ಎಂಜಿ ಮೋಟಾರ್ ಎಸ್‌ಯುವಿ ಕಾರುಗಳ ಮೇಲೆ ಭರ್ಜರಿ ಇಯರ್ ಎಂಡ್ ಆಫರ್
ಎಂಜಿ ಮೋಟಾರ್ ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.
ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್ (MG Motor) ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಹೆಕ್ಟರ್, ಹೆಕ್ಟರ್ ಪ್ಲಸ್, ಗ್ಲೊಸ್ಟರ್, ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ಮೇಲೆ ವರ್ಷಾಂತ್ಯದ ಆಫರ್ ಘೋಷಣೆ ಮಾಡಿದೆ. ಹೊಸ ಆಫರ್ ಗಳಲ್ಲಿ ಎಂಜಿ ಕಂಪನಿಯು ಎಕ್ಸ್ ಚೆಂಜ್ ಆಫರ್, ಕ್ಯಾಶ್ ಡಿಸ್ಕೌಂಟ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಹೆಚ್ಚಿನ ಉಳಿತಾಯಕ್ಕೆ ಇದು ಸಹಕಾರಿಯಾಗಲಿದೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಎಂಜಿ ಮೋಟಾರ್ ಕಂಪನಿಯು ಕಾಮೆಟ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರಿನ ಮೇಲೆ ರೂ. 65 ಸಾವಿರ ಮೌಲ್ಯದ ಆಫರ್ ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಗಳು ಅನ್ವಯವಾಗಲಿವೆ. ಸದ್ಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಕಾಮೆಟ್ ಇವಿ ಕಾರು ಗಾತ್ರದಲ್ಲಿ ಚಿಕ್ಕದಾದರೂ ಹಲವಾರು ಪ್ರೀಮಿಯಂ ಫೀಚರ್ಸ್ ಮತ್ತು ಉತ್ತಮ ಚಾಲನಾ ವೈಶಿಷ್ಟ್ಯತೆಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. 17.3kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾಮೆಟ್ ಇವಿ ಕಾರು ಪ್ರತಿ ಚಾರ್ಜ್ ಗೆ ಗರಿಷ್ಠ 230 ಕಿ.ಮೀ ಮೈಲೇಜ್ ನೀಡುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 7.98 ಲಕ್ಷದಿಂದ ರೂ. 9.98 ಲಕ್ಷ ಬೆಲೆ ಹೊಂದಿದೆ.
ಹೊಸ ಆಫರ್ ಗಳಲ್ಲಿ ಎಂಜಿ ಕಂಪನಿಯು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ ವಿವಿಧ ವೆರಿಯೆಂಟ್ ಗಳ ಮೇಲೆ ರೂ. 1 ಲಕ್ಷ ಇಯರ್ ಎಂಡ್ ಆಫರ್ ನೀಡುತ್ತಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್ ಮತ್ತು ಎಕ್ಸ್ ಚೆಂಜ್ ಆಫರ್ ಗಳನ್ನು ಒಳಗೊಂಡಿದೆ. ಹೆಕ್ಟರ್ ಮತ್ತು ಪ್ಲಸ್ ಕಾರುಗಳು ತಾಂತ್ರಿಕವಾಗಿ ಹಲವಾರು ಫೀಚರ್ಸ್ ಗಳನ್ನು ಎರವಲು ಪಡೆದುಕೊಂಡಿದ್ದು, ಕ್ರಮವಾಗಿ ಇವು 5 ಸೀಟರ್ ಮತ್ತು 7 ಸೀಟರ್ ಆಯ್ಕೆ ಹೊಂದಿವೆ. ಹೆಕ್ಟರ್ ಮತ್ತು ಪ್ಲಸ್ ಕಾರುಗಳು ಎಕ್ಸ್ ಶೋರೂಂ ಪ್ರಕಾರ ಸದ್ಯ ರೂ. 15 ಲಕ್ಷದಿಂದ ರೂ. 22.73 ಲಕ್ಷ ಬೆಲೆ ಹೊಂದಿವೆ.
ಇದನ್ನೂ ಓದಿ: ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಪುತ್ರಿ
ಇನ್ನು ಎಂಜಿ ಮೋಟಾರ್ ಕಂಪನಿಯು ಹೊಸ ಆಫರ್ ಗಳಲ್ಲಿ ಫಾರ್ಚೂನರ್ ಪ್ರತಿಸ್ಪರ್ಧಿಯಾಗಿರುವ ಗ್ಲೊಸ್ಟರ್ ಜೊತೆಗೆ ಆಸ್ಟರ್, ಜೆಡ್ಎಸ್ ಇವಿ ಕಾರುಗಳ ಖರೀದಿ ಮೇಲೆ ರೂ. 1.50 ಲಕ್ಷ ಮೌಲ್ಯದ ಆಫರ್ ನೀಡುತ್ತಿದ್ದು, ಇದರಲ್ಲಿ ರೂ. 1 ಲಕ್ಷ ಕ್ಯಾಶ್ ಬ್ಯಾಕ್ ಮತ್ತು ರೂ. 50 ಸಾವಿರ ಎಕ್ಸ್ ಚೆಂಜ್ ಆಫರ್ ಪಡೆಯಬಹುದಾಗಿದೆ. ಈ ಮೂಲಕ ಎಂಜಿ ಕಂಪನಿಯು ವರ್ಷಾಂತ್ಯದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ತನ್ನ ಸಂಭಾವ್ಯ ಗ್ರಾಹಕರಿಗೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ್ದು, ಆಫರ್ ಜೊತೆಗೆ ಹೊಸ ವರ್ಷದಿಂದ ಬೆಲೆ ಏರಿಕೆಯ ಸುಳಿವು ನೀಡಿದೆ.