ಹೊಸ ಕಾರುಗಳ ಮೇಲೆ ಐತಿಹಾಸಿಕ ವಾರಂಟಿ ಘೋಷಿಸಿದ ಮಾರುತಿ ಸುಜುಕಿ

|

Updated on: Jul 09, 2024 | 9:43 PM

ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಕಾರುಗಳ ಖರೀದಿ ಮೇಲೆ ಐತಿಹಾಸಿಕ ವಾರಂಟಿಗಳನ್ನು ಘೋಷಣೆ ಮಾಡಿದೆ.

ಹೊಸ ಕಾರುಗಳ ಮೇಲೆ ಐತಿಹಾಸಿಕ ವಾರಂಟಿ ಘೋಷಿಸಿದ ಮಾರುತಿ ಸುಜುಕಿ
ಮಾರುತಿ ಸುಜುಕಿ ಕಾರುಗಳು
Follow us on

ದೇಶದ ಅಗ್ರ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಹೊಸ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ಗಳನ್ನು ನೀಡುತ್ತಿದ್ದು, ಇನ್ಮುಂದೆ ಹೊಸ ಕಾರು ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೂ ಅನ್ವಯಿಸುವಂತೆ ಹೊಸ ಸ್ಟ್ಯಾಂಡರ್ಡ್ ವಾರಂಟಿ ಯೋಜನೆಯನ್ನು ಪ್ರಕಟಿಸಿದೆ. ಈ ಹಿಂದೆ ಪ್ರತಿಯೊಂದು ಕಾರಿನ ಮೇಲೂ ನೀಡಲಾಗುತ್ತಿದ್ದ 2 ವರ್ಷ ಅಥವಾ 40 ಸಾವಿರ ಕಿ.ಮೀ ಗಳ ವಾರಂಟಿಯನ್ನು ಇದೀಗ 3 ವರ್ಷ ಅಥವಾ 1 ಲಕ್ಷ ಕಿ.ಮೀ ಗೆ ವಿಸ್ತರಿಸಲಾಗಿದೆ.

3 ವರ್ಷ ಅಥವಾ 1 ಲಕ್ಷ ಕಿ.ಮೀ ವಾರಂಟಿಯು ಇದೀಗ ಮಾರುತಿ ಸುಜುಕಿ ನಿರ್ಮಾಣದ ಪ್ರತಿಯೊಂದು ಕಾರು ಮಾದರಿಗೂ ಇಂದಿನಿಂದಲೇ ಅನ್ವಯಿಸುವಂತೆ ಜಾರಿಗೆ ತರಲಾಗಿದ್ದು, ಹೊಸ ಕಾರು ಉತ್ಪನ್ನಗಳಿಗೆ ಇದೀಗ ಮತ್ತಷ್ಟು ಸುರಕ್ಷತೆ ದೊರೆಯಲಿದೆ. ಈ ಮೂಲಕ ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿದ್ದು, ಟೊಯೊಟಾ ಕಾರುಗಳಿಗೆ ಸಮವಾಗಿ ಹೊಸ ವಾರಂಟಿಗಳನ್ನು ನೀಡುತ್ತಿದೆ.

ಮಾರುತಿ ಸುಜುಕಿ ಕಂಪನಿಯು ಸದ್ಯ ಎರಡು ಮಾದರಿಗಳಲ್ಲಿ ಹೊಸ ಕಾರುಗಳನ್ನು ಮಾರಾಟಮಾಡುತ್ತಿದ್ದು, ಸಾಮಾನ್ಯ ಕಾರುಗಳನ್ನು ಅರೆನಾ ಡೀಲರ್ಸ್ ಗಳ ಮೂಲಕ ಮತ್ತು ಪ್ರೀಮಿಯಂ ಕಾರುಗಳನ್ನು ನೆಕ್ಸಾ ಡೀಲರ್ಸ್ ಗಳ ಮೂಲಕ ಮಾರಾಟ ಮಾಡುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಟ್ಟು 17 ಕಾರು ಮಾದರಿಗಳನ್ನು ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಹೊಸ ವಾರಂಟಿ ಯೋಜನೆ ಮೂಲಕ ಪ್ರತಿಸ್ಪರ್ಧಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಹೊಸ ಸ್ಟ್ಯಾಂಡರ್ಡ್ ವಾರಂಟಿ ಯೋಜನೆಯ ಜೊತೆಗೆ ಮಾರುತಿ ಸುಜುಕಿ ಕಂಪನಿಯು ಆಸಕ್ತ ಗ್ರಾಹಕರಿಗೆ ಹೆಚ್ಚುವರಿ ಮೊತ್ತದೊಂದಿಗೆ ಹೊಸದಾಗಿ 6 ವರ್ಷಗಳು ಅಥವಾ 1.6 ಲಕ್ಷ ಕಿ.ಮೀ ವಿಸ್ತರಿತ ವಾರಂಟಿ ಸೌಲಭ್ಯವನ್ನು ನೀಡುತ್ತಿದೆ. ಇದರೊಂದಿಗೆ ಈ ಹಿಂದಿನ 4 ವರ್ಷಗಳು ಅಥವಾ 1.2 ಲಕ್ಷ ಕಿ.ಮೀ ವಿಸ್ತರಿತ ವಾರಂಟಿಯನ್ನು ಇದೀಗ 5 ವರ್ಷಗಳು ಅಥವಾ 1.4 ಲಕ್ಷ ಕಿ.ಮೀ ಗಳಿಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ಪ್ರೇರಿತ ಬಜಾಜ್ ಫ್ರೀಡಂ 125 ಸಿಎನ್​ಜಿ ಬೈಕ್ ವಿಶೇಷತೆಗಳಿವು!

ಇನ್ನು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಿರುವ ಮಾರುತಿ ಸುಜುಕಿ ಕಂಪನಿಯು ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಮೂಲಕ ಗ್ರಾಹಕರ ವಿಶ್ವಾಸ ಗಳಿಸುತ್ತಿದ್ದು, ಹೊಸ ಕಾರು ಉತ್ಪನ್ನಗಳ ಮೂಲಕ ಹೊಸ ಸಂಚಲನ ಮೂಡಿಸುತ್ತಿದೆ. ಡೀಸೆಲ್ ಕಾರುಗಳಿಗೆ ಸಂಪೂರ್ಣವಾಗಿ ಗುಡ್ ಬೈ ಹೇಳುವ ಪೆಟ್ರೋಲ್, ಸಿಎನ್ ಜಿ ಮತ್ತು ಹೈಬ್ರಿಡ್ ಕಾರುಗಳ ಮೇಲೆ ಹೆಚ್ಚಿನ ಗಮನಹರಿಸಿದೆ.

Published On - 9:39 pm, Tue, 9 July 24