ಸಾಂಪ್ರದಾಯಿಕ ಇಂಧನಗಳ ಮೇಲೆ ಅವಲಂಬನೆ ತಗ್ಗಿಸಲು ಮತ್ತು ಮಾಲಿನ್ಯ ತಡೆಗಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮಾಲಿನ್ಯ ಉತ್ಪಾದನೆಯಲ್ಲಿ ದೊಡ್ಡ ಪಾಲು ಹೊಂದಿರುವ ಡೀಸೆಲ್ ವಾಹನಗಳನ್ನು ಬಳಕೆಯನ್ನು ನಿಯಂತ್ರಿಸಲು ಹೆಚ್ಚುವರಿ ತೆರಿಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಹೊಸ ತೆರಿಗೆ ಪ್ರಸ್ತಾಪದ ನಂತರ ವಾಹನ ತಯಾರಕರು ಮತ್ತು ಸಾರ್ವಜನಿಕರ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಯಾವುದೇ ಯೋಜನೆ ಇಲ್ಲ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಸಂಸತ್ ಅಧಿವೇಶದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಲಿಖಿತ ಉತ್ತರದ ಮೂಲಕ ಸ್ಪಷ್ಟಪಡಿಸಿರುವ ಕೇಂದ್ರ ಸಾರಿಗೆ ಇಲಾಲೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಡೀಸೆಲ್ ವಾಹನಗಳ ಮೇಲೆ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸುವ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!
ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ್ದ ನಿತಿನ್ ಗಡ್ಕರಿ ಅವರು, ಭವಿಷ್ಯ ವಾಹನಗಳು ಪರಿಸರ ಸ್ನೇಹಿ ಇಂಧನಗಳಿಗೆ ಪರಿವರ್ತನೆಯಾಗದಿದ್ದರೆ ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ 10 ಪ್ರತಿಶತ ತೆರಿಗೆಯನ್ನು ವಿಧಿಸಲು ಹಣಕಾಸು ಸಚಿವರಿಗೆ ಮನವಿ ಮಾಡುವುದಾಗಿ ದೇಶೀಯ ಮತ್ತು ವಿದೇಶಿ ವಾಹನ ತಯಾರಕರ ಕಂಪನಿಗಳು ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಹೊಸ ತೆರಿಗೆ ಪ್ರಸ್ತಾಪದ ಬಗೆಗೆ ಮಾತನಾಡಿರುವ ಕೇಂದ್ರ ಸಚಿವರು ಪ್ರಸ್ತುತ ಅಂತಹ ಯಾವುದೇ ಪ್ರಸ್ತಾಪವು ಸಕ್ರಿಯ ಪರಿಗಣನೆಯಲ್ಲಿಲ್ಲ ಎಂದಿದ್ದಾರೆ.
ಡೀಸೆಲ್ ವಾಹನಗಳ ಮೇಲೆ ವಿಧಿಸಲು ನಿರ್ಧರಿಸಲಾಗಿದ್ದ ಹೆಚ್ಚುವರಿ 10 ಪ್ರತಿಶತ ತೆರಿಗೆ ಪ್ರಸ್ತಾಪವು ವಾಹನ ತಯಾರಕರು ಮತ್ತು ಸಾರ್ವಜನಿಕರಲ್ಲಿ ಕಳವಳವನ್ನು ಹೆಚ್ಚಿಸಿದ್ದವು. ಏಕೆಂದರೆ ಸದ್ಯ ಭಾರತವು ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿ ಮುಂಚೂಣಿಯಲ್ಲಿದ್ದು, ಡೀಸೆಲ್ ಎಂಜಿನ್‌ಗಳಿಂದ ಚಾಲಿತವಾಗುವ ವಾಹನಗಳ ಮಾರಾಟವು ಗಣನೀಯವಾಗಿದೆ. ಅದಾಗ್ಯೂ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಡೀಸೆಲ್ ಕಾರುಗಳ ಮಾರಾಟ ಪಾಲು ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಇಳಿಕೆಯಾಗಿದ್ದು, ಸುಮಾರು 18 ಪ್ರತಿಶತದಷ್ಟು ಕುಸಿತ ಕಂಡಿದೆ. ಆದರೆ ಡೀಸೆಲ್ ಎಂಜಿನ್ ಹೊಂದಿರುವ ವಾಣಿಜ್ಯ ವಾಹನಗಳ ಮಾರಾಟವು ಗಮನಾರ್ಹವಾಗಿ ಹೆಚ್ಚಳವಾಗಿದ್ದು, ದೇಶದಲ್ಲಿ ಬಳಕೆಯಾಗುವ 80 ಪ್ರತಿಶತದಷ್ಟು ಡೀಸೆಲ್ ಅನ್ನು ಸಾರಿಗೆ ವಲಯದಲ್ಲಿಯೇ ಬಳಸಲಾಗುತ್ತದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು..
ಈ ಹಿನ್ನಲೆಯಲ್ಲಿ ಸಾರಿಗೆ ವಲಯದಲ್ಲಿನ ಡೀಸೆಲ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರಚಿಸಿದ ಸಮಿತಿಯು 2027 ರಿಂದ 1 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿನ ಡೀಸೆಲ್ ಚಾಲಿತ ನಾಲ್ಕು-ಚಕ್ರ ವಾಹನಗಳ ಮಾರಾಟದ ಮೇಲೆ ನಿಷೇಧ ಹೇರಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಡೀಸೆಲ್ ವಾಹನಗಳ ಬಳಕೆಯನ್ನು ತಗ್ಗಿಸಲು ಹಂತ-ಹಂತವಾಗಿ ನಿಷೇಧ ಹೇರುತ್ತಿದ್ದು, ಡೀಸೆಲ್ ಗೆ ಪರ್ಯಾಯವಾಗಿ ಹಸಿರು ಇಂಧನ ಚಾಲಿತ ವಾಹನಗಳತ್ತ ಗಮನಹರಿಸುತ್ತಿದೆ.