ಎಂಜಿ ಮೋಟಾರ್ ನಿರ್ಮಾಣದ ಹೊಸ ಕಾಮೆಟ್ ಇವಿ ಬಿಡುಗಡೆ ಮಾಹಿತಿ ಬಹಿರಂಗ
ಭಾರತದಲ್ಲಿ ವಿವಿಧ ಕಾರು ಮಾದರಿಗಳ ಮೂಲಕ ಉತ್ತಮ ಬೇಡಿಕೆ ಹೊಂದಿರುವ ಎಂಜಿ ಮೋಟಾರ್ ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಕಾಮೆಟ್ ಇವಿ ಕಾರನ್ನ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಈ ತಿಂಗಳಾಂತ್ಯಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್(MG Motor) ಕಂಪನಿಯು ಶೀಘ್ರದಲ್ಲಿ ಮತ್ತಷ್ಟು ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಜೆಡ್ಎಸ್ ಇವಿ ಕಾರಿನ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿರುವ ಎಂಜಿ ಕಂಪನಿ ಈ ಬಾರಿ ಕಾಮೆಟ್(Comet) ಮೈಕ್ರೊ ಇವಿ ಬಿಡುಗಡೆಯ ಯೋಜನೆಯಲ್ಲಿದೆ. ಪರ್ಸನಲ್ ಮೊಲಿಬಿಟಿ ಉದ್ದೇಶಕ್ಕಾಗಿ ಹೊಸ ಇವಿ ಕಾರು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರನ್ನು ಇದೇ ತಿಂಗಳು 19ರಂದು ಅಧಿಕೃತವಾಗಿ ಅನಾವರಣಗೊಳಿಸಲಿದೆ.
ಜೆಡ್ಎಸ್ ಇವಿ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಬಿಡುಗಡೆಯ ನಂತರ ಎಂಜಿ ಕಂಪನಿಯು ಇದೀಗ ಬಜೆಟ್ ಬೆಲೆಯ ಕಾಮೆಟ್ ಇವಿ ಕಾರು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರನ್ನ ಚೀನಾದಲ್ಲಿರುವ ವುಲಿಂಗ್ ಏರ್ ಒನ್ ಕಾರು ಆಧರಿಸಿ ನಿರ್ಮಾಣಗೊಳಿಸಿದೆ. ವುಲಿಂಗ್ ಮೋಟಾರ್ ಸದ್ಯ ಚೈನಾ ಸೇರಿದಂತೆ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಇದು ಸೈಕ್ ಕಂಪನಿಯೊಂದಿಗೆ ಜಂಟಿ ಕಾರ್ಯಾಚರಣೆ ಹೊಂದಿದೆ. ಹಾಗೆಯೇ ಸೈಕ್ ಕಂಪನಿಯೊಂದಿಗೆ ಎಂಜಿ ಮೋಟಾರ್ ಕೂಡಾ ಜಂಟಿ ಕಾರ್ಯಾಚರಣೆ ಹೊಂದಿದ್ದು, ಈ ಹಿನ್ನಲೆಯಲ್ಲಿ ಸಹಭಾಗಿತ್ವ ಯೋಜನೆ ಅಡಿ ಹೊಸ ಕಾಮೆಟ್ ಇವಿ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ: ರೂ.10 ಲಕ್ಷಕ್ಕೆ ಖರೀದಿಗೆ ಲಭ್ಯವಿರುವ ಬೆಸ್ಟ್ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!
ಹೊಸ ಕಾಮೆಟ್ ಇವಿ ಕಾರು ಬಿಡುಗಡೆಗಾಗಿ ಎಂಜಿ ಮೋಟಾರ್ ಕಂಪನಿ ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಿದ್ದು, ಹೊಸ ಇವಿ ಕಾರನ್ನ ಪರ್ಸನಲ್ ಮೊಬಿಲಿಟಿ ಉದ್ದೇಶಕ್ಕಾಗಿ ವಿಶೇಷವಾಗಿ ನಿರ್ಮಾಣಗೊಳಿಸಲಾಗಿದೆ. ಇದು ಸಣ್ಣ ಗಾತ್ರದ ವಿನ್ಯಾಸದೊಂದಿಗೆ ಗಮನಸೆಳೆಯಲಿದ್ದು, ಇದು 2.1 ಮೀಟರ್ ವ್ಹೀಲ್ ಬೆಸ್ ನೊಂದಿಗೆ ತ್ರಿ ಡೋರ್ ವೈಶಿಷ್ಟ್ಯತೆ ಹೊಂದಿದ್ದು, ಒಟ್ಟು 2.9 ಮೀಟರ್ ಉದ್ದಳತೆ ಹೊಂದಿದೆ. ಹೀಗಾಗಿ ಇದು ಪ್ರಸ್ತುತ ಮಾರುಕಟ್ಟೆಯಲ್ಲಿನ ಅತ್ಯಂತ ಚಿಕ್ಕ ಕಾರು ಮಾದರಿಯಾಗಿರಲಿದ್ದು, ಈ ಮೂಲಕ ಪ್ರತ್ಯೇಕ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಹೊಂದಿರುವ ಹೊಸ ಕಾರು ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಅತ್ಯುತ್ತಮವಾಗಿರಲಿದೆ. ಜೊತೆಗೆ ಇದು ತಂತ್ರಜ್ಞಾನ ಸೌಲಭ್ಯದಲ್ಲೂ ಗಮನಸೆಳೆಯಲಿದ್ದು, ಈ ಕಾರು ಭಾರತದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಳ್ಳಲಿದೆ.
ಇದನ್ನೂ ಓದಿ: ಬಜೆಟ್ ಬೆಲೆಯ ಬೆಸ್ಟ್ ಸಿಎನ್ ಜಿ ಕಾರುಗಳಿವು!
ಇನ್ನು ಹೊಸ ಕಾರಿನಲ್ಲಿ 20 ಕೆವಿಹೆಚ್ ಅಥವಾ 25 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಬಹುದಾಗಿದ್ದು, ಇದರೊಂದಿಗೆ ಹೊಸ ಇವಿ ಕಾರು ಪ್ರತಿ ಚಾರ್ಜ್ ಗೆ 200 ಕಿ.ಮೀ ರೇಂಜ್ ಹೊಂದಿರಬಹುದಾಗಿದೆ. ಹೊಸ ಕಾರನ್ನ ಎಂಜಿ ಕಂಪನಿಯು ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಪಡಿಸಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 5 ಲಕ್ಷದಿಂದ ರೂ. 7 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ. ಹಾಗೆಯೇ ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದ್ದು, ಅನಾವರಣ ಸಂದರ್ಭದಲ್ಲಿ ಹೊಸ ಕಾರಿನ ಮತ್ತಷ್ಟು ಮಾಹಿತಿ ಬಹಿರಂಗವಾಗಲಿದೆ.
Published On - 9:16 pm, Tue, 11 April 23