ್ತುತ ಮಾದರಿಯಲ್ಲಿರುವಂತೆಯೇ ಮುಂದುವರಿಸಬಹುದಾಗಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ 1.2 ಲೀಟರ್ ಎನ್ಎ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ. ಹೊಸ ಎಂಜಿನ್ ಆಯ್ಕೆಯಲ್ಲಿ ಬಿಎಸ್ 6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಅಳವಡಿಸಲಾಗಿದ್ದು, ಇದು ಅತಿ ಕಡಿಮೆ ಮಾಲಿನ್ಯ ಹೊರಸೂವಿಕೆಯೊಂದಿಗೆ ಪರಿಸರ ಸ್ನೇಹಿಯಾಗಿದೆ ಎನ್ನಬಹುದು. ಇದರೊಂದಿಗೆ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ತುಸು ದುಬಾರಿಯಾಗಬಹುದಾಗಿದ್ದು, ಎಡಿಎಎಸ್ ಫೀಚರ್ಸ್ ಹೊಂದಿರುವ ಮಾದರಿಯು ಸುಮಾರು ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದೆ ಎನ್ನಬಹುದು.